ಮಾ.24ಕ್ಕೆ ಬೆಂಗಳೂರು ಸ್ತಬ್ಧ? ಒಳ ಮೀಸಲಾತಿ ರೋಸ್ಟರ್ ವಿರೋಧಿಸಿ ರಣಕಹಳೆ ಮೊಳಗಿಸಿದ ಭೋವಿ-ಬಂಜಾರ ಸಮುದಾಯ!

—Advertisement—

📍 ದಾವಣಗೆರೆ ದಕ್ಷಿಣ

ಉಪಸಮರ - 2026

ಮಹಾ ಕದನ: ಯಾರಿಗೆ ಒಲಿಯಲಿದೆ ಟಿಕೆಟ್?

Samarth Jabbar Vinay Ajay Yashwanth
ಕ್ಷಣ ಕ್ಷಣದ ಲೈವ್ ಅಪ್ಡೇಟ್ಸ್ ➔

ಚಿತ್ರದುರ್ಗ: ರಾಜ್ಯದಲ್ಲಿ ಒಳ ಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಹಾಗೂ ಹಳೆಯ ನಿಯಮದಂತೆ ನೇಮಕಾತಿ ಪ್ರಕ್ರಿಯೆ ಮುಂದುವರೆಸುವಂತೆ ಸರ್ಕಾರವನ್ನು ಒತ್ತಾಯಿಸಿ ಮಾರ್ಚ್ 24ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ಭೋವಿ, ಲಂಬಾಣಿ, ಕೊರಚ, ಕೊರಮ ಸೇರಿ ಅಲೆಮಾರಿ ಜನಾಂಗದವರು ಜನಸಾಗರೋಪಾದಿಯಲ್ಲಿ ಪಾಲ್ಗೊಳ್ಳುವಂತೆ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕರೆ ನೀಡಿದ್ದಾರೆ.

ಭಾನುವಾರ ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯ ಸಮಿತಿ ವತಿಯಿಂದ ಆಯೋಜಿಸಿದ್ದ ವಿಭಾಗೀಯ ಮಟ್ಟದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ನ್ಯಾಯಮೂರ್ತಿ ನಾಗಮೋಹನ್‌ ದಾಸ್ ವರದಿ ಬಗ್ಗೆ ಅಸಮಾಧಾನ “ನ್ಯಾಯಮೂರ್ತಿ ನಾಗಮೋಹನ್‍ದಾಸ್ ಆಯೋಗ ಸಂಗ್ರಹಿಸಿರುವ ದತ್ತಾಂಶ ಒಂದು ಸಮಾಜಕ್ಕೆ ಪೂರ್ವಾಗ್ರಹ ಪೀಡಿತವಾಗಿದೆ ಎನ್ನುವುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಭೋವಿ, ಲಂಬಾಣಿ, ಕೊರಮ, ಕೊರಚ ಜನಾಂಗ ಮುಂದುವರೆದಿದೆ ಎಂದು ಆಯೋಗ ಎಲ್ಲಿಯೂ ಹೇಳಿಲ್ಲ. ಆದರೆ, ಸಂಗ್ರಹಿಸಿರುವ ದತ್ತಾಂಶಕ್ಕೂ ಹಾಗೂ ಸರ್ಕಾರಕ್ಕೆ ನೀಡಿರುವ ವರದಿಗೂ ಭಾರಿ ವ್ಯತ್ಯಾಸವಿದೆ. ಹೀಗಾಗಿ ಅಲೆಮಾರಿ ಸಮುದಾಯಗಳಿಗೆ ಹಾಗೂ ಪರಿಶಿಷ್ಟ ಜಾತಿಯ ಸೂಕ್ಷ್ಮ ವಲಯಗಳಿಗೆ ನ್ಯಾಯ ಸಿಗಬೇಕು” ಎಂದು ಸ್ವಾಮೀಜಿ ಆಗ್ರಹಿಸಿದರು.

ಸರ್ಕಾರದ ಮುಂದಿರುವ ಪ್ರಮುಖ ಬೇಡಿಕೆಗಳು:

  • ಅನುದಾನ ಬಳಕೆ: ಎಸ್‌ಸಿಪಿ, ಟಿಎಸ್‌ಪಿ (SCP-TSP) ಹಣವನ್ನು ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಬಳಸಬಾರದು. ಅದನ್ನು ನಮ್ಮ ಸಮುದಾಯದ ಅಭಿವೃದ್ಧಿಗೆ ಮಾತ್ರ ಮೀಸಲಿಡಬೇಕು.

