ದಾವಣಗೆರೆ: ಜಿಲ್ಲೆಯ ರಾಜಕೀಯ ಕಣದಲ್ಲಿ ಈಗ ಉಪಚುನಾವಣೆಯ ಕಾವು ಏರಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ, ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಕಾರ್ಯಕರ್ತರ ನಡುವೆ ಭಾರಿ ಗದ್ದಲ ಮತ್ತು ಹೈಡ್ರಾಮಾ ನಡೆದಿದೆ.
ಅಭಿಪ್ರಾಯ ಸಂಗ್ರಹಕ್ಕೆ ಬಂದಿದ್ದ ನಾಯಕರಿಗೆ ಶಾಕ್!
ಕೆಪಿಸಿಸಿ ಸೂಚನೆಯಂತೆ ಅಭ್ಯರ್ಥಿಗಳ ಕುರಿತು ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಲು ರಾಜ್ಯ ನಾಯಕರಾದ ಮಂಜುನಾಥ್ ಭಂಡಾರಿ, ಹೆಚ್.ಎಂ. ರೇವಣ್ಣ ಮತ್ತು ಮಾಜಿ ಸಚಿವ ಹೆಚ್. ಆಂಜನೇಯ ಅವರು ಇಂದು ದಾವಣಗೆರೆಯ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದರು. ಆದರೆ, ಸಭೆ ಆರಂಭವಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರ ನಡುವೆ ಜಟಾಪಟಿ ಶುರುವಾಯಿತು.

ಅಹಿಂದ ವರ್ಸಸ್ ಸಮರ್ಥ್ ಬೆಂಬಲಿಗರ ಫೈಟ್
ಒಂದು ಕಡೆ ಅಲ್ಪಸಂಖ್ಯಾತ ಮುಖಂಡರು ಹಾಗೂ ಯುವ ಕಾರ್ಯಕರ್ತರು ಈ ಬಾರಿ ‘ಅಹಿಂದ’ ವರ್ಗದವರಿಗೆ ಟಿಕೆಟ್ ನೀಡಲೇಬೇಕು ಎಂದು ಪಟ್ಟು ಹಿಡಿದರು. “ನಾವು ಕೇವಲ ಮತ ಹಾಕಲು ಮಾತ್ರ ಸೀಮಿತವೇ?” ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಇನ್ನೊಂದೆಡೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಅವರಿಗೆ ಟಿಕೆಟ್ ನೀಡಬೇಕೆಂದು ಅವರ ಬೆಂಬಲಿಗರು ಘೋಷಣೆಗಳನ್ನು ಕೂಗಿದರು. ಉಭಯ ಬಣಗಳ ನಡುವೆ ವಾಗ್ವಾದ ತಾರಕಕ್ಕೇರಿ ಪರಿಸ್ಥಿತಿ ಕೈಮೀರಿತು.

ಬೇಸರಗೊಂಡು ಹೊರನಡೆದ ಉಸ್ತುವಾರಿಗಳು
ಕಾರ್ಯಕರ್ತರ ಈ ವರ್ತನೆಯಿಂದ ತೀವ್ರ ಅಸಮಾಧಾನಗೊಂಡ ಉಸ್ತುವಾರಿ ಸಮಿತಿ ಸದಸ್ಯರು ಸಭೆಯನ್ನು ಅರ್ಧಕ್ಕೇ ನಿಲ್ಲಿಸಿ ಹೊರನಡೆದರು. “ನಾಯಕರು ನಿಮ್ಮ ಅಭಿಪ್ರಾಯ ಕೇಳಲು ಬಂದಿದ್ದಾರೆಯೇ ಹೊರತು ಗಲಾಟೆ ನೋಡಲು ಅಲ್ಲ” ಎಂದು ಎಚ್ಚರಿಸಿದರೂ ಗದ್ದಲ ನಿಲ್ಲದ ಕಾರಣ, ನಾಯಕರು ಕೇವಲ ಅಭ್ಯರ್ಥಿಗಳ ಪಟ್ಟಿಯನ್ನು ಪಡೆದು ಅಲ್ಲಿಂದ ನಿರ್ಗಮಿಸಿದರು.
ಪೊಲೀಸ್ ಮಧ್ಯಪ್ರವೇಶ
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದಾಗ ಪೊಲೀಸರು ಮಧ್ಯಪ್ರವೇಶಿಸಿ ಕಾರ್ಯಕರ್ತರನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಮುಸ್ಲಿಂ ಮುಖಂಡರು ಮಾತನಾಡಿ, “ಕಾಂಗ್ರೆಸ್ ಪಕ್ಷಕ್ಕೆ ಅಲ್ಪಸಂಖ್ಯಾತರ ಬೆಂಬಲ ದೊಡ್ಡದಿದೆ. ಈ ಬಾರಿ ನಮಗೆ ಅವಕಾಶ ನೀಡದಿದ್ದರೆ ಪಕ್ಷಕ್ಕೆ ಮುಂಬರುವ ದಿನಗಳಲ್ಲಿ ನಷ್ಟ ಉಂಟಾಗುವುದು ಖಚಿತ” ಎಂದು ಎಚ್ಚರಿಕೆ ನೀಡಿದ್ದಾರೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
