ಮದುವೆಯ ಬಂಧ ಎಂಬುದು ಕೇವಲ ಸಂತೋಷದ ದಿನಗಳಲ್ಲಿ ಜೊತೆಯಾಗಿರುವುದಷ್ಟೇ ಅಲ್ಲ, ಕಷ್ಟ-ಕಾರ್ಪಣ್ಯ ಹಾಗೂ ಅನಾರೋಗ್ಯದ ಸಂದರ್ಭದಲ್ಲೂ ಒಬ್ಬರಿಗೊಬ್ಬರು ಆಸರೆಯಾಗಿ ನಿಲ್ಲುವ ಪವಿತ್ರ ಜವಾಬ್ದಾರಿಯಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪತ್ನಿ ತೀವ್ರ ಅನಾರೋಗ್ಯ ಅಥವಾ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವಾಗ ಆಕೆಯನ್ನು ಆಸ್ಪತ್ರೆಗೆ ಸೇರಿಸದೆ, ಆರೈಕೆ ಮಾಡದೆ ತವರು ಮನೆಗೆ ಬಿಟ್ಟು ಹೋಗುವ ಅಥವಾ ಒಂಟಿಯಾಗಿ ಕೈಬಿಡುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಕಾನೂನಿನ ಪ್ರಕಾರ, ಪತ್ನಿ ಅನಾರೋಗ್ಯ ಪೀಡಿತಳಾಗಿದ್ದಾಗ ಆಕೆಯನ್ನು ಗೌರವದಿಂದ ನೋಡಿಕೊಳ್ಳುವುದು ಮತ್ತು ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸುವುದು ಪತಿಯ ಆದ್ಯ ಕರ್ತವ್ಯವಾಗಿರುತ್ತದೆ. ಒಂದು ವೇಳೆ ಪತಿ ಈ ಜವಾಬ್ದಾರಿಯಿಂದ ನುಣುಚಿಕೊಂಡು, ಆಕೆಯನ್ನು ನಿರ್ಲಕ್ಷಿಸಿದರೆ ಸಂತ್ರಸ್ತ ಮಹಿಳೆಗೆ ಭಾರತೀಯ ಕಾನೂನಿನಲ್ಲಿ ಬಲಿಷ್ಠ ರಕ್ಷಣೆಗಳಿವೆ.

ಸಂಕಷ್ಟದಲ್ಲಿರುವ ಪತ್ನಿ ಏನು ಮಾಡಬಹುದು?
- ಕೌಟುಂಬಿಕ ಹಿಂಸಾಚಾರ ತಡೆ ಕಾಯ್ದೆ (DV Case):
ಅನಾರೋಗ್ಯದ ಸಮಯದಲ್ಲಿ ಪತ್ನಿಗೆ ವೈದ್ಯಕೀಯ ಚಿಕಿತ್ಸೆ ನಿರಾಕರಿಸುವುದು ಮತ್ತು ಆಕೆಯನ್ನು ಸಾಕೋಣ ಎಂಬ ಕಾರಣಕ್ಕೆ ಕೈಬಿಡುವುದು ಆರ್ಥಿಕ ಹಾಗೂ ಮಾನಸಿಕ ಹಿಂಸೆಯ ವ್ಯಾಪ್ತಿಗೆ ಬರುತ್ತದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ‘ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ ಕಾಯ್ದೆ-2005’ ರ ಅಡಿಯಲ್ಲಿ ಪತಿಯ ವಿರುದ್ಧ ಡಿ.ವಿ (Domestic Violence) ಕೇಸ್ ದಾಖಲಿಸಬಹುದು. ಇದರ ಮೂಲಕ ಚಿಕಿತ್ಸೆಯ ವೆಚ್ಚ ಹಾಗೂ ಜೀವನಾಂಶವನ್ನು ಪಡೆದುಕೊಳ್ಳಬಹುದು. - ಜೀವನಾಂಶದ ಹಕ್ಕು (Maintenance Rights):
ಗಂಡ ತನ್ನನ್ನು ನಿರ್ಲಕ್ಷಿಸಿದರೆ, ಪತ್ನಿಯು ತನ್ನ ದಿನನಿತ್ಯದ ಜೀವನ ನಿರ್ವಹಣೆ ಮತ್ತು ಆಸ್ಪತ್ರೆಯ ಖರ್ಚುಗಳಿಗಾಗಿ ಕಾನೂನುಬದ್ಧವಾಗಿ ಜೀವನಾಂಶ (Maintenance) ಕೋರಿ ನ್ಯಾಯಾಲಯದ ಮೆಟ್ಟಿಲೇರಬಹುದು. - ಮಧ್ಯಸ್ಥಿಕೆ ಕೇಂದ್ರಗಳ ನೆರವು (Mediation Centre):
ಕೂಡಲೇ ಕೋರ್ಟ್, ಕಚೇರಿ ಎಂದು ಅಲೆಯಲು ಸಾಧ್ಯವಾಗದಿದ್ದರೆ, ಸ್ಥಳೀಯವಾಗಿ ಇರುವ ಉಚಿತ ಕಾನೂನು ಸೇವಾ ಪ್ರಾಧಿಕಾರ ಅಥವಾ ಊರಿನ ಅಧಿಕೃತ ಮಧ್ಯಸ್ಥಿಕೆ ಕೇಂದ್ರಗಳಿಗೆ (Mediation Centres) ಅರ್ಜಿ ಸಲ್ಲಿಸಬಹುದು. ಇಲ್ಲಿ ಹಿರಿಯರು ಮತ್ತು ಕಾನೂನು ತಜ್ಞರು ಉಭಯ ಪಕ್ಷಗಾರರನ್ನು ಕರೆಸಿ, ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ಹಾಗೂ ಪತ್ನಿಯ ಆರೈಕೆಗೆ ಪತಿಯನ್ನು ಒಪ್ಪಿಸಲು ಕಾನೂನಾತ್ಮಕ ನೆರವು ನೀಡುತ್ತಾರೆ.
ಸಮಾಜದಲ್ಲಿ ಮಹಿಳೆಯರು ಇಂತಹ ಕಠಿಣ ಪರಿಸ್ಥಿತಿಯಲ್ಲಿ ಧೃತಿಗೆಡದೆ ತಮಗಿರುವ ಕಾನೂನುಬದ್ಧ ಹಕ್ಕುಗಳ ಬಳಕೆಯನ್ನು ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
