ಚಿತ್ರದುರ್ಗ : ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಮುದಾಯದ ಸಹಭಾಗಿತ್ವ ಬಹು ಮುಖ್ಯವಾಗಿದೆ. ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯದೆ, ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಕಸದ ಗಾಡಿಗೆ ನೀಡುವ ಮೂಲಕ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಅವರು ಕರೆ ನೀಡಿದರು.
ಇಲ್ಲಿನ ಪ್ರಶಾಂತನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಸವನ್ನು ಎಲ್ಲೆಂದರಲ್ಲಿ ಹಾಕಿದರೆ ಅದರಲ್ಲಿ ಟಾಕ್ಸಿಕ್ ಅಂಶ ವಿಷಾಣು ಉತ್ಪತ್ತಿಯಾಗಿ, ದುರ್ವಾಸನೆ ಸೂಸುವುದರ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ನಗರಸಭೆಯಿಂದ ಪ್ರತಿದಿನ ಮನೆ ಬಾಗಿಲಿಗೆ ಕಸದ ಗಾಡಿ ಬರುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೂಗಪ್ಪ ತಿಳಿಸಿದರು.
ಎಲ್ಲೆಲ್ಲೂ ಬಂದಿದೆ ಪ್ಲಾಸ್ಟಿಕ್ ಬಳಕೆ, ಹದಗೆಡುತ್ತಿದೆ ಪರಿಸರ ಕೊಳಚೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಪ್ಲಾಸ್ಟಿಕ್ ನೂರು ವರ್ಷವಾದರೂ ಕೊಳೆಯುವುದಿಲ್ಲ. ಚರಂಡಿಗಳಲ್ಲಿ ಪ್ಲಾಸ್ಟಿಕ್ ಹಾಕುವುದರಿಂದ ನೀರು ಸರಾಗವಾಗಿ ಹರಿಯದೆ ನಿಂತು, ಪರಿಸರ ಕೊಳಚೆಯಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿ, ಕಾಟನ್ ಬಟ್ಟೆಯ ಚೀಲಗಳನ್ನು ಬಳಸಬೇಕು ಎಂದು ಮನವಿ ಮಾಡಿದರು.
ಪರಿಸರ ಇಂಜಿನಿಯರ್ ಜೆ. ಜಾಫರ್ ಅವರು ‘ಘನ ತ್ಯಾಜ್ಯ ನಿರ್ವಹಣೆ 2026’ ರ ಕುರಿತು ಮಾಹಿತಿ ನೀಡಿದರು. ನಾಲ್ಕು ವಿಭಿನ್ನ ಕಲರ್ ಬಕೆಟ್ಗಳನ್ನು ಪ್ರದರ್ಶಿಸಿದ ಅವರು, ಕಸವನ್ನು ಹೇಗೆ ವಿಂಗಡಿಸಬೇಕು ಮತ್ತು ಯಾವ ಬಕೆಟ್ಗೆ ಯಾವ ಕಸವನ್ನು ಹಾಕಿ ಕಸದ ಗಾಡಿಗೆ ನೀಡಬೇಕು ಎಂಬುದನ್ನು ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಜಾಗೃತಿ ಜಾಥಾ: ಬಳಿಕ ಪ್ರಶಾಂತನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾದಲ್ಲಿ ‘ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ’, ‘ಕಸ ವಿಂಗಡಣೆ ನಮ್ಮೆಲ್ಲರ ಜವಾಬ್ದಾರಿ’, ‘ಕಸ ವಿಂಗಡಿಸಿ ಕಸದ ಗಾಡಿಗೆ ಹಾಕಿ’, ರೋಗಮುಕ್ತ ಸಮಾಜಕ್ಕೆ ಕೈಜೋಡಿಸಿ ಎಂಬ ಘೋಷಣೆಗಳ ಮೂಲಕ ಸಮುದಾಯದಲ್ಲಿ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ. ಶ್ರೀನಿವಾಸಮೂರ್ತಿ, ಹಿರಿಯ ಆರೋಗ್ಯ ನಿರೀಕ್ಷಕರಾದ ರುಕ್ಮಿಣಿ, ಬಾಬುರೆಡ್ಡಿ, ಕಿರಿಯ ಆರೋಗ್ಯ ನಿರೀಕ್ಷಕರಾದ ಜಯಪ್ರಕಾಶ್, ಹೀನ ಕೌಸರ್ ಹಾಗೂ ಕಮ್ಯುನಿಟಿ ಮೊಬಲೈಸರ್ಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
📩 ಸುದ್ದಿ ಕಳುಹಿಸಿ
madhayakarnatakalive@gmail.com