ಚಳ್ಳಕೆರೆಯಲ್ಲಿ ಇಂದು ಸಚಿವ ಡಿ. ಸುಧಾಕರ್ ಅಂತ್ಯಕ್ರಿಯೆ: ಸಕಲ ಸಿದ್ಧತೆ; ಚಿತ್ರದುರ್ಗ ಜಿಲ್ಲಾದ್ಯಂತ ಸರ್ಕಾರಿ ರಜೆ

Author Picture
Published On: May 11, 2026

—Election Update—

ಚಳ್ಳಕೆರೆ (Madhyakarnataka.live): ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರ ಅಂತ್ಯಕ್ರಿಯೆ ಇಂದು (ಮೇ 11, ಸೋಮವಾರ) ಸಂಜೆ 4 ಗಂಟೆಗೆ ಚಳ್ಳಕೆರೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ಸಚಿವರ ನಿಧನದ ಹಿನ್ನೆಲೆಯಲ್ಲಿ ಇಂದು ಚಿತ್ರದುರ್ಗ ಜಿಲ್ಲೆಯಾದ್ಯಂತ ಸಾರ್ವಜನಿಕ ರಜೆ ಘೋಷಿಸಲಾಗಿದೆ.

ಜೈನ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ: ಕುಟುಂಬದ ಇಚ್ಛೆಯಂತೆ ಮತ್ತು ಜೈನ ಸಮಾಜದ ಸಂಪ್ರದಾಯದಂತೆ ಸಚಿವರ ಅಂತ್ಯಕ್ರಿಯೆ ನಡೆಯಲಿದೆ. ಚಳ್ಳಕೆರೆಯ ಚಿತ್ರದುರ್ಗ ರಸ್ತೆಯಲ್ಲಿರುವ ‘ಮೈಲಾರ ಬ್ಯಾಡ್ಮಿಂಟನ್ ಕೋರ್ಟ್’ ಆವರಣದಲ್ಲಿ ಇಂದು ಸಂಜೆ 4 ಗಂಟೆಗೆ ಅಂತಿಮ ವಿಧಿವಿಧಾನಗಳು ಜರುಗಲಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಡಿಸಿ ಟಿ. ವೆಂಕಟೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಅಪಾರ ಬೆಂಬಲಿಗರಿಂದ ಅಂತಿಮ ದರ್ಶನ: ಭಾನುವಾರ ಮುಂಜಾನೆ ಸಚಿವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಳ್ಳಕೆರೆ ಸೇರಿದಂತೆ ಇಡೀ ಜಿಲ್ಲೆ ಶೋಕಸಾಗರದಲ್ಲಿ ಮುಳುಗಿದೆ. ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಿಂದ ಭಾನುವಾರ ಪಾರ್ಥಿವ ಶರೀರವನ್ನು ಬೆಂಗಳೂರಿನ ನಿವಾಸಕ್ಕೆ ತಂದು, ಬಳಿಕ ಚಳ್ಳಕೆರೆಗೆ ತರಲಾಯಿತು. ಸಚಿವರ ಅಂತಿಮ ದರ್ಶನ ಪಡೆಯಲು ಅಪಾರ ಸಂಖ್ಯೆಯ ಅಭಿಮಾನಿಗಳು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಜಮಾಯಿಸಿದ್ದರು.

ಇಂದು ಚಿತ್ರದುರ್ಗ ಜಿಲ್ಲೆಗೆ ಸರ್ಕಾರಿ ರಜೆ: ಸಚಿವ ಡಿ. ಸುಧಾಕರ್ ಅವರ ನಿಧನದ ಶೋಕಾಚರಣೆಗಾಗಿ ರಾಜ್ಯ ಸರ್ಕಾರ ಮೇ 10 ಮತ್ತು 11 ರಂದು ಶೋಕಾಚರಣೆ ಘೋಷಿಸಿದೆ. ಮೇ 11ರ (ಸೋಮವಾರ) ರಂದು ಚಿತ್ರದುರ್ಗ ಜಿಲ್ಲೆಯಾದ್ಯಂತ ಸಾರ್ವಜನಿಕ ಸರ್ಕಾರಿ ಕಚೇರಿ, ಶಾಲಾ-ಕಾಲೇಜು ಹಾಗೂ ಸರ್ಕಾರಿ ಸ್ವಾಮ್ಯದ ಅಂಗಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

  • ಸೂಚನೆ: ಆದರೆ, ಪೂರ್ವನಿಗದಿಯಂತೆ ಪಿಯುಸಿ-2 (PUC-2) ಪರೀಕ್ಷೆಗಳು ಯಥಾವತ್ತಾಗಿ ನಡೆಯಲಿವೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಗಣ್ಯರ ಸಂತಾಪ: ಸಚಿವರ ಅಕಾಲಿಕ ನಿಧನಕ್ಕೆ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳು, ಮಾಜಿ ಸಚಿವ ಎಚ್. ಆಂಜನೇಯ, ಸೇರಿದಂತೆ ಹಲವು ರಾಜಕೀಯ ಮುಖಂಡರು ಮತ್ತು ಮಠಾಧೀಶರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ಸುಧಾಕರ್ ಅವರು ಅಜಾತಶತ್ರುವಾಗಿ ಎಲ್ಲರೊಡನೆ ಬೆರೆಯುತ್ತಿದ್ದರು, ಅವರ ಸಾವು ತುಂಬಲಾರದ ನಷ್ಟ” ಎಂದು ಗಣ್ಯರು ಕಂಬನಿ ಮಿಡಿದಿದ್ದಾರೆ.

ಸುಧಾಕರ್ ಅಂತ್ಯಕ್ರಿಯೆ: ಇಂದು ಸಿಎಂ, ಡಿಸಿಎಂ ಭಾಗಿ; ಗಣ್ಯರ ದಂಡು

ಚಳ್ಳಕೆರೆ: ಇಂದು ನಡೆಯಲಿರುವ ಸಚಿವ ಡಿ.ಸುಧಾಕರ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಲು ರಾಜ್ಯದ ಪ್ರಮುಖ ಗಣ್ಯರು ಚಳ್ಳಕೆರೆಗೆ ಆಗಮಿಸುತ್ತಿದ್ದಾರೆ. ನಗರದ ‘ಸುಧಾಕರ್ ಸ್ಟೇಡಿಯಂ’ನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ.

ಪಾಲ್ಗೊಳ್ಳಲಿರುವ ಪ್ರಮುಖ ಗಣ್ಯರು:

  • ಮುಖ್ಯಮಂತ್ರಿ ಸಿದ್ದರಾಮಯ್ಯ

  • ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

  • ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ

  • ರಾಜ್ಯ ಸಚಿವ ಸಂಪುಟದ ಹಲವು ಸಚಿವರು

ಅಂತಿಮ ದರ್ಶನ ಪಡೆದ ಇತರ ಗಣ್ಯರು ಹಾಗೂ ಅಧಿಕಾರಿಗಳು:

  • ಸಚಿವರು: ಶಿವರಾಜ್ ತಂಗಡಗಿ (ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ), ಎನ್.ಎಸ್. ಬೋಸರಾಜು (ಸಣ್ಣ ನೀರಾವರಿ ಸಚಿವ).

  • ಶಾಸಕರು: ಬಿ.ಜಿ.ಗೋವಿಂದಪ್ಪ (ಹೊಸದುರ್ಗ), ಕೆ.ಸಿ.ವೀರೇಂದ್ರ ಪಪ್ಪಿ (ಚಿತ್ರದುರ್ಗ), ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ.

  • ನಿಗಮ ಮಂಡಳಿ ಅಧ್ಯಕ್ಷರು: ಡಾ.ಬಿ.ಯೋಗೇಶ್ ಬಾಬು (ದ್ರಾಕ್ಷಾರಸ ಮಂಡಳಿ), ಜಿ.ಎಸ್.ಮಂಜುನಾಥ (ಆದಿಜಾಂಬವ ಅಭಿವೃದ್ಧಿ ನಿಗಮ), ಪಿ.ರಘು (ಸಫಾಯಿ ಕರ್ಮಚಾರಿ ಆಯೋಗ), ಎಂ.ಕೆ.ತಾಜ್‌ಪೀರ್ (ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ).

  • ಅಧಿಕಾರಿಗಳು: ಜಿ.ಪಂ. ಸಿಇಓ ಡಾ.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೇರಿದಂತೆ ಹಲವು ಜನಪ್ರತಿನಿಧಿಗಳು.

ಬಿಗಿ ಬಂದೋಬಸ್ತ್: ಅಗಲಿದ ನಾಯಕನಿಗೆ ಗೌರವ ಸಲ್ಲಿಸಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸುಗಮ ದರ್ಶನ ಕಲ್ಪಿಸಲು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.


ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

"ಮಧ್ಯ ಕರ್ನಾಟಕ ಲೈವ್ (Madhyakarnataka.live) ಕರ್ನಾಟಕದ ಹೃದಯಭಾಗದ ನೈಜ, ನಿಖರ ಮತ್ತು ಕ್ಷಣ ಕ್ಷಣದ ಸುದ್ದಿಗಳಿಗಾಗಿ ಮೀಸಲಾದ ಡಿಜಿಟಲ್ ಸುದ್ದಿ ವೇದಿಕೆಯಾಗಿದೆ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಜಿಲ್ಲೆಗಳ ಸ್ಥಳೀಯ ಸಮಸ್ಯೆಗಳು, ರಾಜಕೀಯ, ಕೃಷಿ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಜಗತ್ತಿಗೆ ತಲುಪಿಸುವುದು ನಮ್ಮ ಗುರಿ. ನಾವು ಕೇವಲ ಸುದ್ದಿಯನ್ನಷ್ಟೇ ಅಲ್ಲ, ಜನರ ಧ್ವನಿಯಾಗಲು ಬಯಸುತ್ತೇವೆ."… Read More

Related News

Home
Web Stories
Instagram
WhatsApp