ದಾವಣಗೆರೆ: “ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಎನ್ನುವ ಪದವೇ ಮರೆತುಹೋಗಿದೆ. ಕೇವಲ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಜನರ ಕಣ್ಣಿಗೆ ಮಣ್ಣೆರಚಲಾಗುತ್ತಿದೆ,” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ನಡೆದ ಉಪಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಒಂದೊಂದಾಗಿ ಬಿಚ್ಚಿಟ್ಟರು.
ತೆರಿಗೆ ಹೆಸರಲ್ಲಿ ಲೂಟಿ
”ಗ್ಯಾರಂಟಿ ಯೋಜನೆಗಳಿಗೆ ಹಣ ಎಲ್ಲಿಂದ ಬರುತ್ತಿದೆ? ಇದು ಯಾರಪ್ಪನ ಮನೆಯ ಹಣವಲ್ಲ. ಜನರ ಮೇಲೆ ದಿನೇ ದಿನೇ ಹೆಚ್ಚಿನ ತೆರಿಗೆಯನ್ನು ಹೇರಿ, ಒಂದು ಕೈಯಿಂದ ಕಿತ್ತುಕೊಂಡು ಇನ್ನೊಂದು ಕೈಯಿಂದ ಕೊಡಲಾಗುತ್ತಿದೆ. ರಾಜ್ಯವು ಆರ್ಥಿಕವಾಗಿ ಸದೃಢವಾಗಿದೆ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು, ಹಾಗಿದ್ದರೆ ಗ್ಯಾರಂಟಿಗಳ ಮೂಲಕ ಜನರನ್ನು ಯಾಕೆ ದೀನರನ್ನಾಗಿ ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದರು.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ದಾವಣಗೆರೆ ಅಭಿವೃದ್ಧಿಗೆ ಕೇಂದ್ರವೇ ಕಾರಣ
ದಾವಣಗೆರೆಯ ಸ್ಮಾರ್ಟ್ ಸಿಟಿ ಯೋಜನೆ ಹಾಗೂ ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾತನಾಡಿದ ಅವರು, “ದಾವಣಗೆರೆ ಇಂದು ಈ ಮಟ್ಟಕ್ಕೆ ಬೆಳೆಯಲು ಕೇಂದ್ರ ಸರ್ಕಾರ ನೀಡಿದ ಅನುದಾನವೇ ಕಾರಣ. ಅಂದಿನ ಸಂಸದ ಸಿದ್ದೇಶ್ವರ ಅವರು ಪ್ರಚಾರ ಪಡೆಯದೆ ಕೇಂದ್ರದಿಂದ ನೂರಾರು ಕೋಟಿ ಹಣ ತಂದು ಅಭಿವೃದ್ಧಿ ಮಾಡಿದ್ದಾರೆ. ಆದರೆ ಇಂದು ಕಾಂಗ್ರೆಸ್ ನಾಯಕರು ಅದನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ,” ಎಂದರು.
ವಿಧಾನಸಭೆಯಲ್ಲಿ ಐಪಿಎಲ್ ಪಾಸ್ ಗದ್ದಲ
ಇತ್ತೀಚೆಗೆ ವಿಧಾನಸಭೆಯಲ್ಲಿ ಐಪಿಎಲ್ ಪಾಸ್ಗಳಿಗಾಗಿ ಶಾಸಕರು ಗದ್ದಲ ಎಬ್ಬಿಸಿದ ವಿಚಾರವನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ, “ಇದು ಈ ಸರ್ಕಾರದ ನಗುಪಾಟಲು. ಹಿಂದೆಂದೂ ಕಂಡರಿಯದ ರೀತಿಯಲ್ಲಿ ಶಾಸಕರು ಕ್ರಿಕೆಟ್ ಪಾಸ್ಗಾಗಿ ಕಿತ್ತಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಈ ಸರ್ಕಾರಕ್ಕೆ ಕಿಂಚಿತ್ತೂ ಮಾನ ಮರ್ಯಾದೆ ಇದೆಯೇ?” ಎಂದು ಟೀಕಿಸಿದರು.
ಮೋದಿ ಸರ್ಕಾರದ ಆಡಳಿತವೇ ಶ್ರೀರಕ್ಷೆ
ಅಂತರಾಷ್ಟ್ರೀಯ ಮಟ್ಟದಲ್ಲಿ ಇರಾನ್-ಇಸ್ರೇಲ್ ಯುದ್ಧದಂತಹ ಪರಿಸ್ಥಿತಿ ಇದ್ದರೂ ಭಾರತದಲ್ಲಿ ಇಂಧನ ಮತ್ತು ಅನಿಲ ದರಗಳನ್ನು ನಿಯಂತ್ರಣದಲ್ಲಿಡಲು ಪ್ರಧಾನಿ ಮೋದಿ ಯಶಸ್ವಿಯಾಗಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಅಲ್ಪ ಜ್ಞಾನದಿಂದ ಕೇಂದ್ರದ ಮೇಲೆ ವಿನಾಕಾರಣ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಉಪಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಸರ್ಕಾರದ ಅಹಂಕಾರಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
