ದಾವಣಗೆರೆ: ರಾಜ್ಯ ಸರ್ಕಾರವು ಹಳೆಯ ಶೇ. 50ರಷ್ಟು ಮೀಸಲಾತಿ ಅನ್ವಯ ಸುಮಾರು 56,432 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ತೀರ್ಮಾನವನ್ನು ದಾವಣಗೆರೆಯ ಜಿಲ್ಲಾ ಛಲವಾದಿ ಮಹಾಸಭಾ ಹಾರ್ದಿಕವಾಗಿ ಸ್ವಾಗತಿಸಿದೆ.
ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಜಿಲ್ಲಾಧ್ಯಕ್ಷ ಎನ್. ರುದ್ರಮುನಿ, ನಿರುದ್ಯೋಗಿ ಯುವಕರ ಹಿತದೃಷ್ಟಿಯಿಂದ ಸರ್ಕಾರದ ಈ ಕ್ರಮವು ಅತ್ಯಂತ ಶ್ಲಾಘನೀಯ ಎಂದು ಬಣ್ಣಿಸಿದರು.
ನೇಮಕಾತಿ ವಿಳಂಬಕ್ಕೆ ಕೋರ್ಟ್ ತಡೆಯಾಜ್ಞೆ ಕಾರಣ
ಒಳ ಮೀಸಲಾತಿ ವಿಚಾರವಾಗಿ ಕೆಲವು ಸಮುದಾಯಗಳು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದವು. ಇದರಿಂದಾಗಿ ನೇಮಕಾತಿ ಪ್ರಕ್ರಿಯೆಗಳು ಸ್ಥಗಿತಗೊಂಡು, ಉದ್ಯೋಗಾಕಾಂಕ್ಷಿಗಳ ವಯೋಮಿತಿ ಮೀರುತ್ತಿತ್ತು. ಈ ಗಂಭೀರ ಸಮಸ್ಯೆಯನ್ನು ಅರಿತ ಸರ್ಕಾರವು ಸದ್ಯಕ್ಕೆ ಲಭ್ಯವಿರುವ ಹಳೆಯ ಮೀಸಲಾತಿ ಅನ್ವಯವೇ ಪ್ರಕ್ರಿಯೆ ಆರಂಭಿಸಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಅವರು ತಿಳಿಸಿದರು.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಸಚಿವರ ತೇಜೋವಧೆ ಖಂಡನೀಯ
ಸಮಾಜದ ಕೆಲವು ಸಚಿವರು ಮತ್ತು ಧಾರ್ಮಿಕ ಗುರುಗಳನ್ನು ಗುರಿಯಾಗಿಸಿಕೊಂಡು ಕೆಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕವಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ಮಹಾಸಭಾ ತೀವ್ರವಾಗಿ ಖಂಡಿಸಿದೆ. “ನಮ್ಮ ಸಮಾಜದ ನಾಯಕರನ್ನು ಇಲ್ಲಸಲ್ಲದ ಆರೋಪಗಳ ಮೂಲಕ ವಿಲನ್‌ಗಳಂತೆ ಬಿಂಬಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ,” ಎಂದು ರುದ್ರಮುನಿ ಅಸಮಾಧಾನ ವ್ಯಕ್ತಪಡಿಸಿದರು.
ಒಳ ಮೀಸಲಾತಿ ವಿರೋಧಿಗಳಲ್ಲ
”ನಾವು ಒಳ ಮೀಸಲಾತಿಯ ವಿರೋಧಿಗಳಲ್ಲ. ಆದರೆ ಆ ಪ್ರಕ್ರಿಯೆಯಲ್ಲಿ ತಾಂತ್ರಿಕ ಕಾರಣಗಳಿಂದ ಯಾರಿಗೂ ಅನ್ಯಾಯವಾಗಬಾರದು ಎಂಬುದು ನಮ್ಮ ಆಶಯ. ಯಾರು ವಂಚಿತರಾಗಬಾರದು ಎಂಬ ಉದ್ದೇಶದಿಂದ ನಾವು ಚರ್ಚಿಸುತ್ತಿದ್ದೇವೆ ಹೊರತು ಮೀಸಲಾತಿಯನ್ನೇ ತಡೆಯುವ ಉದ್ದೇಶ ನಮಗಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ
ಒಂದು ವೇಳೆ ಸಚಿವರ ಅಥವಾ ಸಮಾಜದ ನಾಯಕರ ವಿರುದ್ಧ ಇನ್ನು ಮುಂದೆಯೂ ಅವಹೇಳನಕಾರಿ ಮಾತುಗಳು ಮುಂದುವರಿದರೆ, ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮಹಾಸಭಾ ಎಚ್ಚರಿಸಿದೆ. ಕಾನೂನು ಚೌಕಟ್ಟಿನಲ್ಲಿ ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಲಾಗುವುದು ಎಂದು ತಿಳಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಎಸ್. ಶೇಖರಪ್ಪ, ಎ.ಡಿ. ಕೊಟ್ಟರಬಸಪ್ಪ, ಎಲ್.ಟಿ. ಮಧುಸೂಧನ್, ಜಯಪ್ಪ ಹಾಗೂ ಸಮುದಾಯದ ಇತರ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
