ದಿನಾಂಕ: ಮೇ 9, 2026
ಸಮಯ: ಬೆಳಿಗ್ಗೆಯಿಂದ ಪ್ರಾರಂಭ
ಮಾದಾರ ಚನ್ನಯ್ಯ ಗುರುಪೀಠದ ಬಳಿ, ಚಿತ್ರದುರ್ಗ.
ಈ ಬೃಹತ್ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ವಿಶೇಷವಾಗಿ ಭಾಗಿಯಾಗಲಿದ್ದಾರೆ.
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕೇವಲ ಅಧಿಕಾರಕ್ಕಾಗಿ ಮಾತ್ರವಲ್ಲದೆ, ಜನಸಾಮಾನ್ಯರ ಪರವಾದ ಹೋರಾಟದ ಮೂಲಕವೇ ಅತ್ಯುನ್ನತ ಸ್ಥಾನಕ್ಕೇರಿದ ಬೆರಳೆಣಿಕೆಯ ನಾಯಕರಲ್ಲಿ ಬಿ.ಎಸ್. ಯಡಿಯೂರಪ್ಪ ಅಗ್ರಗಣ್ಯರು. ತಮ್ಮ ಸುದೀರ್ಘ 50 ವರ್ಷಗಳ ರಾಜಕೀಯ ಜೀವನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅವರು, ತಮ್ಮ ಬದುಕಿನ ಬಹುಪಾಲು ಸಮಯವನ್ನು ರೈತರು, ದೀನ-ದಲಿತರು, ಶೋಷಿತರು ಹಾಗೂ ಬಡವರ ಪರವಾದ ಧ್ವನಿಯಾಗಿಯೇ ಸವೆಸಿದ್ದಾರೆ.
ಬೀದಿ ಹೋರಾಟಗಳಿಂದ ಹಿಡಿದು ವಿಧಾನಸೌಧದ ಮೂರನೇ ಮಹಡಿಯವರೆಗೆ ಬಿಎಸ್‌ವೈ ನಡೆದು ಬಂದ ದಾರಿ ಸುಗಮವಾಗಿರಲಿಲ್ಲ. 'ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು' ಎಂಬ ಮಾತು ಅಂದಿನ ದಿನಗಳಲ್ಲಿ ಸುಮ್ಮನೆ ಹುಟ್ಟಿಕೊಂಡಿದ್ದಲ್ಲ; ಅದು ನೊಂದವರ ಪರವಾಗಿ ಅವರು ಮೊಳಗಿಸುತ್ತಿದ್ದ ಸಿಂಹಗರ್ಜನೆಯಾಗಿತ್ತು. ಹೋರಾಟದ ಮೂಲಕವೇ ಬಿಜೆಪಿಗೆ ರಾಜ್ಯದಲ್ಲಿ ಅಡಿಪಾಯ ಹಾಕಿದ ಅವರು, ಅಧಿಕಾರ ಸಿಕ್ಕಾಗ ತಾವೆಂದೂ ನಂಬಿದ್ದ ಸಮುದಾಯಗಳನ್ನು ಮರೆಯಲಿಲ್ಲ. ಅವರು ಜಾರಿಗೊಳಿಸಿದ ಜನಪರ ಯೋಜನೆಗಳು ಇಂದಿಗೂ ರಾಜ್ಯದ ಉದ್ದಗಲಕ್ಕೂ ಅನುರಣಿಸುತ್ತಿವೆ. ಬಿ.ಎಸ್. ಯಡಿಯೂರಪ್ಪ ಅವರ ಆಡಳಿತಾವಧಿಯ ಹಾಗೂ ರಾಜಕೀಯ ಮೈಲುಗಲ್ಲುಗಳ ಒಂದು ವಿಶೇಷ ಮೆಲುಕು ಮಧ್ಯಕರ್ನಾಟಕ ಲೈವ್ ಓದುಗರಿಗಾಗಿ ಇಲ್ಲಿದೆ.
ಯಡಿಯೂರಪ್ಪ ಅವರು ಒಟ್ಟು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೂ, ಪೂರ್ಣ ಪ್ರಮಾಣದಲ್ಲಿ ಆಡಳಿತ ನಡೆಸಿದ್ದು 2008-2011 ಹಾಗೂ 2019-2021ರ ಅವಧಿಯಲ್ಲಿ ಮಾತ್ರ. ಈ ಅವಧಿಯಲ್ಲಿ ಅವರು ಕೈಗೊಂಡ ನಿರ್ಧಾರಗಳು ನಾಡಿನ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದವು.
'ರೈತಪರ ಹೋರಾಟಗಾರ' ಎಂಬ ತಮ್ಮ ಹೆಸರನ್ನು ಅನ್ವರ್ಥಗೊಳಿಸುವಂತೆ, ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತ್ಯೇಕ 'ಕೃಷಿ ಬಜೆಟ್' ಮಂಡಿಸಿದ ಕೀರ್ತಿ ಯಡಿಯೂರಪ್ಪನವರದ್ದು. ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ನೀಡುವ ಮೂಲಕ ರೈತರಿಗೆ ಆರ್ಥಿಕ ಬಲ ತುಂಬಿದರು.
ಹೆಣ್ಣು ಮಗು ಹುಟ್ಟಿದರೆ ಅದು ಕುಟುಂಬಕ್ಕೆ ಹೊರೆ ಎಂಬ ಸಾಮಾಜಿಕ ಪಿಡುಗನ್ನು ತೊಡೆದುಹಾಕಲು ಅವರು ತಂದ ಕ್ರಾಂತಿಕಾರಿ ಯೋಜನೆ 'ಭಾಗ್ಯಲಕ್ಷ್ಮೀ'. ಬಿಪಿಎಲ್ ಕುಟುಂಬದ ಹೆಣ್ಣು ಮಗುವಿನ ಹೆಸರಿನಲ್ಲಿ ಠೇವಣಿ ಇಟ್ಟು, ಆಕೆಗೆ 18 ವರ್ಷ ತುಂಬಿದಾಗ ಲಕ್ಷಕ್ಕೂ ಅಧಿಕ ಹಣ ಕೈಸೇರುವಂತೆ ಮಾಡಿದ್ದು ಮಾತ್ರವಲ್ಲದೆ, ಆರೋಗ್ಯ ವಿಮೆ ಮತ್ತು ವಿದ್ಯಾರ್ಥಿವೇತನವನ್ನೂ ಒದಗಿಸಿದರು.
ಶಾಲೆ ದೂರವಿದೆ ಎಂಬ ಕಾರಣಕ್ಕೆ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ಆರಂಭಿಸಿದರು. 125 ಕೋಟಿ ರೂ. ವೆಚ್ಚದಲ್ಲಿ 7 ಲಕ್ಷ ಮಕ್ಕಳಿಗೆ ಸೈಕಲ್ ನೀಡಿದ ಈ ಯೋಜನೆ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತಂದಿತು.
ವಯಸ್ಸಾದ ಕಾಲದಲ್ಲಿ ಹಿರಿಯ ಜೀವಗಳಿಗೆ ಆಸರೆಯಾಗಲು 65 ವರ್ಷ ಮೀರಿದ ಬಡವರಿಗೆ ಮಾಸಿಕ 400 ರೂ. ಪಿಂಚಣಿ ನೀಡುವ 'ಸಂಧ್ಯಾ ಸುರಕ್ಷಾ' ಯೋಜನೆಯನ್ನು ಜಾರಿಗೆ ತಂದರು.
2019ರಲ್ಲಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ರಾಜ್ಯ ಕಂಡುಕೇಳರಿಯದ ಭೀಕರ ಪ್ರವಾಹಕ್ಕೆ ತುತ್ತಾಗಿತ್ತು. ಆಗಿನ್ನೂ ಸಚಿವ ಸಂಪುಟವೇ ರಚನೆಯಾಗಿರಲಿಲ್ಲ. ಆದರೂ ಎದೆಗುಂದದ ಬಿಎಸ್‌ವೈ, ಏಕಾಂಗಿಯಾಗಿ ನೆರೆಪೀಡಿತ ಪ್ರದೇಶಗಳನ್ನು ಸುತ್ತಿ ಸಂತ್ರಸ್ತರ ಕಣ್ಣೊರೆಸಿದರು. ಕೇಂದ್ರದ ಎನ್‌ಡಿಆರ್‌ಎಫ್ ನಿಯಮಾವಳಿಗಳನ್ನು ಮೀರಿ, ಸಂಪೂರ್ಣ ಮನೆ ಕಳೆದುಕೊಂಡವರಿಗೆ ದಾಖಲೆಯ 5 ಲಕ್ಷ ರೂ. ಪರಿಹಾರ ಘೋಷಿಸಿದರು. ಭಾಗಶಃ ಹಾನಿಯಾದ ಮನೆಗಳಿಗೆ 50 ಸಾವಿರ ಹಾಗೂ ದುರಸ್ತಿಗೆ 3 ಲಕ್ಷ ರೂ. ನೀಡಿ ನೊಂದವರ ಬದುಕಿಗೆ ಆಸರೆಯಾದರು.
ಬಿಜೆಪಿಯ ಪೂರ್ವಾಶ್ರಮವಾದ ಜನಸಂಘದ ಕಾಲದಿಂದಲೂ ವಾಜಪೇಯಿ ಹಾಗೂ ಅಡ್ವಾಣಿಯವರಿಗೆ ಕರುನಾಡಿನ ಬಗ್ಗೆ ವಿಶೇಷ ಒಲವಿತ್ತು. "ಇದು ಕೇವಲ ಉತ್ತರ ಭಾರತದ ಪಕ್ಷ" ಎಂಬ ಹಣೆಪಟ್ಟಿಯನ್ನು ಕಳಚಿ, ದಕ್ಷಿಣ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಕಮಲ ಅರಳಿಸಲು ಹಗಲಿರುಳು ಶ್ರಮಿಸಿದವರು ಯಡಿಯೂರಪ್ಪ. 2006ರಲ್ಲಿ ಸಮ್ಮಿಶ್ರ ಸರ್ಕಾರದ ಉಪಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ದೂರದೃಷ್ಟಿಯ ಯೋಜನೆಗಳನ್ನು ನೀಡುವ ಮೂಲಕ ಜನರ ವಿಶ್ವಾಸ ಗಳಿಸಿದರು. ಅದರ ಪ್ರತಿಫಲವಾಗಿಯೇ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸ್ವತಂತ್ರವಾಗಿ ಅಧಿಕಾರ ಹಿಡಿಯುವಂತಾಯಿತು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಉತ್ತರ ಪ್ರದೇಶ ಎಷ್ಟು ಮುಖ್ಯವೋ, ದಕ್ಷಿಣದಿಂದ ಕರ್ನಾಟಕದ ಕೊಡುಗೆಯೂ ಅಷ್ಟೇ ಪ್ರಮುಖವಾಗಿದೆ. ಇದಕ್ಕೆ ಮೂಲ ಕಾರಣಕರ್ತರು ಬಿ.ಎಸ್. ಯಡಿಯೂರಪ್ಪ.
ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದಾಗ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ರಾಜ್ಯದ ಜನತೆ ಲೋಕಸಭೆಯಲ್ಲಿ ಬಿಜೆಪಿಗೆ 19 ಸ್ಥಾನಗಳನ್ನು ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗಲೂ, ಮೋದಿ ಪ್ರಧಾನಿಯಾಗಬೇಕು ಎಂಬ ಸಂಕಲ್ಪದೊಂದಿಗೆ ಬಿಎಸ್‌ವೈ ರಾಜ್ಯಾದ್ಯಂತ ಪ್ರಚಾರ ಮಾಡಿದರು. ಸ್ವತಃ ಶಿವಮೊಗ್ಗದಿಂದ ಭಾರಿ ಅಂತರದಲ್ಲಿ ಗೆದ್ದರು. ಪಕ್ಷ 17 ಸ್ಥಾನಗಳನ್ನು ತನ್ನದಾಗಿಸಿಕೊಂಡಿತು.
ರಾಜ್ಯದಲ್ಲಿ ಮೈತ್ರಿ (ಕಾಂಗ್ರೆಸ್-ಜೆಡಿಎಸ್) ಸರ್ಕಾರವಿದ್ದರೂ, ಮೋದಿ ಅಲೆಯ ಜೊತೆಗೆ ಬಿಎಸ್‌ವೈ ಅವರ ನಾಯಕತ್ವದ ಬಲದಿಂದ 'ನ ಭೂತೋ ನ ಭವಿಷ್ಯತಿ' ಎಂಬಂತೆ ಬಿಜೆಪಿ 25 ಸ್ಥಾನಗಳನ್ನು ಗೆದ್ದು ಬೀಗಿತು.
ಗ್ಯಾರಂಟಿ ಯೋಜನೆಗಳ ಅಬ್ಬರದ ನಡುವೆಯೂ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ 19 (ಬಿಜೆಪಿ 17) ಸ್ಥಾನಗಳನ್ನು ಗೆಲ್ಲುವಲ್ಲಿ ಯಡಿಯೂರಪ್ಪನವರ ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಿದೆ.