ಕ್ಷಯ ರೋಗ ಮುಕ್ತ ಭಾರತಕ್ಕೆ ಜನಶಕ್ತಿ ಅಗತ್ಯ -ಡಿಹೆಚ್‍ಒ ಡಾ. ಜಿ.ಪಿ. ರೇಣುಪ್ರಸಾದ್

ಚಿತ್ರದುರ್ಗದ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಲ್ಲಿ ನಡೆದ ವಿಶ್ವ ಕ್ಷಯರೋಗ ದಿನಾಚರಣೆ ಉದ್ಘಾಟನಾ ಸಮಾರಂಭ

—Advertisement—

ಚಿತ್ರದುರ್ಗ: ಕ್ಷಯ ರೋಗವು ಬಡವ-ಬಲ್ಲಿದ, ಗಂಡು-ಹೆಣ್ಣೆಂಬ ಭೇದವಿಲ್ಲದೆ ರೋಗನಿರೋಧಕ ಶಕ್ತಿ ಕಡಿಮೆ ಇರುವ ಯಾರಿಗೆ ಬೇಕಾದರೂ ಬರಬಹುದು. ಜನಶಕ್ತಿಯೊಂದಿಗೆ ಒಗ್ಗೂಡಿ ಶ್ರಮಿಸಿದರೆ ಮಾತ್ರ ಕ್ಷಯ ಮುಕ್ತ ಭಾರತ ನಿರ್ಮಿಸಲು ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಿ.ಪಿ. ರೇಣುಪ್ರಸಾದ್ ತಿಳಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಧೂಮಪಾನಿಗಳು, ಚಿಕಿತ್ಸೆ ಪಡೆಯದ ಕ್ಷಯರೋಗಿಗಳ ಸಂಪರ್ಕದಲ್ಲಿ ಇರುವವರು ಹಾಗೂ ಗಾಳಿ-ಬೆಳಕಿಲ್ಲದ ಇಕ್ಕಟ್ಟಾದ ಜಾಗದಲ್ಲಿ ವಾಸಿಸುವವರಿಗೆ ರೋಗ ಹರಡುವ ಸಾಧ್ಯತೆ ಹೆಚ್ಚು. ಎರಡು ವಾರಕ್ಕಿಂತ ಹೆಚ್ಚು ಕಾಲ ಕೆಮ್ಮು, ಕಫ, ಸಂಜೆ ವೇಳೆ ಜ್ವರ, ತೂಕ ಇಳಿಕೆ ಹಾಗೂ ಹಸಿವಾಗದಿರುವುದು ಕ್ಷಯದ ಪ್ರಮುಖ ಲಕ್ಷಣಗಳಾಗಿದ್ದು, ಇಂತಹ ಲಕ್ಷಣ ಕಂಡುಬಂದಲ್ಲಿ ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು. ರೋಗ ದೃಢಪಟ್ಟಲ್ಲಿ ಉಚಿತವಾಗಿ ದೊರೆಯುವ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಎಂದು ಹೇಳಿದರು.

ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಶ್ವಾಸಕೋಶ ತಜ್ಞ ಡಾ. ಬಸವರಾಜ್ ಸಂಗೊಳ್ಳಿ ಉಪನ್ಯಾಸ ನೀಡಿ, ದೇಶದಲ್ಲಿ ಪ್ರತಿ ಮೂರು ನಿಮಿಷಕ್ಕೆ ಇಬ್ಬರು ಕ್ಷಯದಿಂದ ಮರಣ ಹೊಂದುತ್ತಿರುವುದು ವಿಷಾದನೀಯ. ಸಮಾಜದಲ್ಲಿನ ತಪ್ಪು ತಿಳುವಳಿಕೆಗಳು ರೋಗ ನಿಯಂತ್ರಣಕ್ಕೆ ಅಡ್ಡಿಯಾಗಿವೆ. ಈ ಹಿಂದೆ ಎಂ.ಡಿ.ಆರ್ ಟಿಬಿ ರೋಗಕ್ಕೆ ಎರಡು ವರ್ಷ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಈಗ ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಇಂಜೆಕ್ಷನ್ ಇಲ್ಲದೆ ಕೇವಲ ಮಾತ್ರೆಗಳ ಮೂಲಕ ಆರು ತಿಂಗಳಲ್ಲೇ ರೋಗಿಯನ್ನು ಸಂಪೂರ್ಣ ಗುಣಪಡಿಸಬಹುದು ಎಂದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸಿ.ಓ. ಸುಧಾ ಮಾತನಾಡಿ, ಒಬ್ಬ ಕ್ಷಯ ರೋಗಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ವರ್ಷಕ್ಕೆ 10 ರಿಂದ 15 ಜನರಿಗೆ ಸೋಂಕು ಹರಡಬಹುದು. ಇಲಾಖೆಯ ಅಧಿಕಾರಿಗಳು ಹಾಗೂ ಸಮುದಾಯ ಒಗ್ಗೂಡಿ ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸೋಣ ಎಂದರು.

ಜಿಲ್ಲಾ ಯೋಜನೆ ಅಭಿವೃದ್ಧಿ ಅಧಿಕಾರಿ ಡಾ. ಕಾಶಿ ಮಾತನಾಡಿ, ವೈಜ್ಞಾನಿಕವಾಗಿ ನಾವುಗಳು ಮುಂದುವರೆದಿರುವುದು ನಿಜ. ಆದರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ನಾವುಗಳು ಹಿಂದೆ ಇದ್ದೇವೆ. ಬಡತನ ಮತ್ತು ಅಪೌಷ್ಟಿಕತೆಯಿಂದ ರೋಗಗಳು ಬರುವ ಸಾಧ್ಯತೆ ಹೆಚ್ಚಿದ್ದು, ರೋಗಿಗಳಿಗೆ ಚಿಕಿತ್ಸೆಯ ಜೊತೆಗೆ ಮಾಹಿತಿ ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಕ್ಷಯ ಮುಕ್ತ 11 ಗ್ರಾಮ ಪಂಚಾಯಿತಿಗಳಾದ ಹಿರೆಗುಂಟನೂರು, ಚನ್ನಮ್ಮನಾಗ್ತಿಹಳ್ಳಿ, ರೇಣುಕಾಪುರ, ರಾಮಜೋಗಿಹಳ್ಳಿ, ಈಶ್ವರಗೆರೆ, ಮಸ್ಕಲ್, ಸೂರಗೊಂಡನಹಳ್ಳಿ, ವಿ.ವಿ.ಪುರ, ದೇವಪುರ, ಕಂಚಿಪುರ ಹಾಗೂ ಗಂಗಸಮುದ್ರ ಪಂಚಾಯಿತಿಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಡಿ.ಎಂ. ಅಭಿನವ, ಡಿ.ಎಲ್.ಓ ಡಾ. ನಾಗರಾಜ್, ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ವಿವಿಧ ವೃಂದದ ಅಧಿಕಾರಿಗಳು ಹಾಜರಿದ್ದರು. ಬಿ.ಎಚ್.ಇ.ಓ ಬಿ. ಜಾನಕಿ ಪ್ರತಿಜ್ಞಾವಿಧಿ ಬೋಧಿಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಕಾರ್ಯಕ್ರಮ ನಿರೂಪಿಸಿದರು.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp