ದಾವಣಗೆರೆ ದಕ್ಷಿಣ ಉಪಚುನಾವಣೆ: “ಸೇವೆನೇ ನನ್ನ ಸಿದ್ಧಾಂತ” – ಬರಿಗಾಲಿನ ಪ್ರಚಾರದ ರಹಸ್ಯ ಬಿಚ್ಚಿಟ್ಟ ಸಮರ್ಥ್ ಶಾಮನೂರು!

Samarth Shamanur Congress Candidate for Davanagere South Byelection 2026 Interview

—Election Update—

ದಾವಣಗೆರೆ: ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಶಾಮನೂರು ಕುಟುಂಬದ ಕುಡಿ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಅಬ್ಬರದ ಪ್ರಚಾರದ ನಡುವೆಯೇ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. “ನನಗೆ ಶ್ರೀಮಂತಿಕೆ ಇರಬಹುದು, ಆದರೆ ಜನರ ಸೇವೆ ಮಾಡುವುದೇ ನನ್ನ ಪರಮ ಗುರಿ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬರಿಗಾಲಿನ ಪ್ರಚಾರ: ಇದು ಭಕ್ತಿಯ ತಪಸ್ಸು

ಕಳೆದ ಕೆಲವು ದಿನಗಳಿಂದ ಸಮರ್ಥ್ ಶಾಮನೂರು ಅವರು ಕಡು ಬಿಸಿಲಿನಲ್ಲಿ ಬರಿಗಾಲಿನಲ್ಲಿಯೇ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿರುವುದು ಸಾರ್ವಜನಿಕರ ಗಮನ ಸೆಳೆದಿದೆ. ಈ ಬಗ್ಗೆ ಮಾತನಾಡಿದ ಅವರು, “ಇದು ನನ್ನ ಅಜ್ಜ ಹಾಕಿಕೊಟ್ಟ ದಾರಿ. ಚುನಾವಣೆ ಎಂಬುದು ಒಂದು ಪರೀಕ್ಷೆ ಇದ್ದಂತೆ. ಭಗವಂತನ ಮೇಲೆ ಭಾರ ಹಾಕಿ, ಈ ತಪಸ್ಸಿನ ಮೂಲಕ ಜನರ ಆಶೀರ್ವಾದ ಪಡೆಯುತ್ತಿದ್ದೇನೆ. ಇದು ನನ್ನ ಮತ್ತು ದೇವರ ನಡುವಿನ ವೈಯಕ್ತಿಕ ವಿಚಾರ,” ಎಂದು ಟೀಕಾಕಾರರಿಗೆ ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ಬಿಜೆಪಿಯ ಸಾಲದ ಆರೋಪಕ್ಕೆ ತಿರುಗೇಟು

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ಸಾಲದ ಸುಳಿಯಲ್ಲಿದೆ ಎಂಬ ಬಿಜೆಪಿಯ ಟೀಕೆಗೆ ಸಮರ್ಥ್ ಕಡಕ್ ಉತ್ತರ ನೀಡಿದ್ದಾರೆ. “ದೇಶವನ್ನೇ 200 ಲಕ್ಷ ಕೋಟಿ ಸಾಲದಲ್ಲಿ ಮುಳುಗಿಸಿರುವ ಕೇಂದ್ರದ ಬಿಜೆಪಿ ಸರ್ಕಾರ, ಜನರಿಗೆ ನೇರವಾಗಿ ತಲುಪುತ್ತಿರುವ 5 ಲಕ್ಷ ಕೋಟಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ಈ ಹಣ ಜನರ ಕೈಗೆ ಸೇರಿ ಸ್ಥಳೀಯ ಆರ್ಥಿಕತೆ (Local Economy) ಬಲಗೊಳ್ಳುತ್ತಿದೆ,” ಎಂದು ಅವರು ವಿಶ್ಲೇಷಿಸಿದ್ದಾರೆ.

ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ ಹೊಸ ಪ್ಲಾನ್

ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಕೊರತೆಯಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಮರ್ಥ್, “ನಗರ ಬೆಳೆದಂತೆ ಶಿಕ್ಷಣ ಸಂಸ್ಥೆಗಳು ಉತ್ತರ ಭಾಗಕ್ಕೆ ಹೋಗಿರಬಹುದು. ಆದರೆ ದಕ್ಷಿಣ ಕ್ಷೇತ್ರದಲ್ಲಿ ಈಗಾಗಲೇ ಇರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದು ಮತ್ತು ತುರ್ತು ಚಿಕಿತ್ಸಾ ಘಟಕ (ICU) ಹೊಂದಿರುವ ಹೊಸ ಆಸ್ಪತ್ರೆ ನಿರ್ಮಿಸುವುದು ನನ್ನ ಮೊದಲ ಆದ್ಯತೆ. ಪಿಎಚ್‌ಸಿಗಳನ್ನು (PHC) ಇನ್ನಷ್ಟು ಬಲಪಡಿಸುತ್ತೇನೆ,” ಎಂದು ಭರವಸೆ ನೀಡಿದ್ದಾರೆ.

“ಸಮರ್ಥ್ ಎಂದರೆ ಕೇವಲ ಹೆಸರಲ್ಲ, ಸಾಮರ್ಥ್ಯ”

“ನಾನು ಕೇವಲ ಕಾಂಗ್ರೆಸ್ ಅಭ್ಯರ್ಥಿಯಲ್ಲ, ಜನರ ಮನೆ ಮಗ. ಈಗಾಗಲೇ ಶಾಸಕನಾಗುವ ಮುನ್ನವೇ ಕ್ಷೇತ್ರಕ್ಕೆ 100 ಕೋಟಿ ರೂ. ಅನುದಾನ ತರುವಲ್ಲಿ ಯಶಸ್ವಿಯಾಗಿದ್ದೇನೆ. ಇದು ನನ್ನ ಕೆಲಸದ ಸಾಮರ್ಥ್ಯಕ್ಕೆ ಸಾಕ್ಷಿ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಅಭಿವೃದ್ಧಿ ಕೆಲಸಗಳನ್ನು ವೇಗವಾಗಿ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಮತದಾರರು ನನ್ನನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ,” ಎಂದು ಅವರು ಹೇಳಿದ್ದಾರೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp