ಕೋಟೆನಾಡಿನ ರೈಲ್ವೆ ಸಮಸ್ಯೆಗಳಿಗೆ ಶೀಘ್ರ ಮುಕ್ತಿ: ಶಾಸಕ ಪಪ್ಪಿ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ವಿ. ಸೋಮಣ್ಣ

Author Picture
Published On: January 22, 2026

—Advertisement—

ಚಿತ್ರದುರ್ಗ: ಜಿಲ್ಲೆಯ ದಶಕಗಳ ರೈಲ್ವೆ ಸಮಸ್ಯೆಗಳಿಗೆ ಕೊನೆಗೂ ಪರಿಹಾರ ಸಿಗುವ ಕಾಲ ಹತ್ತಿರ ಬಂದಿದೆ. ಚಿತ್ರದುರ್ಗ ನಗರದ ಸಂಚಾರ ದಟ್ಟಣೆ ನಿವಾರಿಸುವ ಪ್ರಮುಖ ರೈಲ್ವೆ ಮೇಲ್ಸೇತುವೆಗಳು ಹಾಗೂ ಮಳೆಗಾಲದಲ್ಲಿ ಸಾರ್ವಜನಿಕರಿಗೆ ನರಕಯಾತನೆ ನೀಡುತ್ತಿದ್ದ ಕೆಳಸೇತುವೆಗಳ (Underpass) ಅಭಿವೃದ್ಧಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಹಸಿರು ನಿಶಾನೆ ತೋರಿಸಿದ್ದಾರೆ.

ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಕಳೆದ ಮೇ ತಿಂಗಳಲ್ಲಿ ಈ ಸಂಬಂಧ ಸಲ್ಲಿಸಿದ್ದ ಸುದೀರ್ಘ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕೈಗೊಂಡಿರುವ ಕ್ರಮಗಳ ಬಗ್ಗೆ ಲಿಖಿತವಾಗಿ ಮಾಹಿತಿ ನೀಡಿದ್ದಾರೆ.

ಮೂರು ಪ್ರಮುಖ ರೈಲ್ವೆ ಗೇಟ್‍ಗಳಿಗೆ ಮುಕ್ತಿ!

ನಗರದ ಸಂಚಾರ ದಟ್ಟಣೆಗೆ ಪ್ರಮುಖ ಕಾರಣವಾಗಿದ್ದ ಮೂರು ರೈಲ್ವೆ ಗೇಟ್‌ಗಳ ಜಾಗದಲ್ಲಿ ಮೇಲ್ಸೇತುವೆ (ROB) ನಿರ್ಮಾಣ ಪ್ರಕ್ರಿಯೆ ಚುರುಕುಗೊಂಡಿದೆ:

  1. ಕವಾಡಿಗರಹಟ್ಟಿ ರೈಲ್ವೆ ಗೇಟ್ (ಸಂಖ್ಯೆ 20): ಅಮೃತಪುರ-ಚಿತ್ರದುರ್ಗ ನಿಲ್ದಾಣಗಳ ನಡುವಿನ ಈ ಗೇಟ್ ಬಳಿ ಮೇಲ್ಸೇತುವೆ ಮತ್ತು ಸಬ್‌ವೇ ನಿರ್ಮಾಣಕ್ಕೆ ನಕ್ಷೆ ಅನುಮೋದನೆಗೊಂಡಿದೆ. ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾಮಗಾರಿ ಪೂರ್ಣಗೊಂಡ ತಕ್ಷಣ ಇಲ್ಲಿ ಕೆಲಸ ಆರಂಭವಾಗಲಿದೆ.

  2. ದಾವಣಗೆರೆ ರಸ್ತೆ ರೈಲ್ವೆ ಗೇಟ್ (ಸಂಖ್ಯೆ 22): ಚಿತ್ರದುರ್ಗ-ಬಾಲೇನಹಳ್ಳಿ ನಿಲ್ದಾಣಗಳ ನಡುವಿನ ಈ ಗೇಟ್ ಬಳಿ ವೆಚ್ಚ ಹಂಚಿಕೆ ಆಧಾರದ ಮೇಲೆ ಮೇಲ್ಸೇತುವೆ ಮಂಜೂರಾಗಿದ್ದು, ಸದ್ಯ ನಕ್ಷೆ (Design) ಸಿದ್ಧಪಡಿಸಲಾಗುತ್ತಿದೆ.

  3. ಭೀಮಸಮುದ್ರ ರಸ್ತೆ ರೈಲ್ವೆ ಗೇಟ್ (ಸಂಖ್ಯೆ 15): ಈ ಹಿಂದೆ ವೆಚ್ಚ ಹಂಚಿಕೆ ಅಡಿಯಲ್ಲಿದ್ದ ಈ ಯೋಜನೆಯನ್ನು ಈಗ ರೈಲ್ವೆ ಇಲಾಖೆಯೇ ಶೇ.100 ರಷ್ಟು ಪೂರ್ಣ ವೆಚ್ಚ ಭರಿಸಿ ನಿರ್ಮಿಸಲು ಒಪ್ಪಿಗೆ ನೀಡಿದೆ. ಪ್ರಸ್ತುತ ಭೂಸ್ವಾಧೀನ ಪ್ರಕ್ರಿಯೆ ಚಾಲನೆಯಲ್ಲಿದೆ.

ಕೆಳಸೇತುವೆಗಳ ‘ಜಲಾವೃತ’ ಸಮಸ್ಯೆಗೆ ಬ್ರೇಕ್

ಮಳೆ ಬಂದಾಗ ರೈಲ್ವೆ ಕೆಳಸೇತುವೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುತ್ತಿದ್ದ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಇಲಾಖೆ, ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ:

  • ತುರುವನೂರು ರಸ್ತೆ: ಇಲ್ಲಿ ನೀರು ನಿಲ್ಲದಂತೆ 24 ಗಂಟೆಗಳ ಕಾಲ ವಾಚ್‌ಮನ್ ಮತ್ತು ಮೋಟಾರ್ ಪಂಪ್ ವ್ಯವಸ್ಥೆ ಮಾಡಲಾಗಿದೆ.

  • ಮಾನಂಗಿ ಗ್ರಾಮ: ಚರಂಡಿ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ನೀರು ನಿಲ್ಲುವ ಸಮಸ್ಯೆ ನಿವಾರಣೆಯಾಗಿದೆ.

  • ಇತರೆ ಭಾಗಗಳು: ಕುರುಬರಹಳ್ಳಿ, ರಟ್ಟಿಹಳ್ಳಿ ಮತ್ತು ಬೆಟ್ಟದ ನಾಗೇನಹಳ್ಳಿ ಕೆಳಸೇತುವೆಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ.

ಪಪ್ಪಿ’ಸ್ ಸ್ಟೂಡೆಂಟ್ ವಿಂಗ್ ಮನವಿಗೆ ಮನ್ನಣೆ

ಮೆದೇಹಳ್ಳಿ ಮತ್ತು ಗೋನೂರು ರಸ್ತೆಯ ಕೆಳಸೇತುವೆಗಳಲ್ಲಿನ ಗುಂಡಿಗಳಿಂದ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆ ಬಗ್ಗೆ ‘ಪಪ್ಪಿ’ಸ್ ಸ್ಟೂಡೆಂಟ್ ವಿಂಗ್’ ಸಂಘಟನೆ ನೀಡಿದ್ದ ಮನವಿಗೂ ಸಚಿವರು ಸ್ಪಂದಿಸಿದ್ದು, ಈ ಭಾಗದ ರಸ್ತೆ ಸುಧಾರಣೆಗೂ ಸೂಚನೆ ನೀಡಿದ್ದಾರೆ.

ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರ ಸತತ ಬೆನ್ನಟ್ಟುವಿಕೆಯಿಂದಾಗಿ ಕೋಟೆನಾಡಿನ ದೀರ್ಘಕಾಲದ ರೈಲ್ವೆ ಬೇಡಿಕೆಗಳು ಈಡೇರುವ ಹಾದಿ ಸುಗಮವಾಗಿದೆ. ಇದು ಚಿತ್ರದುರ್ಗದ ಜನತೆಯಲ್ಲಿ ಹೊಸ ಭರವಸೆ ಮೂಡಿಸಿದೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

madhayakarnatakalive@gmail.com

"ಮಧ್ಯ ಕರ್ನಾಟಕ ಲೈವ್ (Madhyakarnataka.live) ಕರ್ನಾಟಕದ ಹೃದಯಭಾಗದ ನೈಜ, ನಿಖರ ಮತ್ತು ಕ್ಷಣ ಕ್ಷಣದ ಸುದ್ದಿಗಳಿಗಾಗಿ ಮೀಸಲಾದ ಡಿಜಿಟಲ್ ಸುದ್ದಿ ವೇದಿಕೆಯಾಗಿದೆ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಜಿಲ್ಲೆಗಳ ಸ್ಥಳೀಯ ಸಮಸ್ಯೆಗಳು, ರಾಜಕೀಯ, ಕೃಷಿ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಜಗತ್ತಿಗೆ ತಲುಪಿಸುವುದು ನಮ್ಮ ಗುರಿ. ನಾವು ಕೇವಲ ಸುದ್ದಿಯನ್ನಷ್ಟೇ ಅಲ್ಲ, ಜನರ ಧ್ವನಿಯಾಗಲು ಬಯಸುತ್ತೇವೆ."… Read More

Related News

Leave a Comment

Home
Web Stories
Instagram
WhatsApp