  • ನಿಗಮಗಳಿಗೆ ಅನುದಾನ: ಜನಸಂಖ್ಯೆಗೆ ಅನುಗುಣವಾಗಿ ಭೋವಿ ಅಭಿವೃದ್ಧಿ ನಿಗಮ ಹಾಗೂ ಬಂಜಾರ ಅಭಿವೃದ್ಧಿ ನಿಗಮಗಳಿಗೆ ತಕ್ಷಣವೇ ಹಣ ಮಂಜೂರು ಮಾಡಬೇಕು.

  • ಸಮಾಜದ ಮುಖಂಡರು ಹಳ್ಳಿ-ಹಳ್ಳಿಗಳಿಗೆ ತೆರಳಿ ಜನರನ್ನು ಜಾಗೃತಗೊಳಿಸಿ, ಕುಟುಂಬ ಸಮೇತರಾಗಿ ಪ್ರತಿಭಟನೆಗೆ ಬರುವಂತೆ ಮಾಡಬೇಕು. ಇಲ್ಲವಾದರೆ ನಮ್ಮ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟವಾಗಲಿದೆ.

ಇದು ನಮ್ಮ ಸಮುದಾಯದ ಅಳಿವು-ಉಳಿವಿನ ಪ್ರಶ್ನೆ: ಸರ್ದಾರ್ ಸೇವಾಲಾಲ್‍ ಸ್ವಾಮೀಜಿ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್‍ ಸ್ವಾಮೀಜಿ ಮಾತನಾಡಿ, “ಒಳ ಮೀಸಲಾತಿಗಾಗಿ ಹೋರಾಟ ಇಂದಿನದ್ದಲ್ಲ. ಶಾಸಕರು, ಮಂತ್ರಿಗಳ ಮನೆ ಹಾಗೂ ವಿಧಾನಸೌಧಕ್ಕೂ ಮುತ್ತಿಗೆ ಹಾಕಿದ್ದೇವೆ. ಭೋವಿ, ಬಂಜಾರರನ್ನು ಮೀಸಲಾತಿಯಿಂದ ಹೊರಗಿಡುವ ಹುನ್ನಾರ ನಡೆಯುತ್ತಿದ್ದು, ಇದನ್ನು ವಿರೋಧಿಸಿ ಮಾ.24ರಂದು ಬೃಹತ್ ಶಕ್ತಿ ಪ್ರದರ್ಶನ ಮಾಡಲಿದ್ದೇವೆ” ಎಂದರು.

ಮಾರ್ಚ್ 27ರಂದು ನಡೆಯುವ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆಯ ತೀರ್ಮಾನದ ಬಗ್ಗೆ ನಮಗೆ ಆತಂಕವಿದೆ. ಮೀಸಲಾತಿ ವಿಚಾರದಲ್ಲಿ ಕಿಚ್ಚು ಹಚ್ಚಿ ಒಡಕು ಮೂಡಿಸಲಾಗುತ್ತಿದೆ. ಆದ್ದರಿಂದ 101 ಜಾತಿಗಳು ತಮ್ಮ ಭಿನ್ನಾಭಿಪ್ರಾಯ ಮರೆತು ಒಂದಾಗಬೇಕಿದೆ. ಸಿಎಂ ಸಿದ್ದರಾಮಯ್ಯನವರು ಯಾವುದೋ ಒತ್ತಡಕ್ಕೆ ಮಣಿದಿರುವುದರಿಂದ ಬೀದಿಗಿಳಿದು ಹೋರಾಡುವುದು ನಮಗೆ ಅನಿವಾರ್ಯವಾಗಿದೆ ಎಂದು ಎಚ್ಚರಿಸಿದರು.

56,432 ಹುದ್ದೆಗಳ ನೇಮಕಾತಿಯಲ್ಲಿ ಅನ್ಯಾಯವಾಗದಿರಲಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ನೇರ್ಲಗುಂಟೆ ರಾಮಪ್ಪ ಮಾತನಾಡಿ, “ಫ್ರೀಡಂ ಪಾರ್ಕ್ ಪ್ರತಿಭಟನೆಯಲ್ಲಿ ಎಲ್ಲರೂ ಪಾಲ್ಗೊಂಡು ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಈ ಸಮುದಾಯಗಳ ಕೊಡುಗೆ ದೊಡ್ಡದಿದೆ. ಈಗ ನಡೆಯುತ್ತಿರುವ 56,432 ಹುದ್ದೆಗಳ ನೇಮಕಾತಿಯಲ್ಲಿ ನಮಗೆ ಅನ್ಯಾಯವಾಗಬಾರದು” ಎಂದು ಒತ್ತಾಯಿಸಿದರು.

ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವಾನಾಯ್ಕ ಮಾತನಾಡಿ, “ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ ರೋಸ್ಟರ್ ಪದ್ಧತಿ ಅತ್ಯಂತ ಅಪಾಯಕಾರಿ. ನಮ್ಮನ್ನೆಲ್ಲಾ ಸಮಾಧಿ ಮಾಡುವ ಈ ಹುನ್ನಾರದ ಬಗ್ಗೆ ಅರಿವು ಮೂಡಿಸಲು ಈ ಹೋರಾಟ” ಎಂದು ಗುಡುಗಿದರು.

ಜಿಲ್ಲಾ ಮಟ್ಟದ ನಾಯಕರ ಬೆಂಬಲ

  • ಆನಂದ್ (ಭೋವಿ ಸಮಾಜದ ರಾಜ್ಯಾಧ್ಯಕ್ಷ): ಭೋವಿ, ಲಂಬಾಣಿ, ಕೊರಚ, ಕೊರಮ ಎಲ್ಲರೂ ಒಂದೇ. ಹೋರಾಟ ಮಾಡಿ ನ್ಯಾಯ ಪಡೆಯದಿದ್ದರೆ ಮುಂದಿನ ಪೀಳಿಗೆಗೆ ದ್ರೋಹ ಮಾಡಿದಂತಾಗುತ್ತದೆ.

  • ಕೃಷ್ಣಪ್ಪ (ಜಿಲ್ಲಾ ಕೊರಮ ಸಮಾಜದ ಅಧ್ಯಕ್ಷ): ಮಾ.24ರ ಪ್ರತಿಭಟನೆಗೆ ಕೊರಮ ಜನಾಂಗದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರಲಾಗುವುದು.

  • ನಾಗೇಂದ್ರನಾಯ್ಕ (ಬಂಜಾರ ಸಮಾಜದ ಜಿಲ್ಲಾಧ್ಯಕ್ಷ): ತಾಲೂಕು ಮಟ್ಟದ ಸಭೆಗಳನ್ನು ಕರೆದು ಎಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿಭಟನೆಗೆ ಅಣಿಗೊಳಿಸಲಾಗುವುದು.

  • ಕೃಷ್ಣಮೂರ್ತಿ (ಭೋವಿ ಸಮಾಜದ ಜಿಲ್ಲಾಧ್ಯಕ್ಷ): ನಮ್ಮ ಜಿಲ್ಲೆಯಿಂದಲೇ ಕನಿಷ್ಠ 10 ಸಾವಿರ ಜನರು ಬೆಂಗಳೂರಿನ ಹೋರಾಟದಲ್ಲಿ ಪಾಲ್ಗೊಂಡು ಸರ್ಕಾರವನ್ನು ಮಣಿಸಬೇಕಿದೆ.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಾನಾಯ್ಕ, ನಿವೃತ್ತ ನ್ಯಾಯಾಧೀಶರಾದ ವೀರಭದ್ರಪ್ಪ, ರಾಘವೇಂದ್ರನಾಯ್ಕ, ಸಿಂಡಿಕೇಟ್ ಸದಸ್ಯ ದಾವಣಗೆರೆಯ ದ್ಯಾಮಣ್ಣ, ಮಂಜುಳ ಬಿ.ಜಯದೇವ, ಆದರ್ಶ ಯಲ್ಲಪ್ಪ ಮಾತನಾಡಿದರು.

ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಹೊಸಪೇಟೆ ಹಾಗೂ ಹಾವೇರಿ ಜಿಲ್ಲೆಗಳಿಂದ ಆಗಮಿಸಿದ್ದ ಭೋವಿ ಸಮಾಜದ ಮೋಹನ್, ಹನುಮಂತಪ್ಪ ಗೋಡೆಮನೆ, ಡಿ.ತಿಮ್ಮಣ್ಣ, ಬಂಜಾರ ಸಮಾಜದ ಸುರೇಶ್‍ನಾಯ್ಕ, ಪ್ರಕಾಶ್‍ರಾಮನಾಯ್ಕ, ತುಳಸಿ ರಮೇಶ್, ಗೀತ ಸೇರಿದಂತೆ ನೂರಾರು ಅಲೆಮಾರಿ ಜನಾಂಗದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Leave a Comment

Home
Web Stories
Instagram
WhatsApp