ಚಿತ್ರದುರ್ಗ : ನಗರದ
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಭಾರತದ ಜನಗಣತಿ-2027ರ ಸಂಬಂಧ ಕ್ಷೇತ್ರಮಟ್ಟದ ತರಬೇತುದಾರರಿಗಾಗಿ ಮೂರು ದಿನಗಳ ತರಬೇತಿ ಕಾರ್ಯಗಾರ ನಡೆಯಿತು.
ತರಬೇತಿಯಿಂದ ಗಣತಿ ಕಾರ್ಯ ಯಶಸ್ವಿ
ವೇಳೆ ಉಪವಿಭಾಗಾಧಿಕಾರಿ ಕೆ.ಜೆ. ಕಾಂತರಾಜ್ ಮಾತನಾಡಿ, ದೇಶದ ಅಭಿವೃದ್ಧಿ ದೃಷ್ಟಿಯಿಂದ ಜನಗಣತಿ ಅತ್ಯಂತ ಮಹತ್ವದ್ದಾಗಿದ್ದು, ಈ ಬಾರಿ ತಂತ್ರಾಂಶದ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿರುವುದರಿಂದ ಕ್ಷೇತ್ರಮಟ್ಟದ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಕ್ಷೇತ್ರಮಟ್ಟದ ತರಬೇತುದಾರರು ಗಣತಿದಾರಿಗೆ ಸರಿಯಾದ ರೀತಿಯಲ್ಲಿ ತರಬೇತಿ ನೀಡಿದರೆ ಜನಗಣತಿ ಕಾರ್ಯ ಯಶಸ್ವಿಯಾಗಲಿದೆ ಎಂದು ತಿಳಿಸಿದ ಅವರು, ಈ ಹಿಂದೆ ಮ್ಯಾನುಯಲ್ ಆಗಿ ಜನಗಣತಿ ಮಾಡಲಾಗುತ್ತಿತ್ತು, ಆದರೆ ಈ ಬಾರಿ ಹೊಸದಾಗಿ ಆಪ್ ಮೂಲಕ ಡಿಜಿಟಲ್ ರೂಪದಲ್ಲಿ ಮಾಹಿತಿ ದಾಖಲಿಸಲಾಗುತ್ತಿದೆ. ಇದರಿಂದ ಮಾಹಿತಿಯಲ್ಲಿನ ತಪ್ಪುಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಯೋಜನೆ ರೂಪಿಸಲು ದಿಕ್ಸೂಚಿ
ಭಾರತದಲ್ಲಿ 1872ರಲ್ಲಿ ಮೊದಲ ಜನಗಣತಿ ಆರಂಭವಾಯಿತು. ಸ್ವಾತಂತ್ರ್ಯಾನಂತರ 1951 ರಿಂದ ಪ್ರತಿ 10 ವರ್ಷಕ್ಕೊಮ್ಮೆ ನಡೆಸಲಾಗುತ್ತಿದ್ದು, ಇದು ಸ್ವಾತಂತ್ರ್ಯದ ನಂತರದ 8ನೇ ಜನಗಣತಿಯಾಗಿದೆ. 2021ರಲ್ಲಿ ನಡೆಯಬೇಕಿದ್ದ ಪ್ರಕ್ರಿಯೆಯು ಕೋವಿಡ್ ಕಾರಣದಿಂದ ವಿಳಂಬವಾಗಿ ಈಗ ನಡೆಯುತ್ತಿದೆ. ಜನಗಣತಿಯಲ್ಲಿ ಸಂಗ್ರಹವಾಗುವ ಆರ್ಥಿಕ, ಸಾಮಾಜಿಕ ಹಾಗೂ ಕೌಟುಂಬಿಕ, ಶೈಕ್ಷಣಿಕ ಸ್ಥಿತಿಗತಿಗಳ ಮಾಹಿತಿಯು ಸರ್ಕಾರಕ್ಕೆ ಮುಂದಿನ ಯೋಜನೆ ಹಾಗೂ ನೀತಿಗಳನ್ನು ರೂಪಿಸಲು ದಿಕ್ಸೂಚಿಯಾಗಲಿದೆ. ಸಾರ್ವಜನಿಕರು ತಾವಾಗಿಯೇ ಮಾಹಿತಿ ದಾಖಲಿಸಲು ಸ್ವಯಂ ಗಣತಿ ಆಯ್ಕೆ ನೀಡಲಾಗಿದ್ದು, ಗಣತಿದಾರರು ಇದರ ಬಗ್ಗೆ ಅರಿವು ಮೂಡಿಸಬೇಕು. ಈ ಹಿಂದೆ ನಡೆದ ಸಾಮಾಜಿಕ ಮತ್ತು ಆರ್ಥಿಕ ಗಣತಿಯಲ್ಲಿ ಆದ ಲೋಪದೋಷಗಳು ಈ ಬಾರಿ ಮರುಕಳಿಸಬಾರದು. ಗಣತಿದಾರರು ಕಡ್ಡಾಯವಾಗಿ ಮನೆ ಮನೆಗೆ ಭೇಟಿ ನೀಡಿ ನಿಖರ ಮಾಹಿತಿ ಪಡೆಯಬೇಕು ಎಂದು ನಿರ್ದೇಶನ ನೀಡಿದರು.
ಸಂಪೂರ್ಣ ಡಿಜಿಟಲ್
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ ಮಾತನಾಡಿ, ಭಾರತದ 16ನೇ ಜನಗಣತಿಯು ಈ ಬಾರಿ ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಯುತ್ತಿದ್ದು, ಇದು ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಅರಿತು ಉತ್ತಮ ಜನಪರ ಯೋಜನೆಗಳನ್ನು ರೂಪಿಸಲು ಭದ್ರ ಬುನಾದಿಯಾಗಲಿದೆ. ಭಾರತದಲ್ಲಿ 1872ರಿಂದ ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ನಡೆಸಲಾಗುತ್ತಿದ್ದು, 2021ರಲ್ಲಿ ನಡೆಯಬೇಕಿದ್ದ 16ನೇ ಜನಗಣತಿಯು ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ವಿಳಂಬವಾಗಿತ್ತು. ಈ ಬಾರಿಯ ಗಣತಿಯು ಡಿಜಿಟಲ್ ಆಗಿರುವುದರಿಂದ ಮಾಹಿತಿ ಸಂಗ್ರಹಣೆ ಪ್ರಕ್ರಿಯೆಯು ಈ ಹಿಂದೆಗಿಂತಲೂ ಸರಳ ಮತ್ತು ವ್ಯವಸ್ಥಿತವಾಗಿರಲಿದೆ ಎಂದು ಹೇಳಿದರು.
ನಿಖರ ಮಾಹಿತಿಗೆ ತರಬೇತಿ
ಏಪ್ರಿಲ್ 1 ರಿಂದ 15 ರವರೆಗೆ ಸ್ವಯಂ ಗಣತಿ ಪ್ರಕ್ರಿಯೆ ನಡೆಯಲಿದ್ದು, ಏಪ್ರಿಲ್ 15 ರಿಂದ ಮೇ 15 ರವರೆಗೆ ಮನೆಗಳ ಪಟ್ಟಿ ತಯಾರಿಕೆ ಕಾರ್ಯ ನಡೆಯಲಿದೆ. ತದನಂತರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಜನಸಂಖ್ಯೆ ಗಣತಿ ಕಾರ್ಯ ನಡೆಯಲಿದ್ದು, ಈ ಸಂಪೂರ್ಣ ಪ್ರಕ್ರಿಯೆಯು ಹಂತ ಹಂತವಾಗಿ 2027ರವರೆಗೆ ಮುಂದುವರಿಯಲಿದೆ ಎಂದು ವಿವರಿಸಿದರು.
ಗಣತಿದಾರರು ಮತ್ತು ಮೇಲ್ವಿಚಾರಕರು ಒಟ್ಟು 33 ಪ್ರಶ್ನೆಗಳಿರುವ ಪ್ರಶ್ನಾವಳಿಯನ್ನು ಬಳಸಲಿದ್ದು, ಸಾರ್ವಜನಿಕರಿಂದ ನಿಖರ ಮಾಹಿತಿ ಪಡೆಯಲು ಈ ತರಬೇತಿಯನ್ನು ಗಂಭೀರವಾಗಿ ಪಡೆಯಬೇಕು ಎಂದು ಸೂಚಿಸಿದರು.
ಕಾರ್ಯಗಾರದಲ್ಲಿ ಚುನಾವಣಾ ತಹಶೀಲ್ದಾರ್ ಬೀಬಿ ಫಾತಿಮಾ, ಶಿರಸ್ತೆದಾರ್ ಮಲ್ಲಿಕಾರ್ಜುನ ನಾಯಕ, ಮಾಸ್ಟರ್ ಟ್ರೈನರ್ಗಳಾದ ರಾಮಚಂದ್ರಪ್ಪ, ರೇವಣ್ಣ ಹಾಗೂ ಕ್ಷೇತ್ರಮಟ್ಟದ ತರಬೇತುದಾರರು ಇದ್ದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
📩 ಸುದ್ದಿ ಕಳುಹಿಸಿ
madhayakarnatakalive@gmail.com