ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬ್ಯಾಂಕುಗಳ ಸಹಕಾರ ಅಗತ್ಯ: ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

dr-prabha-mallikarjun-davanagere-bankers-meeting

—Election Update—

ದಾವಣಗೆರೆ: ಶೈಕ್ಷಣಿಕ ಸಾಲ ವಿತರಣೆಯಲ್ಲಿ ಬ್ಯಾಂಕ್‌ ಗಳು ಆದ್ಯತೆ ಮೇಲೆ ಪರಿಗಣಿಸಿ ವಿದ್ಯಾರ್ಥಿಗಳಿಗೆ ಸಾಲ ನೀಡಬೇಕು, ಹಾಗೂ ಸಿಎಸ್‌ಆರ್‌ ಯೋಜನೆಯಡಿ ಬ್ಯಾಂಕ್‌ ಗಳು ಬೇರೆ ಉದ್ದೇಶಕ್ಕೆ ಬಳಸದೆ ಶಾಲೆಗಳ ಅಭಿವೃದ್ಧಿಗೆ ನೀಡುವಂತೆ ದಾವಣಗೆರೆ ಲೋಕಸಭಾ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ಅವರು ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಬ್ಯಾಂಕರ್ಸ್ ಜಿಲ್ಲಾ ಸಲಹೆಗಾರರ ಸಮಿತಿ ಸಭೆ ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶೈಕ್ಷಣಿಕ ಸಾಲ ವಿತರಣೆಯಲ್ಲಿ ಬ್ಯಾಂಕ್‌ ಗಳ ಗಣನೀಯ ಪ್ರಗತಿ ಕಂಡುಬಂದಿದೆ. ಜಿಲ್ಲೆಯಲ್ಲಿ ಈ ವರ್ಷ ಒಟ್ಟು 1533 ಶೈಕ್ಷಣಿಕ ಸಾಲಗಳನ್ನು ಮಂಜೂರು ಮಾಡಲಾಗಿದ್ದು, ಒಟ್ಟು 62.55 ಕೋಟಿ ರೂ. ಸಾಲ ನೀಡಲಾಗಿದೆ. ಪೋಷಕರು ಈ ಹಿಂದೆ ಸಾಲ ಪಡೆದು ಬಾಕಿ ಉಳಿಸಿಕೊಂಡಿದ್ದಾರೆ ಅಥವಾ ಡಿಫಾಲ್ಟರ್ ಆಗಿದ್ದಾರೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನು ನಿರಾಕರಿಸುವಂತಿಲ್ಲ ಎಂದು ಬ್ಯಾಂಕರ್‌ಗಳಿಗೆ ಸೂಚಿಸಿದರು.

ದಾವಣಗೆರೆ ಜಿಲ್ಲೆಯಲ್ಲಿರುವ ಎಲ್ಲ ದ್ವಿತೀಯ ಪಿಯುಸಿ ಮತ್ತು ಪದವಿ ಕಾಲೇಜುಗಳ ಅಂಕಿ ಅಂಶ ಪಡೆದುಕೊಂಡು, ಬ್ಯಾಂಕುಗಳಿಗೆ ನಿರ್ದಿಷ್ಟ ಶಾಲೆಗಳನ್ನು ನಿಯೋಜಿಸಲಾಗುವುದು. ಬ್ಯಾಂಕ್ ಅಧಿಕಾರಿಗಳು ಆಯಾ ಶಾಲೆಗಳಿಗೆ ಭೇಟಿ ನೀಡಿ ಹಣಕಾಸು ಸಾಕ್ಷರತೆ (Financial Literacy) ಮತ್ತು ಶೈಕ್ಷಣಿಕ ಸಾಲಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.

ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಹಿರೇಮಠ್‌ ಅವರು ಮಾತನಾಡಿ , ಶೈಕ್ಷಣಿಕ ಸಾಲ ವಿತರಣೆಗೆ ಸಂಬಂಧಿಸಿದಂತೆ ಎಲ್ಲಾ ಬ್ಯಾಂಕುಗಳಿಗೂ ಐ.ಬಿ.ಎ (IBA) ನಿಯಮಾವಳಿಗಳು ಅನ್ವಯಿಸುತ್ತವೆ. ಈ ಯೋಜನೆಯಡಿ 7.5 ಲಕ್ಷ ರೂ. ವರೆಗಿನ ಶೈಕ್ಷಣಿಕ ಸಾಲಕ್ಕೆ ಯಾವುದೇ ರೀತಿಯ ಆಧಾರ ಅಥವಾ ಜಾಮೀನು (Collateral Free) ಪಡೆಯುವಂತಿಲ್ಲ. ಅವರ ಕೋರ್ಸ್‌ನ ಶುಲ್ಕದ ರಚನೆಗೆ (Fee Structure) ಅನುಗುಣವಾಗಿ ಸಾಲ ನೀಡಬೇಕಾಗುತ್ತದೆ. ಮ್ಯಾನೇಜ್‌ಮೆಂಟ್ ಅಥವಾ ಪೇಮೆಂಟ್ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ 4 ಲಕ್ಷ ರೂ. ವರೆಗಿನ ಸಾಲಕ್ಕೆ ಯಾವುದೇ ಶ್ಯೂರಿಟಿ ಅಗತ್ಯವಿರುವುದಿಲ್ಲ. ಆದರೆ, 4 ಲಕ್ಷ ರೂ. ಮೇಲ್ಪಟ್ಟ ಸಾಲಕ್ಕೆ ನಿಯಮಾನುಸಾರ ಶ್ಯೂರಿಟಿ ಕಡ್ಡಾಯವಾಗಿರುತ್ತದೆ ಎಂದು ಹೇಳಿದರು.

ಐ.ಬಿ.ಎ ಪಟ್ಟಿಯಲ್ಲಿರುವ ದೇಶದ 500 ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಯಾವುದೇ ಶ್ಯೂರಿಟಿ ಇಲ್ಲದೆಯೇ 50 ಲಕ್ಷ ರೂ. ವರೆಗೆ ಶೈಕ್ಷಣಿಕ ಸಾಲ ನೀಡಲು ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕುಗಳ ಇತರ ವಲಯಗಳಿಗೆ ಹೋಲಿಸಿದರೆ ಶೈಕ್ಷಣಿಕ ಸಾಲದ ವಲಯದಲ್ಲಿ ವಸೂಲಾಗದ ಸಾಲದ (NPA) ಪ್ರಮಾಣ ಅತ್ಯಂತ ಕಡಿಮೆಯಿದೆ. ಆದಕಾರಣ, ಆದ್ಯತಾ ವಲಯದ ಸಾಲ ವಿತರಣೆಯಡಿ ಶೈಕ್ಷಣಿಕ ಸಾಲಗಳಿಗೆ ಬ್ಯಾಂಕುಗಳು ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಮಾತನಾಡಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿಯಲ್ಲಿ ಲಭ್ಯವಿರುವ ನಿಧಿಯನ್ನು ಬ್ಯಾಂಕುಗಳು ಮತ್ತು ಕಂಪನಿಗಳು ತಾವು ಕಾರ್ಯನಿರ್ವಹಿಸುವ ಜಿಲ್ಲೆಯ ವ್ಯಾಪ್ತಿಯಲ್ಲೇ ಬಳಸಬೇಕು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಡಿಸಿಸಿಒ ಸಭೆಯ ನಿರ್ದೇಶನದಂತೆ, ಬ್ಯಾಂಕ್ ಅಥವಾ ಕಂಪನಿಗಳು ತಮ್ಮ ಗ್ರಾಹಕರನ್ನು ಹೊಂದಿರುವ ಹಾಗೂ ಲಾಭ ಗಳಿಸುವ ಜಿಲ್ಲೆಯಲ್ಲೇ ಕಡ್ಡಾಯವಾಗಿ ಶೇಕಡಾ 2 ರಷ್ಟು ಸಿಎಸ್‌ಆರ್ ಹಣವನ್ನು ವ್ಯಯಿಸಬೇಕು. ಇದನ್ನು ಬಿಟ್ಟು ಬೇರೆ ಜಿಲ್ಲೆಗಳಿಗೆ ಹಣ ವರ್ಗಾಯಿಸಲು ಅವಕಾಶವಿಲ್ಲ ಎಂದು ತಿಳಿಸಿದರು.

