ಸಂತ್ರಸ್ಥರ ಅವಲಂಬಿತರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ: ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿಕೆ

—Advertisement—

ಚಿತ್ರದುರ್ಗ : ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ 2026-27ನೇ ಸಾಲಿನ ಮೊದಲನೇ ತ್ರೈಮಾಸಿಕ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು.

ಸಾಮಾಜಿ ಬಹಿಷ್ಕಾರ

ಈ ವೇಳೆ  ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಮಾತನಾಡಿ, ಚಳ್ಳಕೆರೆ ತಾಲ್ಲೂಕಿನ ಕೂನಿಗರಹಳ್ಳಿ, ದೊಡ್ಡ ಬೀರನಹಳ್ಳಿ, ಹಿರಿಯೂರು ತಾಲ್ಲೂಕಿನ ಕಂಭತ್ತನಹಳ್ಳಿ, ಶಿವನಗರ ಹಾಗೂ ಹೊಸದುರ್ಗ ತಾಲೂಕಿನ ದೊಡ್ಡಘಟ್ಟ, ಜಂತಿಕೊಳಲು ಗ್ರಾಮಗಳಲ್ಲಿ 2013-14 ರಲ್ಲಿ ನಡೆದ ಸಾಮಾಜಿಕ ಬಹಿಷ್ಕಾರ ಪ್ರಕರಣದಲ್ಲಿನ ಸಂತ್ರಸ್ತರ ಅವಲಂಬಿತರ ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ಸೂಕ್ತ ಪರಿಹಾರ ನೀಡುವಂತೆ ಕೋರಿ ಒಂದು ವಾರದ ಒಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ಪರಿಶಿಷ್ಟ ಜಾತಿ ಮನೆಗಳ ಜಂಟಿ ಸಮೀಕ್ಷೆ

ಸಾಮಾಜಿಕ ಬಹಿಷ್ಕಾರದ ಸಂತ್ರಸ್ತರಿಗೆ ಸರ್ಕಾರದ ಸವಲತ್ತುಗಳು ತಲುಪಿಲ್ಲ ಎಂದು ಹಲವು ಸಂಘಟನೆಗಳು ಹೋರಾಟ ನಡೆಸಿ ಮನವಿ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ಸಂತ್ರಸ್ತರ ಅವಲಂಬಿತರಿಗೆ ಪುನರ್ ವಸತಿ ಕಲ್ಪಿಸಲು ಜಿಲ್ಲೆಯಲ್ಲಿ ಸಮಗ್ರ ಪರಿಶೀಲನೆ ನಡೆಸುವಂತೆ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಹಾಗೂ ಆಯುಕ್ತರಿಂದ ನಿರ್ದೇಶನ ಬಂದಿತ್ತು. 6 ಗ್ರಾಮಗಳಲ್ಲಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ 3 ತಾಲ್ಲೂಕಿನ ತಹಶೀಲ್ದಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪರಿಶಿಷ್ಟ ಜಾತಿ ಮನೆಗಳ ಜಂಟಿ ಸಮೀಕ್ಷೆ ನಡೆಸಿದ್ದಾರೆ. ಪೊಲೀಸ್‌ ದೋಷಾರೋಪಣ ಪಟ್ಟಿ ಆಧರಿಸಿ ಅರ್ಹ ಸಂತ್ರಸ್ತರ ಪಟ್ಟಿ ಸಿದ್ಧಪಡಿಸಲಾಗಿದೆ. ನಂತರ ಸಂತ್ರಸ್ಥರ ವಂಶವೃಕ್ಷ ಪಡೆದು, ದೌರ್ಜನ್ಯ ಸಮಯದಲ್ಲಿನ ಗ್ರಾಮದ ಮತದಾರರ ಪಟ್ಟಿಯೊಂದಿಗೆ ತಾಳೆ ಮಾಡಿ 18 ವರ್ಷ ಮೇಲ್ಪಟ್ಟ ಅವಲಂಬಿತರ ಪಟ್ಟಿ ತಯಾರಿಸಲಾಗಿದೆ. ಇದರ ಜೊತೆಗೆ, ಘಟನೆ ಸಂದರ್ಭದಲ್ಲಿ ಸಂತ್ರಸ್ತರೊಂದಿಗೆ ಇದ್ದ 18 ವರ್ಷ ತುಂಬದ ಮಕ್ಕಳ ಪ್ರತ್ಯೇಕ ಪಟ್ಟಿ ತಯಾರಿಸಲಾಗಿದೆ. ಒಟ್ಟು 45 ನೈಜ ಸಂತ್ರಸ್ತರು ಇದ್ದು 200 ಅವಲಂಬಿತರನ್ನು ಗುರುತಿಸಲಾಗಿದೆ. ಅವಲಂಬಿತರ ಪಟ್ಟಿಗೆ ಸೇರ್ಪಡೆ ಮಾಡಿದಕ್ಕೆ ಸಕಾರಣಗಳನ್ನು ನೀಡಿ ದೌರ್ಜನ್ಯ ಕಾಯ್ದೆ 1989ರ ಕಾಂಟೆಜೆನ್ಸಿ ಯೋಜನೆ 15(1)ರಡಿ ಪುನರ್ ವಸತಿ ಪರಿಹಾರಕ್ಕೆ ಸರ್ಕಾರಕ್ಕೆ ಕಳುಹಿಸುತ್ತಿರುವುದಾಗಿ ತಿಳಿಸಿದರು.

ದೌರ್ಜನ್ಯ ಪ್ರಕರಣದಲ್ಲಿ ಖುಲಾಸೆ ಪ್ರಮಾಣ ಹೆಚ್ಚಳಕ್ಕೆ ಕಳವಳ

ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಖುಲಾಸೆ ಪ್ರಮಾಣ ಹೆಚ್ಚಳವಾಗುತ್ತಿರುವುದಕ್ಕೆ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕಳವಳ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ 2021 ರಿಂದ ಇಲ್ಲಿಯವರೆಗೆ 300ಕ್ಕೂ ಹೆಚ್ಚು ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ. ಆದರೆ ಬೆರಳೆಣಿಕೆಯಷ್ಟು ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಿದೆ. ಶಿಕ್ಷೆ ಪ್ರಮಾಣ ಹೆಚ್ಚಿಸುವ ಮುಂದಿನ ಕಾನೂನು ಕ್ರಮಗಳ ಬಗ್ಗೆ ಸರ್ಕಾರಿ ಅಭಿಯೋಜಕರು ಗಮನ ಹರಿಸುವಂತೆ ನಿರ್ದೇಶನ ನೀಡಿದರು.
ಗ್ರಾಮಗಳಲ್ಲಿ ರಾಜಿ ಪಂಚಾಯಿತಿಗಳ ಮೂಲಕ ದೂರುದಾರರು ಹಾಗೂ ಸಾಕ್ಷಿಗಳ ಮನಃಪರಿವರ್ತನೆ ಮಾಡುವುದರಿಂದ ನ್ಯಾಯಾಲಯದಲ್ಲಿ ಸಾಕ್ಷಿಗಳು ವ್ಯತಿರಿಕ್ತವಾಗಿ ಹೇಳಿಕೆ ನೀಡಿ, ಪ್ರಕರಣಗಳಿಗೆ ಪ್ರತಿಕೂಲ ಪರಿಸ್ಥಿತಿ ಉಂಟಾಗಿದೆ. ಮೇ-2025 ರಿಂದ ಫೆಬ್ರವರಿ -2026 ವರೆಗೆ ಒಟ್ಟು 10 ಪ್ರಕರಣಗಳಲ್ಲಿ ಆರೋಪಿತರ ಬಿಡುಗಡೆಯಾಗಿದೆ. ಕೇವಲ 1 ಪ್ರಕರಣದಲ್ಲಿ ಶಿಕ್ಷೆಯಾಗಿದೆ. 153 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ ಎಂದು ಸರ್ಕಾರಿ ಅಭಿಯೋಜಕಿ ಕೆ.ಬಿ.ನಾಗವೇಣಿ ಸಭೆಯಲ್ಲಿ ತಿಳಿಸಿದರು.
ಸಂತ್ರಸ್ತರಿಗೆ 85.42 ಲಕ್ಷ ರೂ. ಪರಿಹಾರ
ಜುಲೈ 2025 ರಿಂದ ಫೆಬ್ರವರಿ 2026 ವರೆಗೆ ಜಿಲ್ಲೆಯಾದ್ಯಂತ ಒಟ್ಟು 68 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಒಟ್ಟು 71 ಸಂತ್ರಸ್ತರಿಗೆ ರೂ.85.42 ಲಕ್ಷ ಪರಿಹಾರವನ್ನು ಮೊದಲ ಹಂತದಲ್ಲಿ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಸಭೆಯಲ್ಲಿ ಮಾಹಿತಿ ನೀಡಿದರು.
ನ್ಯಾಯಾಲಯಕ್ಕೆ ವರದಿ ಸಲ್ಲಿಕೆ
ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಪೊಲೀಸ್‌ ಠಾಣೆಯಲ್ಲಿ ಕಳೆದ ವರ್ಷ 44 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 39 ಪ್ರಕರಣಗಳಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ. 3 ಪ್ರಕರಗಳಲ್ಲಿ ನ್ಯಾಯಾಲಯ ತಡೆ ನೀಡಿದೆ. 