ದಾವಣಗೆರೆ ಮಹಾನಗರದಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ ಮಾಡುವ ಮುನ್ನ ಪೂರ್ವಭಾವಿಯಾಗಿ ಒಂದಿಷ್ಟು ಮಾಹಿತಿಯ ಅಗತ್ಯವಿದೆ.
ದಾವಣಗೆರೆ ಅತ್ಯಂತ ನಿಖರವಾಗಿ ಕರ್ನಾಟಕದ ಮಧ್ಯಭಾಗದಲ್ಲಿದೆ. ಅದ್ದರಿಂದ ಈ ನಗರವನ್ನೇ ಕರ್ನಾಟಕ ರಾಜಧಾನಿಯನ್ನಾಗಿ ಮಾಡಬೇಕೆಂಬ ಮಹಾದಾಸೆಯನ್ನು ಕರ್ನಾಟಕ ಏಕೀಕರಣಕ್ಕೂ ಮುಂಚೆಯೇ ರಾಷ್ಟ್ರನಾಯಕರಾದ ಎಸ್.ನಿಜಲಿಂಗಪ್ಪ, ಖ್ಯಾತ ಪತ್ರಕರ್ತ, ಲೇಖಕ, ಕನ್ನಡಾಭಿಮಾನಿ ಪಾಟೀಲ್ ಪುಟ್ಟಪ್ಪನವರೂ ಸೇರಿದಂತೆ ಅನೇಕ ಮಹನೀಯರು ಹೊಂದಿದ್ದರು. ಆದರೆ, ಕಾರಣಾಂತರಗಳಿಂದ ದಾವಣಗೆರೆ ನಗರಕ್ಕೆ ರಾಜಧಾನಿಯಾಗುವ ಅವಕಾಶ ಲಭ್ಯವಾಗದೇ ಹೋದದ್ದು ದುರಾದೃಷ್ಠರಕ ಸಂಗತಿ ಎಂದೇ ಹೇಳಬಹುದು.

ದಾವಣಗೆರೆ ನಗರ ಭೋಗೋಳಿಕವಾಗಿ ತುಂಬ ಆಯಕಟ್ಟಿನ ಸ್ಥಳದಲ್ಲಿದ್ದು, ಬೆಂಗಳೂರು, ಮುಂಬಯಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಹಗಲು ರಾತ್ರಿ ವಿವಿಧ ಬಗೆಯ ರೈಲುಗಳ ಸೌಲಭ್ಯವಿದೆ. ವಿಫುಲ ಸಂಖ್ಯೆಯ ವಿವಿಧ ಭಾಗಗಳನ್ನು ತ್ವರಿತವಾಗಿ ಸಂಪರ್ಕಿಸುವ ಅತ್ಯುತ್ತಮ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳ ಸಂಚಾರ ವ್ಯವಸ್ಥೆ ಇದೆ. ಇದಲ್ಲದೇ ಮಾದರಿ ಎನಿಸುವ ಹೈಟೆಕ್ ಬಸ್ ನಿಲ್ದಾಣವಿದೆ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಇದಲ್ಲದೇ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಸಿಮೆಂಟ್ ರಸ್ತೆಗಳು ಸೇರಿದಂತೆ ಅಧುನಿಕ ನಾಗರೀಕ ಸೌಲಭ್ಯಗಳು ನಗರಕ್ಕೆ ದೊರಕಿವೆ. ಹಚ್ಚ ಹಸಿರಿನ ವಾತಾವರಣ, ನಿರಂತರ ನೀರು ಪೂರೈಕೆಯ ಜಲಸಿರಿ ಯೋಜನೆ, ಅಧಿಕ ಸಂಖ್ಯೆಯ ಉದ್ಯಾನವನಗಳು ನಗರದ ಶೋಭೆಯನ್ನು ಹೆಚ್ಚಿಸಿವೆ. ಬಗೆಬಗೆಯ ಊಟ ಉಪಹಾರ ಮಂದಿರಗಳು, ಸುಸಜ್ಜಿತ ವಸತಿ ಗೃಹಗಳು ಎಲ್ಲೆಡೆ ಇವೆ.

ಶೈಕ್ಷಣಿಕೆ ರಂಗದಲ್ಲಿ ದಾವಣಗೆರೆ ನಗರ ಅಪಾರ ಪ್ರಗತಿ ಸಾಧಿಸಿದ್ದು, ಅಕ್ಸ್‌ಫರ್ಡ್ ಎನ್ನುವ ಖ್ಯಾತಿಯೂ ನಗರಕ್ಕುಂಟು. ಇಲ್ಲಿ ಎರಡು ವಿಶ್ವವಿದ್ಯಾನಿಲಯಗಳು, ಮುಖ್ಯವಾಗಿ ಎರಡು ಕಾನೂನು ಕಾಲೇಜುಗಳು ಸೇರಿದಂತೆ ಎಲ್ಲಾ ಬಗೆಯ ಶಿಕ್ಷಣ ನೀಡುವ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿವೆ.
