ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಪ್ರಕೃತಿ ಪ್ರಿಯರು ಹಾಗೂ ರೈತರು ಕಾತುರದಿಂದ ಕಾಯುತ್ತಿದ್ದ 33ನೇ ವರ್ಷದ ‘ಫಲ-ಪುಷ್ಪ ಪ್ರದರ್ಶನ’ಕ್ಕೆ ಅದ್ಧೂರಿ ವೇದಿಕೆ ಸಜ್ಜಾಗಿದೆ. ಫೆಬ್ರವರಿ 20 ರಿಂದ 22 ರವರೆಗೆ ನಗರದ ವಿ.ಪಿ.ಬಡಾವಣೆಯಲ್ಲಿರುವ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ಈ ವರ್ಣರಂಜಿತ ಪ್ರದರ್ಶನ ನಡೆಯಲಿದ್ದು, ಈ ಬಾರಿ ಹಲವು ವಿನೂತನ ಹಾಗೂ ವಿಶೇಷ ಕಲಾಕೃತಿಗಳು ಪ್ರೇಕ್ಷಕರ ಕಣ್ಮನ ಸೆಳೆಯಲಿವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಈ ಪ್ರದರ್ಶನದ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ ಸಿಇಒ ಡಾ.ಎಸ್.ಆಕಾಶ್ ಹಾಗೂ ತೋಟಗಾರಿಕೆ ಜಂಟಿ ನಿರ್ದೇಶಕಿ ಜಿ.ಸವಿತಾ ಸಂಪೂರ್ಣ ಮಾಹಿತಿ ನೀಡಿದರು. ಚಳಿಗಾಲದ ಅವಧಿ ಹೆಚ್ಚಾಗಿದ್ದ ಕಾರಣ ಫೆಬ್ರವರಿ ಮೊದಲ ವಾರದ ಬದಲಾಗಿ ಎರಡು ವಾರ ತಡವಾಗಿ ಈ ಪ್ರದರ್ಶನ ಆರಂಭವಾಗುತ್ತಿದೆ.
- ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿ ದರ್ಶನ:
ಹಿಂದೂ-ಮುಸ್ಲಿಂ ಭಾವೈಕ್ಯತೆಯ ಶಕ್ತಿಕೇಂದ್ರ, ‘ಮಾಡಿದಷ್ಟು ನೀಡು ಭಿಕ್ಷೆ’ ಎಂಬ ತತ್ವ ಬೋಧಿಸಿದ 15-16ನೇ ಶತಮಾನದ ಮಹಾನ್ ಸಂತ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿಯವರ ಭವ್ಯ ಕಲಾಕೃತಿಯನ್ನು ಹೂವುಗಳಿಂದ ನಿರ್ಮಿಸಲಾಗುತ್ತಿದೆ. ಚಿತ್ರದುರ್ಗದಲ್ಲಿ 5 ಕೆರೆಗಳನ್ನು ಕಟ್ಟಿಸಿದ ಈ ಪವಾಡ ಪುರುಷನ ಹೊರಮಠ ಮತ್ತು ಒಳಮಠದ ದೃಶ್ಯಗಳನ್ನು ಪ್ರದರ್ಶನದಲ್ಲಿ ಮರುಸೃಷ್ಟಿಸಲಾಗುತ್ತಿದೆ. - ಸಾಹಿತಿ ಡಾ. ಬಿ.ಎಲ್. ವೇಣುಗೆ ಗೌರವ:
ಚಿತ್ರದುರ್ಗದ ಮಣ್ಣಿನ ಮಗ, ಖ್ಯಾತ ಕಥೆಗಾರ ಹಾಗೂ ಚಲನಚಿತ್ರ ಸಂಭಾಷಣೆಕಾರ ಡಾ. ಬಿ.ಎಲ್. ವೇಣು (ಬಿ.ಎಲ್.ವೇಣುಗೋಪಾಲ) ಅವರಿಗೆ ಸಂಭ್ರಮದ ಗೌರವ ಸಮರ್ಪಿಸುವ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ. 74 ಸಾಹಿತ್ಯ ಕೃತಿಗಳು, 66 ಚಲನಚಿತ್ರಗಳಿಗೆ ಸಂಭಾಷಣೆ ರಚಿಸಿರುವ ಇವರ ಕನ್ನಡ ಸೇವೆಗೆ ರಾಜ್ಯೋತ್ಸವ, ಮಹರ್ಷಿ ವಾಲ್ಮೀಕಿ, ರಾಜವೀರ ಮದಕರಿ ಸೇರಿದಂತೆ ಹತ್ತು-ಹಲವು ಪ್ರಶಸ್ತಿಗಳು ಸಂದಿವೆ. - ಇಂಡೋನೇಷ್ಯಾದ ಜಾನೂರ್ ಕಲೆ ಮತ್ತು ಮರಳು ಕಲೆ:
ತೆಂಗಿನ ಗರಿಗಳನ್ನು (ಹಸಿರು ಮತ್ತು ಹಳದಿ ಬಣ್ಣ) ಬಳಸಿ ಮಾಡುವ ಇಂಡೋನೇಷ್ಯಾದ ‘ಜಾನೂರ್’ ಎಂಬ ಸಾಂಪ್ರದಾಯಿಕ ಕಲೆಯ ವಿಶಿಷ್ಟ ವಿನ್ಯಾಸಗಳನ್ನು ಈ ಬಾರಿ ಪರಿಚಯಿಸಲಾಗುತ್ತಿದೆ. ಇದರ ಜೊತೆಗೆ, ಕೃತಕ ಅಂಟು ಬಳಸದೆ ಕೇವಲ ನೀರು ಮತ್ತು ಮರಳಿನಿಂದ ರಚಿಸಿದ ಚಿತ್ರದುರ್ಗದ ಐತಿಹಾಸಿಕ ಕೋಟೆ, ಒಂಟಿಕಲ್ಲು ಬಸವಣ್ಣ ಹಾಗೂ ವೀರವನಿತೆ ಒನಕೆ ಓಬವ್ವರ ಅದ್ಭುತ ‘ಮರಳು ಕಲೆ’ ಕಣ್ಮನ ಸೆಳೆಯಲಿದೆ. - ಪರಿಸರ ಜಾಗೃತಿ: ಜೇನು ನೊಣ ಮತ್ತು ಸಾಲುಮರದ ತಿಮ್ಮಕ್ಕ:
ಜಗತ್ತಿನ ಶೇ.35ರಷ್ಟು ಆಹಾರ ಉತ್ಪಾದನೆಗೆ ಕಾರಣವಾದ, ನಾಶವಾಗುತ್ತಿರುವ ಜೇನುನೊಣಗಳ ಕುರಿತು ಜಾಗೃತಿ ಮೂಡಿಸಲು ಹೂವು ಮತ್ತು ಜೇನು ನೊಣಗಳ ಆಕರ್ಷಕ ಕಲಾಕೃತಿ ಪ್ರದರ್ಶಿಸಲಾಗುತ್ತಿದೆ. ಜೊತೆಗೆ ಇತ್ತೀಚೆಗಷ್ಟೇ ನಿಧನರಾದ, 8000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ ಪದ್ಮಶ್ರೀ ಪುರಸ್ಕೃತ 114 ವರ್ಷದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ಪರಿಸರ ಸೇವೆಯನ್ನು ಸ್ಮರಿಸುವ ವಿಶೇಷ ಕಲಾಕೃತಿ ಇರಲಿದೆ. - ಕೋಟೆ ಉಯ್ಯಾಲೆ ಮತ್ತು ಜಟಕಾ ಬಂಡಿ:
ಚಿತ್ರದುರ್ಗ ಕೋಟೆಯ ಆಕರ್ಷಣೆಗಳಲ್ಲಿ ಒಂದಾದ ಉಯ್ಯಾಲೆ ಕಂಬದ ಪ್ರತಿಕೃತಿಯನ್ನು ವಿಶೇಷವಾಗಿ ಪ್ರದರ್ಶಿಸಲಾಗುತ್ತಿದೆ. ಇದರ ಜೊತೆಗೆ ಜಟಕಾ ಬಂಡಿ (ಟಾಂಗಾ), ಕುದುರೆ, ಹುಡುಗ-ಹುಡುಗಿಯರ ಕಲಾಕೃತಿಗಳಿಗೆ ಹೂವಿನ ಅಲಂಕಾರ ಮಾಡಲಾಗಿದೆ. ನೀರು ಹರಿಯುವಂತಹ ಕೃತಕ ಜಲಪಾತಗಳು ಮತ್ತು ಚಿತ್ರಕಲಾವಿದರ ಪೇಂಟಿಂಗ್‌ಗಳು ಪ್ರದರ್ಶನಕ್ಕೆ ಮೆರಗು ನೀಡಲಿವೆ.