ಬ್ಯಾಂಕುಗಳು ಶಾಖೆಗಳಿರುವ ವ್ಯಾಪ್ತಿಯಲ್ಲೇ ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು. ಈ ನಿಧಿಯನ್ನು ಸರ್ಕಾರಿ ಶಾಲೆಗಳ ಕೊಠಡಿ ನಿರ್ಮಾಣ, ಲ್ಯಾಬ್ ಉಪಕರಣಗಳ ಪೂರೈಕೆ ಅಥವಾ ವಿಶೇಷ ಚೇತನ ಫಲಾನುಭವಿಗಳ ಕಲ್ಯಾಣಕ್ಕಾಗಿ ಬಳಸಲು ಯೋಜಿಸಬೇಕು. ಎಲ್ಲಾ ಬ್ಯಾಂಕುಗಳ ಸಿ.ಎಸ್.ಆರ್ ನಿಧಿಯ ಲಭ್ಯತೆಯ ಸಂಪೂರ್ಣ ಪಟ್ಟಿಯನ್ನು ಸಿದ್ಧಪಡಿಸಿ ಸಿಇಒ ರವರಿಗೆ ನೀಡುವಂತೆ ಸೂಚನೆ ನೀಡಿದರು.

ವಿವಿಧ ಇಲಾಖೆಯಗಳಿಂದ ಸಾಲ ಕೋರಿ ಬಂದ ಅರ್ಜಿಗಳಲ್ಲಿ, ತಿರಸ್ಕೃತಗೊಂಡ ಅರ್ಜಿಗಳ ಪಟ್ಟಿಯನ್ನು ಬ್ಯಾಂಕುಗಳು 3 ರಿಂದ 6 ತಿಂಗಳವರೆಗೆ ಬಾಕಿ ಇಟ್ಟುಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ಬ್ಯಾಂಕ್‌ ಗಳಿಗೆ ಭೇಟಿ ನೀಡಿ ಇವುಗಳನ್ನು ಪರಿಶೀಲಿಸಬೇಕು. ತಾಂತ್ರಿಕ ಅಥವಾ ದಾಖಲಾತಿ ಕೊರತೆಯಿಂದ ಸಾಲ ನೀಡಲು ಸಾಧ್ಯವಾಗದಿದ್ದಲ್ಲಿ, ತಡಮಾಡದೇ ಆ ಅವಕಾಶವನ್ನು ಮುಂದಿನ ಅರ್ಹ ಅರ್ಜಿದಾರರಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಉದ್ಯೋಗ ಮತ್ತು ಆದಾಯದ ಮೂಲ ಕಲ್ಪಿಸುವಲ್ಲಿ ಬ್ಯಾಂಕುಗಳ ಜವಾಬ್ದಾರಿ ದೊಡ್ಡದಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಎಂ.ಎಸ್.ಎಂ.ಇ ವಲಯ ಹಾಗೂ ನವೋದ್ಯಮಗಳಿಗೆ ನೀಡಲಾಗುವ ಸಾಲದ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲು ಬ್ಯಾಂಕರ್‌ಗಳಿಗೆ ಕ್ರಮವಹಿಸಬೇಕು. ಬ್ಯಾಂಕಿಂಗ್ ಅಧಿಕಾರಿಗಳು ಕೇವಲ ವಾಣಿಜ್ಯ ದೃಷ್ಟಿಯಿಂದ ನೋಡದೆ, ಸಾರ್ವಜನಿಕರ ಆರ್ಥಿಕ ಸಬಲೀಕರಣದ ದೊಡ್ಡ ಜವಾಬ್ದಾರಿ ತಮ್ಮ ಮೇಲಿದೆ ಎಂಬುದನ್ನು ಅರಿತು ಕೆಲಸ ಮಾಡಬೇಕು. ಸಭೆಯಲ್ಲಿ ನೀಡಲಾಗಿರುವ ವಿಷಯವಾರು ಸೂಚನೆಗಳು ಹಾಗೂ ಪ್ರಮುಖ ನಿರ್ದೇಶನಗಳನ್ನು ಬ್ಯಾಂಕುಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ತಿಳಿಸಿದರು.

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಯಡಿ ರೂ. 436 ವಾರ್ಷಿಕ ಪ್ರೀಮಿಯಂನಲ್ಲಿ ರೂ. 2 ಲಕ್ಷದ ಜೀವ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. 18 ರಿಂದ 50 ವರ್ಷ ವಯಸ್ಸಿನ ಯಾವುದೇ ಭಾರತೀಯ ಪ್ರಜೆಯು ತಮ್ಮ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಮೂಲಕ ಈ ಯೋಜನೆಯನ್ನು ಪಡೆಯಬಹು̧ದು. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಭಾರತ ಸರ್ಕಾರದ ಅಪಘಾತ ವಿಮಾ ಯೋಜನೆಯಾಗಿದ್ದು, ವಾರ್ಷಿಕ ಕೇವಲ 20 ರೂ. ಪ್ರೀಮಿಯಂನಲ್ಲಿ 2 ಲಕ್ಷ ರೂ. ಆಕಸ್ಮಿಕ ಮರಣ ಅಥವಾ ಶಾಶ್ವತ ಅಂಗವೈಕಲ್ಯದ ರಕ್ಷಣೆ ನೀಡುತ್ತದೆ. 18 ರಿಂದ 70 ವರ್ಷ ವಯಸ್ಸಿನ ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆದಾರರು ಇದಕ್ಕೆ ಅರ್ಹರಾಗಿದ್ದಾ̧ರೆ, ಅಟಲ್ ಪಿಂಚಣಿ ಯೋಜನೆ (APY) ಎನ್ನುವುದು ಭಾರತ ಸರ್ಕಾರದ ನಿವೃತ್ತಿ ವೇತನ ಯೋಜನೆಯಾಗಿದ್ದು, ಅಸಂಘಟಿತ ವಲಯದ ಕಾರ್ಮಿಕರಿಗೆ ಮಾಸಿಕ ಪಿಂಚಣಿ ಒದಗಿಸುತ್ತದೆ. 18 ರಿಂದ 40 ವರ್ಷದೊಳಗಿನ ಭಾರತೀಯರು ತಮ್ಮ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ತೆರೆದು, ವಯಸ್ಸಿಗೆ ಅನುಗುಣವಾಗಿ ಪ್ರೀಮಿಯಂ ಪಾವತಿಸಿ 60 ವರ್ಷದ ನಂತರ ₹1000 ರಿಂದ ₹5000 ವರೆಗೆ ಖಚಿತ ಪಿಂಚಣಿ ಪಡೆಯಬಹುದದು. ಈ ಯೋಜನೆಗಳ ಪ್ರಯೋಜನೆಯನ್ನು ಬ್ಯಾಂಕ್‌ ಖಾತೆದಾರರು ಪಡೆದುಕೊಳ್ಳಲು ವಿಶೇಷ ಅಭಿಯಾನ ನಡೆಸುವಂತೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೇ ಮಾಧವ ವಿಠ್ಠಲರಾವ್‌ ಅವರು ಮಾತನಾಡಿ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ , ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆ ಬಗ್ಗೆ ಗ್ರಾಮ ಪಂಚಾಯಿತ ಮಟ್ಟದಲ್ಲಿ ಪಿಡಿಓ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ಈ ಕುರಿತು ಹೆಚ್ಚು ಪ್ರಚಾರ ನೀಡಿ ಜಾಗೃತಿ ಮೂಡಿಸಲಾಗುವುದು. ಈ ಯೋಜನೆಯ ಪ್ರಯೋಜನೆಯು ಪ್ರತಿಯೊಬ್ಬರಿಗೂ ತಲುಪಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ನಬಾರ್ಡ್ ‘ಸಂಭಾವ್ಯ ಲಿಂಕ್ಡ್ ಕ್ರೆಡಿಟ್ ಯೋಜನೆ’ (PLP) :

