ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಸುಮಾರು 39 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮೂಲಕ ರಾಜಕೀಯ ಕುತೂಹಲ ಕೆರಳಿಸಿದ್ದಾರೆ. ಈ ಬೆನ್ನಲ್ಲೇ ಸಾಮಾಜಿಕ ಹೋರಾಟಗಾರ ವಿನಯ್ ಕುಮಾರ್ ಜಿ.ಬಿ. ಅವರು ಪಕ್ಷೇತರ ಅಭ್ಯರ್ಥಿಗಳಿಗೆ ಮಹತ್ವದ ಸಂದೇಶವೊಂದನ್ನು ರವಾನಿಸಿದ್ದಾರೆ.
ದೊಡ್ಡವರ ಆಮಿಷಕ್ಕೆ ಬಲಿಯಾಗಬೇಡಿ
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕ ಹತ್ತಿರವಿರುವ ಕಾರಣ, ಪ್ರಭಾವಿ ರಾಜಕಾರಣಿಗಳು ಪಕ್ಷೇತರ ಅಭ್ಯರ್ಥಿಗಳ ಮೇಲೆ ಒತ್ತಡ ಹೇರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಎಚ್ಚರಿಸಿರುವ ವಿನಯ್ ಕುಮಾರ್, “ನಿಮಗೆ ದೊಡ್ಡ ನಾಯಕರಿಂದ ಫೋನ್‌ಗಳು ಬರಬಹುದು. ನಿಮ್ಮನ್ನು ಕರೆಸಿಕೊಂಡು ಸನ್ಮಾನಿಸಿ, ಪ್ರೀತಿಯಿಂದ ಮಾತಾಡಿಸಿ, ಭವಿಷ್ಯದಲ್ಲಿ ಅಧಿಕಾರ ನೀಡುವ ಆಮಿಷ ಒಡ್ಡಬಹುದು. ಆದರೆ ನೆನಪಿಡಿ, ಒಮ್ಮೆ ನೀವು ನಾಮಪತ್ರ ವಾಪಸ್ ಪಡೆದರೆ ನಿಮ್ಮ ಮುಖವನ್ನೂ ಅವರು ನೆನಪಿಟ್ಟುಕೊಳ್ಳುವುದಿಲ್ಲ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ನಂಬಿಕೆ ದ್ರೋಹ ಮಾಡಬೇಡಿ
ಕ್ಷೇತ್ರದ ಜನರು ಬದಲಾವಣೆ ಬಯಸುತ್ತಿದ್ದಾರೆ. ಕುಟುಂಬ ರಾಜಕಾರಣಕ್ಕೆ ಬೇಸತ್ತಿರುವ ಮತದಾರರು ನಿಮ್ಮಂತಹ ಹೊಸ ಮುಖಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. “ನೀವು ಯಾವುದೋ ಹಣದ ಆಮಿಷಕ್ಕೆ ಅಥವಾ ಒತ್ತಡಕ್ಕೆ ಮಣಿದು ಹಿಂದೆ ಸರಿದರೆ, ಜನರು ನಿಮ್ಮನ್ನು ‘ಸೇಲ್ ಆಗಿದ್ದಾರೆ’ ಎಂದು ಕರೆಯುತ್ತಾರೆ. ಈ ಕಳಂಕ ನಿಮ್ಮ ಜೀವನದುದ್ದಕ್ಕೂ ಅಂಟಿಕೊಳ್ಳುತ್ತದೆ. ಒಂದು ವೋಟ್ ಬರಲಿ ಅಥವಾ ಒಂದು ಲಕ್ಷ ಬರಲಿ, ಹೋರಾಟ ಮಾಡುವುದು ಮುಖ್ಯ” ಎಂದು ಅವರು ಧೈರ್ಯ ತುಂಬಿದ್ದಾರೆ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ನನ್ನ ಮೇಲೂ ಒತ್ತಡವಿತ್ತು..
ತಮ್ಮ ವೈಯಕ್ತಿಕ ಅನುಭವ ಹಂಚಿಕೊಂಡ ವಿನಯ್ ಕುಮಾರ್, “ನಾನು ಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಸಿಎಂ ಮಟ್ಟದ ನಾಯಕರಿಂದಲೂ ಒತ್ತಡ ಬಂದಿತ್ತು. ಆದರೂ ನಾನು ಹಿಂದೆ ಸರಿಯಲಿಲ್ಲ. ಸೋಲು-ಗೆಲುವಿಗಿಂತ ಆತ್ಮತೃಪ್ತಿ ಮುಖ್ಯ. ಇಂದು ನಾನು ಹೆಮ್ಮೆಯಿಂದ ಜನರ ಮುಂದೆ ನಿಲ್ಲಬಲ್ಲೆ. ನೀವೂ ಸಹ ಅದೇ ಹಾದಿಯಲ್ಲಿ ಸಾಗಿ” ಎಂದಿದ್ದಾರೆ.

ಮುಸ್ಲಿಂ ಅಭ್ಯರ್ಥಿಗಳಿಗೆ ವಿಶೇಷ ಕರೆ
ವಿಶೇಷವಾಗಿ ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಮನವಿ ಮಾಡಿರುವ ಅವರು, “ಸಾದಿಕ್ ಪೈಲ್ವಾನ್ ಸೇರಿದಂತೆ ಅನೇಕರು ಕಣದಲ್ಲಿದ್ದೀರಿ. ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯಬೇಡಿ. ಬೂತ್ ಮಟ್ಟದಲ್ಲಿ ಕೆಲಸ ಮಾಡಿ, ಮನೆ ಮನೆಗೆ ಹೋಗಿ ಜನರ ಮನಸ್ಸು ಗೆಲ್ಲಿ. ಇವತ್ತು ಸೋತರೂ ಭವಿಷ್ಯದಲ್ಲಿ ನೀವು ದೊಡ್ಡ ನಾಯಕರಾಗಿ ಹೊರಹೊಮ್ಮಲು ಈ ಹೋರಾಟವೇ ಅಡಿಪಾಯ” ಎಂದು ಕಿವಿಮಾತು ಹೇಳಿದ್ದಾರೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