ಮೆಲಾಪೋಡಿಯಂ, ಕ್ಲಿಯೋಂ (ಸ್ಪೈಡರ್), ಹಾಲಿಯಾಕ್, ಡಾಲಿಯಾ, ಸಾಲ್ವಿಯಾ (ಕೆಂಪು, ನೀಲಿ, ಬಿಳಿ), ಚೆಂಡು ಹೂ, ಚಿಂತಾಮಣಿ ಚೆಂಡು ಹೂ, ಪೆಟೂನಿಯಾ, ಕಾಸ್ಮಾಸ್ ಮಿಕ್ಸ್, ಬಾಲ್ಸಂ, ಜಿರೇನಿಯಂ ಮಿಕ್ಸ್, ಆಂಟಿರಿನಮ್ ಮಿಕ್ಸ್, ಕ್ಯಾಲೊಂಡುಲಾ, ಗಜೇನಿಯ, ಪೆಂಟಾಸ್, ಯುಪೋರ್ಬಿಯ ಮಿಲ್ಲಿ, ಬಿಗೋನಿಯಾ, ವಿಂಕಾ, ವರ್ಬೆನಾ ಸೇರಿದಂತೆ ಚಿತ್ತಾಕರ್ಷಕ ವರ್ಣಗಳ 70ಕ್ಕೂ ಹೆಚ್ಚು ಜಾತಿಯ ಹೂವಿನ ಗಿಡಗಳನ್ನು ಕುಂಡಗಳಲ್ಲಿ ಬೆಳೆಸಲಾಗಿದೆ. ಜಿಲ್ಲೆಯ ರೈತರು ಬೆಳೆದಿರುವ ಹೂ, ಹಣ್ಣು, ತರಕಾರಿ ಸೇರಿದಂತೆ 500ಕ್ಕೂ ಹೆಚ್ಚು ತೋಟಗಾರಿಕೆ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದ್ದು, ಅತ್ಯುತ್ತಮ ಬೆಳೆಗಾರರಿಗೆ ಬಹುಮಾನ ನೀಡಲಾಗುವುದು.
ತೋಟಗಾರಿಕೆ ಜಂಟಿ ನಿರ್ದೇಶಕಿ ಜಿ. ಸವಿತಾ ಅವರು ರೈತರಿಗೆ ಸಿಹಿಸುದ್ದಿ ನೀಡಿದ್ದಾರೆ. ಅಡಿಕೆ, ತೆಂಗು ಮತ್ತು ಮಾವು ಬೆಳೆಗಳಿಗೆ ಹವಾಮಾನ ಆಧಾರಿತ ವಿಮೆ ಮಾಡಿಸಿದ್ದ 4,898 ರೈತರಿಗೆ ‘ಕ್ಷೇಮ’ ಇನ್ಶೂರೆನ್ಸ್ ಕಂಪನಿಯಿಂದ ಬರಬೇಕಿದ್ದ 15 ಕೋಟಿ ರೂ. ಹಣ ವಿಳಂಬವಾಗಿತ್ತು. ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಕೃಷಿ ಇಲಾಖೆಯ ಸತತ ಒತ್ತಡದ ಫಲವಾಗಿ, ಮುಂದಿನ ಎರಡು ವಾರಗಳಲ್ಲಿ ನೇರವಾಗಿ ಡಿಬಿಟಿ (DBT) ಮೂಲಕ ರೈತರ ಖಾತೆಗಳಿಗೆ ಹಣ ಜಮೆ ಮಾಡುವುದಾಗಿ ಕಂಪನಿ ಲಿಖಿತ ಭರವಸೆ ನೀಡಿದೆ.