ಇನ್ನು ಬಹುಮುಖ್ಯವಾಗಿ, ಅವಿಭಜಿತ ಚಿತ್ರದುರ್ಗ ಜಿಲ್ಲೆಯಲ್ಲಿ ಅಂದು ದಾವಣಗೆರೆ ಕಂದಾಯ ಉಪ ವಿಭಾಗವಾಗಿದ್ದ ದಿನಗಳಲ್ಲಿ, ಈ ನಗರದಿಂದ ವಕೀಲರಾದ ಹೆಚ್.ಸಿದ್ದವೀರಪ್ಪನವರು ಹಾಗೂ ಚಿತ್ರದುರ್ಗದಲ್ಲಿ ಅಂದು ವಕೀಲರಾಗಿದ್ದ ಎಸ್.ನಿಜಲಿಂಗಪ್ಪನವರು, ಭಾರತದ ಸಂವಿಧಾನ ರಚನಾ ಸಭೆಯಲ್ಲಿ ಸದಸ್ಯರಾಗಿ, ದೇಶದ ಸಂವಿಧಾನ ರಚನೆಯಲ್ಲ ಮಹತ್ವದ ಕೊಡುಗೆ ನೀಡಿದ್ದಾರೆ.
ದಾವಣಗೆರೆ ನಗರದಲ್ಲಿ ಪೊಲೀಸ್ ಮಹಾ ನಿರೀಕ್ಷಕರ (ಐಜಿಪಿ) ಕಚೇರಿ, ಅಭಿಯೋಜನಾ ಇಲಾಖೆಯ ಉಪ ನಿರ್ದೇಶಕರ ಕಚೇರಿ ಇರುವುದಲ್ಲದೇ, ನಗರಕ್ಕೆ ಲಗತ್ತಾಗಿ ಪ್ರಾದೇಶಿ ನ್ಯಾಯ ವಿಜ್ಞಾನ ಪ್ರಯೋಗ ಶಾಲೆಯೂ ಇದೆ. ಈ ನಗರದಿಂದ ಈ ಜಿಲ್ಲೆಯ ವಿವಿಧ ತಾಲೂಕುಗಳಿಂದ ಹಾಗೂ ನೆರೆಯ ಜಿಲ್ಲೆಯ ಇತರೆ ಪ್ರದೇಶಗಳಿಂದ ಸಾಕಷ್ಟು ಸಂಖ್ಯೆಯ ಕೇಸುಗಳು ಬೆಂಗಳೂರಿನ ಹೈಕೋರ್ಟಿನಲ್ಲಿವೆ. ಕಕ್ಷಿದಾರರಿಗೆ ಮತ್ತು ಸಾರ್ವಜನಿಕರಿಗೆ ಮತ್ತೆ ಮತ್ತೆ ಬೆಂಗಳೂರಿಗೆ ಹೋಗಿ ಬರುವುದು ತ್ರಾಸದಾಯಕವೂ ಸಮಯ ಹಾಗೂ ಹಣದ ಪ್ರಶ್ನೆಯೂ ಉದ್ಭವಿಸುತ್ತದೆ. ಈ ಎಲ್ಲಾ ಕಾರಣಗಳಿಂದ ದಾವಣಗೆರೆ ನಗರದಲ್ಲಿ ರಾಜ್ಯ ಹೈಕೋರ್ಟಿನ ಸಂಚಾರಿ ಪೀಠವನ್ನು ಸ್ಥಾಪಿಸುವುದು ಅಗತ್ಯ ಮಾತ್ರವಲ್ಲದೇ ಅನಿವಾರ್ಯವೂ ಹೌದು ಎನ್ನಲೇ ಬೇಕಾಗಿದೆ.
ನಮ್ಮ ನಗರಕ್ಕೆ ಸಂಚಾರಿ ಹೈಕೋರ್ಟ್ ಪೀಠದ ಬೇಡಿಕೆ ಅತ್ಯಂತ ನ್ಯಾಯೋಚಿತವಾಗಿದೆ. ಇದೊಂದು ಸಾರ್ವಜನಿಕ ಹಿತಾಸಕ್ತಿಯ ಸಂಗತಿ ಎಂದು ಎಲ್ಲರೂ ಮನಗಾಣಬೇಕಿದೆ. ವಾಣಿಜ್ಯ ವ್ಯಾಪಾರಿ ಸಂಘಗಳು, ಕೇಂದ್ರ, ರಾಜ್ಯ, ಬ್ಯಾಂಕಿಂಗ್ ಹಾಗೂ ಖಾಸಗಿ ನೌಕರರ ಸಂಘಟನೆಗಳು, ದಲಿತ, ರೈತ, ಕಾರ್ಮಿಕ ಸಂಘಟನೆಗಳಲ್ಲದೇ ಎಲ್ಲಾ ಪ್ರಗತಿ ಪರ ಮತ್ತು ಕನ್ನಡ ಪರ ಸಂಘಟನೆಗಳು ಈ ವಿಷಯದಲ್ಲಿ ಧ್ವನಿಗೂಡಿಸಬೇಕಾಗಿದೆ. ಒಂದು ರೀತಿಯಲ್ಲಿ ಹೇಳುವುದಾದರೆ, ಸಮಾನ ಮನಸ್ಕ ವೇದಿಕೆಯ ಮೂಲಕ ನಗರದಲ್ಲಿ ಸಂಚಾರಿ ಪೀಠ ಸ್ಥಾಪನೆಗೆ ಇದು ಸೂಕ್ತ ಸಮಯವಾಗಿದ್ದು, ಈಗ ದೊರಕಿರುವ ಅವಕಾಶದ ಲಾಭ ಪಡೆಯಬೇಕಾಗಿದೆ.
ಸಂಚಾರಿ ಪೀಠ ಸ್ಥಾಪನೆಯಿಂದ ಇಲ್ಲಿಯ ಪ್ರತಿಭಾವಂತ ಹಾಗೂ ಉದಯೋನ್ಮುಖ ವಕೀಲರುಗಳಿಗೆ ಮತ್ತು ಈ ಭಾಗದ ಕಾನೂನು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ವಕೀಲರ ಅನುಭವಕ್ಕೆ ಹೊಸ ಆಯಾಮ ದೊರೆಯಲಿದೆ. ಸಂಚಾರಿ ಹೈಕೋರ್ಟ್ ಪೀಠದಲ್ಲಿ ಕಾರ್ಯನಿರ್ವಹಿಸಬಲ್ಲ ಹಿರಿಯ ಹಾಗೂ ಅನುಭವಿ ವಕೀಲರು ನಗರದಲ್ಲಿ ಮತ್ತು ಈ ಜಿಲ್ಲೆಯ ನ್ಯಾಯಾಲಯಗಳಲ್ಲಿ ಇದ್ದಾರೆ ಎಂಬುದು ಗಮನಾರ್ಹ.
ಈ ಸಂಚಾರಿ ಪೀಠದ ವ್ಯಾಪ್ತಿಗೆ ದಾವಣಗೆರೆ, ಚಿತ್ರದುರ್ಗ, ವಿಜಯನಗರ ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಗಳನ್ನು ತರಬಹುದಾಗಿದೆ. ಈ ಎಲ್ಲಾ ಜಿಲ್ಲೆಗಳ ವಕೀಲರ ಸಂಘಗಳು, ವಕೀಲ ಮಿತ್ರರು ಈ ಮನವಿ, ಪ್ರಸ್ತಾವನೆಗೆ ಸಕ್ರಿಯವಾಗಿ ಸ್ಪಂದಿಸಲಿದ್ದಾರೆ ಎನ್ನುವ ಗಾಢ ವಿಶ್ವಾಸವಿದೆ.
ಜಿಲ್ಲಾ ನ್ಯಾಯಾಲಯದಲ್ಲಿರುವ ನ್ಯಾಯಾಲಯಗಳು ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಹೊಸ ಕಟ್ಟಡಕ್ಕೆ ಮುಂಬರುವ ದಿನಗಳಲ್ಲಿ ಸ್ಥಳಾಂತರವಾಗುವುದರಿಂದ ಹಾಲಿ ದೇವರಾಜ ಅರಸು ಬಡಾವಣೆಯಲ್ಲಿರುವ ಕಟ್ಟಡವನ್ನು ಸಂಚಾರಿ ಪೀಠಕ್ಕಾಗಿ ಬಳಸಿಕೊಳ್ಳಬಹುದಾಗಿದೆ.
ರಾಜ್ಯದಲ್ಲಿ ಇನ್ನೊಂದು ಹೈಕೋರ್ಟ್ ಸಂಚಾರಿ ಪೀಠವನ್ನು ಸ್ಥಾಪಿಸುವ ವಿಚಾರ ಸರ್ಕಾರದ ಮಟ್ಟದಲ್ಲಿ ಮುನ್ನಲೆಗೆ ಬಂದಿರುವುದರಿಂದ ಈಗ ನಗರದಲ್ಲಿ ಒಂದು ಸಂಘಟಿತ ಹಾಗೂ ವ್ಯವಸ್ಥಿತ ಹೋರಾಟದ ತುರ್ತು ಅಗತ್ಯವಿದೆ.
ಬನ್ನಿ, ನಾವು, ನೀವೆಲ್ಲರೂ ಈ ನ್ಯಾಯೋಚಿತ ಬೇಡಿಕೆಗೆ ಹಾಗೂ ಮನವಿಗೆ ಧ್ವನಿಯಾಗೋಣ, ಒಂದು ಸಮಾನ ಮನಸ್ಕ ವೇದಿಕೆಯನ್ನು ರಚಿಸಿಕೊಂಡು, ಸಲಹೆ, ಸೂಚನೆಗಳ ಬಗ್ಗೆ ವಿವರವಾಗಿ ಚರ್ಚಿಸಿ ಈ ನಿಟ್ಟಿನಲ್ಲಿ ತಕ್ಷಣವೇ ಕಾರ್ಯ ಪ್ರವೃತ್ತರಾಗೋಣ.
ಎಲ್.ಎಚ್.ಅರುಣಕುಮಾರ್, ನಿಕಟಪೂರ್ವ ಅಧ್ಯಕ್ಷರು, ಜಿಲ್ಲಾ ವಕೀಲರ ಸಂಘ, ದಾವಣಗೆರೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