01 ಪ್ರಕರಣದಲ್ಲಿ ಬಿ ರಿಪೋರ್ಟ ಹಾಕಲಾಗಿದೆ. ಪ್ರಸಕ್ತ ವರ್ಷದಲ್ಲಿ ವಿವಿಧ ಠಾಣೆಗಳಲ್ಲಿ 71 ಪ್ರಕರಣಗಳು ದಾಖಲಾಗಿವೆ. ಪೊಲೀಸ್‌  ಠಾಣೆಗಳಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕುಂದು ಕೊರತೆ ಅಲಿಕೆ ಸಭೆಗಳನ್ನು ನಡೆಸಲಾಗುತ್ತಿದೆ. ಪ್ರಕರಣ ದಾಖಲಾಗಿ 60 ದಿನ ಒಳಗಾಗಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುತ್ತಿದೆ ಪೊಲೀಸ್‌  ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.
ಜಿಲ್ಲೆಯಲ್ಲಿ ದೌರ್ಜನ್ಯ ತಡೆ ಕಾಯ್ದೆ ಕುರಿತು ಹೆಚ್ಚಿನ ಜನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗದಂತೆ ನೋಡಿಕೊಳ್ಳಬೇಕು. ಎಸ್.ಸಿ.ಪಿ ಹಾಗೂ ಟಿ.ಎಸ್.ಪಿ ಅನುದಾನದ ಬಳಕೆ ಸಮರ್ಪಕವಾಗಿ ಆಗಬೇಕು. ತಾಲ್ಲೂಕು ಹಂತದಲ್ಲಿಯೂ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಪೊಲೀಸ್‌  ಠಾಣೆಗಳನ್ನು ತೆರೆಯಬೇಕು. ಜಿಲ್ಲೆಯಲ್ಲಿ ಪ್ರತಿಷ್ಠಿತ ಶಾಲೆಗಳಲ್ಲಿ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯ ತಲಾ 300 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು. ಮಹಿಳಾ ವಿದ್ಯಾರ್ಥಿ ನಿಲಯಗಳ ಬಳಿ ಪೊಲೀಸ್‌  ಗಸ್ತು ಹೆಚ್ಚಿಸಬೇಕು. ದೌರ್ಜನ್ಯ ಸಂತ್ರಸ್ತರಿಗೆ ನಿವೇಶನಗಳನ್ನು ನೀಡಬೇಕು. ದೌರ್ಜನ್ಯ ಪ್ರಕರಣದಲ್ಲಿ ಮೃತಪಟ್ಟವರ ಅವಲಂಬಿತರಿಗೆ ಖಾಯಂ ಸರ್ಕಾರಿ ನೌಕರಿ ನೀಡಬೇಕು. ಗ್ರಾಮಗಳಲ್ಲಿ ಅದರಲ್ಲಿಯೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಜಾಗೃತಿ ಸಮಿತಿ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಡಾ.ಆಕಾಶ್, ಜಿ.ಪಂ.ಯೋಜನಾ ನಿರ್ದೇಶಕಿ ಗಾಯಿತ್ರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್,ಜಾಗೃತಿ ಸಮಿತಿ ಸದಸ್ಯರಾದ ಟಿ.ಡಿ.ರಾಜಗಿರಿ, ಬಿ.ರಾಜಪ್ಪ, ಮುದ್ದಪ್ಪ.ವೈ, ಪ್ರಶಾಂತ್ ಕುಮಾರ್, ಟಿ.ರವೀಂದ್ರ, ಹೇಮೆಗೌಡ, ಜಿ.ಪಿ.ರವಿಶಂಕರ್, ಎಂ.ರಾಮಣ್ಣ ಕಾನೂನು ಸಲಹೆಗಾರ ಅವಿನಾಶ್.ಸಿ.ಎಲ್, ಸಾಮಾಜಿಕ ಬಹಿಷ್ಕಾರ ಮಾಹಿತಿ ಪ್ರತಿನಿಧಿ ಓಂಕಾರ ಮೂರ್ತಿ, ಅರುಣ್ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Leave a Comment

Home
Web Stories
Instagram
WhatsApp