ಲಾಲ್‌ಬಾಗ್ ಮಾದರಿ ವಿಚಾರ ಸಂಕಿರಣ: ಪ್ರದರ್ಶನದ ಅಂಗವಾಗಿ ಬೆಂಗಳೂರಿನ ಲಾಲ್‌ಬಾಗ್ ಮಾದರಿಯಲ್ಲಿ ರೈತರಿಗಾಗಿ ವಿಶೇಷ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಈರುಳ್ಳಿ, ತೆಂಗು ಮತ್ತು ಅಡಿಕೆಯಲ್ಲಿ ಅಂತರಬೆಳೆ ಹಾಗೂ ಆಧುನಿಕ ಕೃಷಿ ತಂತ್ರಜ್ಞಾನಗಳ ಬಗ್ಗೆ ವಿಜ್ಞಾನಿಗಳು ಮಾರ್ಗದರ್ಶನ ನೀಡಲಿದ್ದಾರೆ.
- ಶಾಲಾ ಮಕ್ಕಳಿಗೆ: ಜಾನಪದ, ಭಾವಗೀತೆ, ಚಿತ್ರಕಲೆ, ಪ್ರಬಂಧ, ಪ್ಯಾನ್ಸಿ ಡ್ರೆಸ್ ಮತ್ತು ಹಣ್ಣು-ತರಕಾರಿ ಗುರುತಿಸುವ ಸ್ಪರ್ಧೆ.
- ಸಾರ್ವಜನಿಕರಿಗೆ: ರಂಗೋಲಿ ಸ್ಪರ್ಧೆ, ಅಲಂಕಾರಿಕ ಕುಂಡಗಳ ಜೋಡಣೆ ಮತ್ತು ಉದ್ಯಾನವನ ನಿರ್ಮಾಣ ಸ್ಪರ್ಧೆ.
ದಿನಾಂಕ: ಫೆಬ್ರವರಿ 20, ಸಂಜೆ 6:00 ಗಂಟೆಗೆ.
ಸ್ಥಳ: ತೋಟಗಾರಿಕೆ ಇಲಾಖೆ ಆವರಣ, ವಿ.ಪಿ.ಬಡಾವಣೆ, ಚಿತ್ರದುರ್ಗ.
ಉದ್ಘಾಟನೆ: ಸಚಿವ ಡಿ. ಸುಧಾಕರ್.
ಅಧ್ಯಕ್ಷತೆ: ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ.
ಸಮಾರಂಭದಲ್ಲಿ ಸಂಸದ ಗೋವಿಂದ ಎಂ. ಕಾರಜೋಳ, ಶಾಸಕರಾದ ಟಿ. ರಘುಮೂರ್ತಿ, ಬಿ.ಜಿ. ಗೋವಿಂದಪ್ಪ, ಎನ್.ವೈ. ಗೋಪಾಲಕೃಷ್ಣ, ಡಾ. ಎಂ. ಚಂದ್ರಪ್ಪ ಹಾಗೂ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರಾದ ಡಾ.ಬಿ.ಯೋಗೇಶ್ ಬಾಬು, ಜಿ.ಎಸ್.ಮಂಜುನಾಥ್, ಪಿ.ರಘು, ಹೆಚ್.ಬಿ.ಮಂಜಪ್ಪ, ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಿ.ಟಿ.ಶ್ರೀನಿವಾಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಚಿತ್ರದುರ್ಗದ ಕ್ಷಣ ಕ್ಷಣದ ತಾಜಾ ಸುದ್ದಿಗಳು ಮತ್ತು ಲೈವ್ ಅಪ್ಡೇಟ್‌ಗಳಿಗಾಗಿ ಮಧ್ಯ ಕರ್ನಾಟಕ ಲೈವ್ ಪೋರ್ಟಲ್‌ಗೆ ಭೇಟಿ ನೀಡುತ್ತಿರಿ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
madhayakarnatakalive@gmail.com
