ಚಿತ್ರದುರ್ಗ: ಜಿಲ್ಲೆಯ ಗಣಿಬಾಧಿತ ಹಾಗೂ ಪ್ರಭಾವಕ್ಕೊಳಗಾದ ಪ್ರದೇಶಗಳ ಮಹಿಳಾ ಸ್ವಸಹಾಯ ಗುಂಪುಗಳ ಆರ್ಥಿಕ ಸಬಲೀಕರಣಕ್ಕಾಗಿ ಪಶುಪಾಲನಾ ಇಲಾಖೆಯು ಭರ್ಜರಿ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿ (CEPMIZ) ಯೋಜನೆಯಡಿ ಅರ್ಹ ಮಹಿಳಾ ಫಲಾನುಭವಿಗಳಿಗೆ ಭಾರಿ ಸಹಾಯಧನದೊಂದಿಗೆ ಹೈನುರಾಸು (ಮಿಶ್ರತಳಿ ಹಸು ಅಥವಾ ಎಮ್ಮೆ) ಮತ್ತು ರಬ್ಬರ್ ನೆಲಹಾಸು (Cow Mat) ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಜೂನ್ 10ರ ಒಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.
187 ಗ್ರಾಮಗಳ 3,179 ಮಹಿಳೆಯರಿಗೆ ಸೌಲಭ್ಯ
ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲ್ಲೂಕುಗಳ ಒಟ್ಟು 187 ಗಣಿಬಾಧಿತ/ಪ್ರಭಾವಕ್ಕೊಳಗಾದ ಗ್ರಾಮಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ಪರಿಶಿಷ್ಟ ಜಾತಿಯ 339, ಪರಿಶಿಷ್ಟ ಪಂಗಡದ 137 ಹಾಗೂ ಸಾಮಾನ್ಯ ವರ್ಗದ 2,703 ಸೇರಿದಂತೆ ಒಟ್ಟು 3,179 ಮಹಿಳಾ ಫಲಾನುಭವಿಗಳಿಗೆ ಈ ಯೋಜನೆಯಡಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. ಚಿತ್ರದುರ್ಗ ತಾಲ್ಲೂಕಿನ 51, ಹೊಳಲ್ಕೆರೆ ತಾಲ್ಲೂಕಿನ 72 ಹಾಗೂ ಹೊಸದುರ್ಗ ತಾಲ್ಲೂಕಿನ 64 ಗ್ರಾಮಗಳ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಒಂದು ಹಸು ಅಥವಾ ಎಮ್ಮೆ ಹಾಗೂ ರಬ್ಬರ್ ನೆಲಹಾಸಿನ ಒಟ್ಟು ಮೌಲ್ಯವನ್ನು 63,000 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಕ್ಕೆ (ST) ಸೇರಿದ ಫಲಾನುಭವಿಗಳಿಗೆ ಶೇ. 90 ರಷ್ಟು ಭಾರಿ ಸಹಾಯಧನ (ಸಬ್ಸಿಡಿ) ಸಿಗಲಿದೆ. ಇನ್ನು ಸಾಮಾನ್ಯ ವರ್ಗದ (General) ಫಲಾನುಭವಿಗಳಿಗೆ ಶೇ. 50 ರಷ್ಟು ಸಹಾಯಧನ ದೊರೆಯಲಿದೆ. ಉಳಿಕೆ ಮೊತ್ತವನ್ನು ಫಲಾನುಭವಿಗಳು ತಮ್ಮ ಸ್ವಂತ ಹಣದಿಂದ ಅಥವಾ ಬ್ಯಾಂಕ್ ಸಾಲದ ಮುಖಾಂತರ ಪಾವತಿಸಬೇಕಿರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆಗಳೇನು?
- ಈ ಯೋಜನೆಯ ಲಾಭ ಪಡೆಯಲು ಮಹಿಳೆಯರು ಕಡ್ಡಾಯವಾಗಿ ಜಿ.ಪಿ.ಎಲ್.ಎಫ್ (GPLF) ಮುಖಾಂತರ ಸ್ಥಳೀಯ ಸ್ವಸಹಾಯ ಗುಂಪಿನ ಸದಸ್ಯತ್ವ ಹೊಂದಿರಬೇಕು.
- ಅರ್ಜಿಯನ್ನು ಸ್ಥಳೀಯ ಪಶು ಆಸ್ಪತ್ರೆ, ಗ್ರಾಮ ಪಂಚಾಯತ್ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪಡೆದುಕೊಳ್ಳಬಹುದು.
- ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ತ್ರಿ-ಪ್ರತಿಯಲ್ಲಿ (3 Copies) ನಿಮ್ಮ ಗ್ರಾಮ ಪಂಚಾಯಿತಿಯ ಜಿಪಿಎಲ್ಎಫ್ ಮುಖಾಂತರ ಸ್ಥಳೀಯ ಪಶು ಆಸ್ಪತ್ರೆ ಅಥವಾ ಪಶು ಚಿಕಿತ್ಸಾಲಯಕ್ಕೆ ಸಲ್ಲಿಸಬೇಕು.
- ಅರ್ಜಿ ಸಲ್ಲಿಸಲು ಜೂನ್ 10 ಕೊನೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ವಿವರಗಳಿಗಾಗಿ ಮತ್ತು ಮಾರ್ಗದರ್ಶನಕ್ಕಾಗಿ ಆಯಾ ತಾಲ್ಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ:
- ಚಿತ್ರದುರ್ಗ ಪಶು ಆಸ್ಪತ್ರೆ: ಡಾ. ಜಿ. ಇಂದಿರಾಬಾಯಿ – 9482943111
- ಹೊಳಲ್ಕೆರೆ ಪಶು ಆಸ್ಪತ್ರೆ: ಡಾ. ರಂಗಸ್ವಾಮಿ – 9972965479
- ಹೊಸದುರ್ಗ ಪಶು ಆಸ್ಪತ್ರೆ: ಡಾ. ಸಿ. ಶಿವಪ್ಪ – 9449783775
ಅರ್ಹ ಗಣಿಬಾಧಿತ ಗ್ರಾಮಗಳ ಆಸಕ್ತ ಸ್ವಸಹಾಯ ಗುಂಪಿನ ಮಹಿಳೆಯರು ತಕ್ಷಣವೇ ಸ್ಥಳೀಯ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಯೋಜನೆಯ ಲಾಭ ಪಡೆಯುವಂತೆ ಚಿತ್ರದುರ್ಗ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ. ಸಿ. ತಿಪ್ಪೇಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
