ದಾವಣಗೆರೆ ಕಾಂಗ್ರೆಸ್‌ನಲ್ಲಿ ಬಂಡಾಯದ ಕಿಚ್ಚು: ಸಾದಿಕ್ ಪೈಲ್ವಾನ್ ಸ್ವತಂತ್ರ ಸ್ಪರ್ಧೆ ಖಚಿತ; ಕೈ ಪಾಳಯಕ್ಕೆ ತಲೆನೋವಾದ ‘ಪೈಲ್ವಾನ್’ ನಿರ್ಧಾರ!

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ - Sadik Pailwan Congress Rebel Davanagere
— ನಾಮಪತ್ರ ಸಲ್ಲಿಸಲು ಸಜ್ಜಾದ ಸಾದಿಕ್ ಪೈಲ್ವಾನ್: ದಾವಣಗೆರೆ ಕಾಂಗ್ರೆಸ್‌ನಲ್ಲಿ ಬಂಡಾಯದ ಕಿಚ್ಚು.

—Election Update—

ದಾವಣಗೆರೆ: ಜಿಲ್ಲೆಯ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಖಾಡ ಈಗ ರಂಗೇರಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸಾದಿಕ್ ಪೈಲ್ವಾನ್ ಅವರು ಇದೀಗ ಬಂಡಾಯದ ಬಾವುಟ ಹಾರಿಸಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿ ಸಮರ್ ಶಾಮ್ ವಿರುದ್ಧ ಸ್ವತಂತ್ರವಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಪಟ್ಟು ಬಿಡದ ಸಾದಿಕ್ ಪೈಲ್ವಾನ್:

ಕಳೆದ ಕೆಲವು ದಿನಗಳಿಂದ ಟಿಕೆಟ್ ಹಂಚಿಕೆ ವಿಚಾರದಲ್ಲಿ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಈಗ ತೆರೆ ಬಿದ್ದಿದ್ದು, ಹೈಕಮಾಂಡ್ ಸಮರ್ ಶಾಮ್ ಅವರಿಗೆ ಮಣೆ ಹಾಕಿದೆ. ಇದರಿಂದ ತೀವ್ರ ಅಸಮಾಧಾನಗೊಂಡಿರುವ ಸಾದಿಕ್ ಪೈಲ್ವಾನ್, “ಯಾವುದೇ ಕಾರಣಕ್ಕೂ ನಾನು ಚುನಾವಣಾ ರಣರಂಗದಿಂದ ಹಿಂದೆ ಸರಿಯುವ ಮಾತೇ ಇಲ್ಲ” ಎಂದು ಖಡಕ್ ಆಗಿ ಘೋಷಿಸಿದ್ದಾರೆ.

ಅಲ್ಪಸಂಖ್ಯಾತರಿಗೆ ಅನ್ಯಾಯದ ಆರೋಪ:

ಸುದ್ದಿಗಾರರೊಂದಿಗೆ ಮಾತನಾಡಿದ ಸಾದಿಕ್, “ಬೆಂಗಳೂರು ಮತ್ತು ದೆಹಲಿಯ ನಾಯಕರು ಅಲ್ಪಸಂಖ್ಯಾತರಿಗೆ ಹಾಗೂ ಅಹಿಂದ ವರ್ಗದವರಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಕೈ ಕೊಟ್ಟಿದ್ದಾರೆ. 2008ರಲ್ಲೂ ಇಂತಹದೇ ಪರಿಸ್ಥಿತಿ ಇತ್ತು, ಈಗಲೂ ಮುಂದುವರಿಯುತ್ತಿದೆ. ಇದಕ್ಕೆ ಮತದಾರರೇ ಪಾಠ ಕಲಿಸಲಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಶಕ್ತಿ ಪ್ರದರ್ಶನ:

ಈಗಾಗಲೇ ಒಂದು ಸೆಟ್ ನಾಮಪತ್ರ ಸಲ್ಲಿಸಿರುವ ಅವರು, ಸೋಮವಾರ ಸಾವಿರಾರು ಬೆಂಬಲಿಗರೊಂದಿಗೆ ಹಳೆ ಮರ ಜೈ ಭೀಮಾ ನಗರ ವೃತ್ತದಿಂದ ನಗರ ಪಾಲಿಕೆಯವರೆಗೆ ಪಾದಯಾತ್ರೆ ನಡೆಸಲಿದ್ದಾರೆ. ಈ ಮೂಲಕ ಬೃಹತ್ ಶಕ್ತಿ ಪ್ರದರ್ಶನ ನಡೆಸಿ ಅಧಿಕೃತವಾಗಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಹೈಕಮಾಂಡ್ ಆಫರ್ ತಿರಸ್ಕರಿಸಿದ ಪೈಲ್ವಾನ್:

“ನನಗೆ ಎಂಎಲ್‌ಸಿ ಅಥವಾ ಇತರ ಸ್ಥಾನಮಾನ ನೀಡುವ ಆಫರ್ ಹಿಡಿದು ಕೆಲವು ನಾಯಕರು ಫೋನ್ ಮಾಡಿದ್ದರು. ಆದರೆ ನಾನು ಯಾರಿಗೂ ಶರಣಾಗುವ ವ್ಯಕ್ತಿಯಲ್ಲ. ಜನರ ವಿಶ್ವಾಸ ಗಳಿಸಿದ್ದೇನೆ, ಅವರ ಒತ್ತಾಯದ ಮೇರೆಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿಯೇ ತೀರುತ್ತೇನೆ” ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಂಡಾಯವು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದ ಹಿನ್ನಡೆ ತರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Leave a Comment

Home
Web Stories
Instagram
WhatsApp