ನಬಾರ್ಡ್‌ನ ಡಿಡಿಎಂ ರೇಷ್ಮಾ ರೇಖಾ ಅವರು ಮಾತನಾಡಿ, 1969 ರ ಲೀಡ್ ಬ್ಯಾಂಕ್ ಯೋಜನೆಯ ಆಶಯದಂತೆ ಜಿಲ್ಲೆಯ ಸಾಲ ಸೌಲಭ್ಯಗಳ ಸಮನ್ವಯತೆಯನ್ನು ಸಾಧಿಸಲು ಆರ್‌ಬಿಐ ಮತ್ತು ನಬಾರ್ಡ್ ಸಹಯೋಗದಲ್ಲಿ ಈ ಯೋಜನಾ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಗ್ರಾಮೀಣ ಆರ್ಥಿಕ ಚಟುವಟಿಕೆಗಳ ಭೌತಿಕ ಮತ್ತು ಆರ್ಥಿಕ ಸಾಮರ್ಥ್ಯಗಳನ್ನು ಸಮಗ್ರವಾಗಿ ದಾಖಲಿಸುವುದು ಹಾಗೂ ಬ್ಯಾಂಕ್ ಸಾಲದ ಮೂಲಕ ಜಿಲ್ಲೆಯ ಮೂಲಸೌಕರ್ಯಗಳ ಕೊರತೆಯನ್ನು ನೀಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇದು ಜಿಲ್ಲಾ ಮಟ್ಟದ ವಾರ್ಷಿಕ ಸಾಲ ಯೋಜನೆಗೆ (ACP) ಸೂಕ್ತ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮಾವಳಿಗಳ ಪ್ರಕಾರ ಜಿಲ್ಲೆಯಲ್ಲಿ ಸಾಲ ವಿತರಣೆಗಾಗಿ ಬೆಳೆ ಸಾಲ, ಜಲ ಸಂಪನ್ಮೂಲ ಅಭಿವೃದ್ಧಿ, ಕೃಷಿ ಯಾಂತ್ರೀಕರಣ, ತೋಟಗಾರಿಕೆ, ಪಶುಸಂಗೋಪನೆ (ಡೈರಿ, ಕೋಳಿ, ಕುರಿ/ಮೇಕೆ ಸಾಕಣೆ), ಮೀನುಗಾರಿಕೆ ಹಾಗೂ ಗೋದಾಮು ಮತ್ತು ಶೀತಲಗೃಹಗಳಂತಹ ಕೃಷಿ ಮೂಲಸೌಕರ್ಯಗಳು. ಗ್ರಾಮೀಣ ಕೈಗಾರಿಕೆಗಳು, ಸಣ್ಣ ಉದ್ಯಮಗಳು ಮತ್ತು ಕೈಮಗ್ಗ ವಲಯಕ್ಕೆ ದುಡಿಯುವ ಬಂಡವಾಳ ಮತ್ತು ದೀರ್ಘಾವಧಿ ಸಾಲ ಸೌಲಭ್ಯ. ಅರ್ಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಮತ್ತು ಸಾರ್ವಜನಿಕರಿಗೆ ಕೈಗೆಟುಕುವ ಬಡ್ಡಿ ದರದಲ್ಲಿ ವಸತಿ ನಿರ್ಮಾಣಕ್ಕಾಗಿ ಆದ್ಯತೆಯ ಮೇರೆಗೆ ಸಾಲ. ಗ್ರಾಮೀಣ ಭಾಗದಲ್ಲಿ ಶಾಲೆಗಳು, ಕುಡಿಯುವ ನೀರು, ಸ್ವಚ್ಛತೆ ಹಾಗೂ ಸೌರಶಕ್ತಿ ಆಧಾರಿತ ಯೋಜನೆಗಳಿಗೆ ಆರ್ಥಿಕ ನೆರವು ನೀಡುತ್ತಿದೆ.

ಜಿಲ್ಲೆಯ ರೈತರು, ಸಣ್ಣ ಉದ್ಯಮಿಗಳು ಹಾಗೂ ಸಾರ್ವಜನಿಕರು ಬ್ಯಾಂಕುಗಳ ಮೂಲಕ ಸಿಗುವ ಈ ಆದ್ಯತಾ ವಲಯದ ಸಾಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸುವಂತೆ ತಿಳಿಸಿದರು.

ಕೃಷಿಕ್’ (Krishik) ಮೊಬೈಲ್ ಆ್ಯಪ್

ಕೃಷಿಕ್‌ ಆಪ್‌ ಬಳಸಿಕೊಂಡು ಸರ್ಕಾರದ ವಿವಿಧ ಕೃಷಿ ಸಾಲ ಯೋಜನೆಗಳು ಹಾಗೂ ಸಬ್ಸಿಡಿಗಳ ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಕೃಷಿಕ್ ಆ್ಯಪ್ ನೇರವಾಗಿ ಬ್ಯಾಂಕುಗಳ ಮಾದರಿಯಲ್ಲಿ ಅರ್ಹ ರೈತರು ಸರ್ಕಾರದ ಆರ್ಥಿಕ ನೆರವು ಪಡೆಯಬಹುದು, ಆ್ಯಪ್‌ನಲ್ಲಿರುವ ‘ಸರ್ಕಾರಿ ಯೋಜನೆಗಳು’ ವಿಭಾಗದ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ (KCC), ಶೂನ್ಯ ಬಡ್ಡಿ ದರದ ಬೆಳೆ ಸಾಲ ಹಾಗೂ ಪಶುಸಂಗೋಪನೆ ಸಾಲಗಳ ಸಂಪೂರ್ಣ ವಿವರಗಳನ್ನು ಪಡೆಯಬಹುದು. ರೈತರು ತಮ್ಮ ಜಮೀನಿನ ವಿಸ್ತೀರ್ಣ ಮತ್ತು ಬೆಳೆಯ ವಿವರಗಳನ್ನು ನಮೂದಿಸಿ, ತಮಗೆ ದೊರೆಯಬಹುದಾದ ಸಾಲದ ಮೊತ್ತ ಹಾಗೂ ಸರ್ಕಾರದ ಬಡ್ಡಿ ರಿಯಾಯಿತಿಯನ್ನು (Subvention) ಆ್ಯಪ್‌ನಲ್ಲಿ ಲೆಕ್ಕ ಹಾಕಬಹುದು. ಸರ್ಕಾರದ ‘ಫ್ರೂಟ್ಸ್’ (FRUITS) ಪೋರ್ಟಲ್ ಹಾಗೂ ‘ಜನ ಸಮರ್ಥ್’ ಪೋರ್ಟಲ್ ಲಿಂಕ್‌ಗಳ ಮೂಲಕ ಸಾಲಕ್ಕಾಗಿ ಪ್ರಾಥಮಿಕ ನೋಂದಣಿ ಮಾಡಿಕೊಳ್ಳಲು ಆ್ಯಪ್ ಸಹಕಾರಿಯಾಗಿದೆ ಎಂದರು.

ಎಫ್‌ಐಡಿಡಿ ಉಪ ವ್ಯವಸ್ಥಾಪಕ ಭೀಮ್‌ ಚೌದರಿ, ಕೆನರಾ ಬ್ಯಾಂಕಿನ ಎಜಿಎಂ ವಿಜೇಶ್‌ ಕುಮಾರ್‌ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್‌ , ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp