ಚಿತ್ರದುರ್ಗ (ಮಾ. 08): ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಮೀಸಲಾತಿ ಪ್ರಮಾಣ ಕಡಿತ ಹಾಗೂ ಹುದ್ದೆಗಳ ನೇಮಕಾತಿಯಲ್ಲಿ ಆಗುತ್ತಿರುವ ಅನ್ಯಾಯವನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ‘ಮಾಡು ಇಲ್ಲವೆ ಮಡಿ’ ಹೋರಾಟಕ್ಕೆ ಬಿಜೆಪಿ ಸಜ್ಜಾಗಿದೆ.
ಭಾನುವಾರ ಚಿತ್ರದುರ್ಗ ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಬೃಹತ್ ಜನಾಂದೋಲನ ಸಭೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ಪ್ರಮುಖ ನಾಯಕರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದರ ಬೆನ್ನಲ್ಲೇ, ಮಾರ್ಚ್ 22 ರಿಂದ ಚಿತ್ರದುರ್ಗದಿಂದ ಬೆಂಗಳೂರಿಗೆ ಲಕ್ಷಾಂತರ ಜನರ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಘೋಷಿಸಲಾಗಿದೆ.
ಸಭೆಯಲ್ಲಿ ಮೊಳಗಿದ ಬಿಜೆಪಿ ನಾಯಕರ ಆಕ್ರೋಶದ ನುಡಿಗಳು
“ದಲಿತರು ಕಾಂಗ್ರೆಸ್ ಗುಲಾಮರಲ್ಲ”
– ಬಿ. ಶ್ರೀರಾಮುಲು
“ಹಿಂದಿನ ಬಿಜೆಪಿ ಸರ್ಕಾರವು ಮೂರು ದಶಕಗಳ ಹೋರಾಟಕ್ಕೆ ಮನ್ನಣೆ ನೀಡಿ ಎಸ್‌ಸಿ, ಎಸ್‌ಟಿ ಒಳಮೀಸಲಾತಿ ಹಂಚಿಕೆ ಮಾಡಿತ್ತು. ಆದರೆ ಇಂದು ಕಾಂಗ್ರೆಸ್ ಸರ್ಕಾರ ನಮ್ಮ ಧ್ವನಿಯನ್ನು ಹತ್ತಿಕ್ಕುತ್ತಿದೆ. ಮೀಸಲಾತಿ ಹೆಚ್ಚಿಸಿದ್ದು ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆಯೇ ಹೊರತು ಸಿದ್ದರಾಮಯ್ಯ ಅವರದ್ದಲ್ಲ. ಈಗ ಮೀಸಲಾತಿ ಕಡಿತದಿಂದ ನೀಟ್ ಹಾಗೂ ಸಿಇಟಿ ಬರೆದ ಲಕ್ಷಾಂತರ ಮಕ್ಕಳ ಭವಿಷ್ಯ ಮಂಕಾಗಿದೆ.”
“ಗ್ಯಾರಂಟಿಗಳಿಗೆ ದಲಿತರ ಹಣ ಡೈವರ್ಟ್”
– ಎ. ನಾರಾಯಣಸ್ವಾಮಿ
“ಕರ್ನಾಟಕದ ಪರಿಶಿಷ್ಟರು ಅಜ್ಞಾನಿಗಳು ಎಂದು ಕಾಂಗ್ರೆಸ್ ಭಾವಿಸಿದೆ. ಮೀಸಲಾತಿ ಎಂದರೆ ಕೇವಲ ಹಾಸ್ಟೆಲ್ ತೆರೆಯುವುದಲ್ಲ, ಅದು ನಮ್ಮ ಹಕ್ಕು. ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು 42 ಸಾವಿರ ಕೋಟಿ ರೂ. ಎಸ್‌ಸಿಪಿ/ಟಿಎಸ್‌ಪಿ (SCP/TSP) ಹಣವನ್ನು ಗ್ಯಾರೆಂಟಿಗಳಿಗೆ ಡೈವರ್ಟ್ ಮಾಡಿದ್ದಾರೆ. ಈ ಅನ್ಯಾಯದ ವಿರುದ್ಧ ಐದಾರು ಜಿಲ್ಲೆಗಳ ಜನತೆ ತೊಡೆ ತಟ್ಟಿದರೆ ಈ ಸರ್ಕಾರ ಉಳಿಯುವುದಿಲ್ಲ.”
“ಮೀಸಲಾತಿ ತಡೆಯಾಜ್ಞೆಗೆ ಸರ್ಕಾರದ ಕುಮ್ಮಕ್ಕು”
– ಗೋವಿಂದ ಎಂ. ಕಾರಜೋಳ
“ಶೋಷಿತರು ಹಾಗೂ ನಿರ್ಲಕ್ಷ್ಯಕ್ಕೆ ಒಳಗಾದವರ ಹಕ್ಕುಗಳ ರಕ್ಷಣೆಗಾಗಿ ನಾವು ಹೋರಾಡುತ್ತಿದ್ದೇವೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು. ಆದರೆ, ಕಾಂಗ್ರೆಸ್ ಕುಮ್ಮಕ್ಕಿನಿಂದ ಶೇ.56 ರಷ್ಟಿದ್ದ ಮೀಸಲಾತಿ ಪ್ರಮಾಣಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಬಂದಿದೆ. ಇದಕ್ಕೆ ಸರ್ಕಾರ ಕನಿಷ್ಠ ಮೇಲ್ಮನವಿಯನ್ನೂ ಸಲ್ಲಿಸಿಲ್ಲ.”
“ಜನರ ಬಳಿಗೆ ಹೋಗುತ್ತಿದ್ದೇವೆ”
– ಎನ್. ಮಹೇಶ್
“ನಮ್ಮ ಹಕ್ಕುಗಳನ್ನು ಶಾಸನ ಸಭೆಯಲ್ಲಿ ಹಾಗೂ ಸರ್ಕಾರದಲ್ಲಿ ರಕ್ಷಣೆ ಮಾಡಿಕೊಳ್ಳಲು ಆಗದಿದ್ದರೆ ಜನರ ಬಳಿಗೆ ಹೋಗಿ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಆ ಕೆಲಸವನ್ನು ಇಂದು ಬಿಜೆಪಿ ಮೂಲಕ ಪರಿಶಿಷ್ಟರು ಮಾಡುತ್ತಿದ್ದೇವೆ.”
“ಇದು ಮಾಡು ಇಲ್ಲವೆ ಮಡಿ ಹೋರಾಟ”
– ಶಿವನಗೌಡ ನಾಯಕ
“ಮದಕರಿ ನಾಯಕರ ಜನ್ಮಭೂಮಿಯಲ್ಲಿ ಸರ್ಕಾರದ ವಿರುದ್ಧ ಹೋರಾಟಕ್ಕೆ ತೀರ್ಮಾನ ಮಾಡಿದ್ದೇವೆ. ಇದು ಮಾಡು ಇಲ್ಲವೆ ಮಡಿ ಹೋರಾಟ. ಸತ್ತರೂ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಮೀಸಲಾತಿ ಪಡೆದೇ ಮನೆ ಸೇರುತ್ತೇವೆ.”
“ಮೀಸಲಾತಿ ಕೈತಪ್ಪಿದರೆ 4000 ಹುದ್ದೆ ನಷ್ಟ”
– ರಾಜುಗೌಡ
“ಇದು ನಮ್ಮ ಸಮುದಾಯದ ಅಳಿವು, ಉಳಿವಿನ ಪ್ರಶ್ನೆ. ಗುರಿ ಮುಟ್ಟುವವರೆಗೆ ಹೋರಾಟ ನಡೆಯಲಿದೆ. ಮೀಸಲಾತಿ ಕೈ ತಪ್ಪಿದರೆ ಪರಿಶಿಷ್ಟರ ನಾಲ್ಕು ಸಾವಿರ ಹುದ್ದೆಗಳು ಕೈ ತಪ್ಪಲಿವೆ.”
“ಚಿತ್ರದುರ್ಗದಿಂದಲೇ ಕಹಳೆ”
– ಡಾ. ಎಂ. ಚಂದ್ರಪ್ಪ
“ಕಳೆದ ಚುನಾವಣೆ ಸಂದರ್ಭದಿಂದಲೇ ಕಾಂಗ್ರೆಸ್ ಮೀಸಲಾತಿ ಕುರಿತು ಗೊಂದಲ ಮೂಡಿಸಿ ನಮ್ಮ ಸರ್ಕಾರವನ್ನು ಕೆಡವಿದೆ. ಈಗ ಅದಕ್ಕೆ ಪ್ರತಿಯಾಗಿ ಚಿತ್ರದುರ್ಗದಿಂದಲೇ ಹೋರಾಟ ಪ್ರಾರಂಭವಾಗಲಿ.”
ಪಾದಯಾತ್ರೆಯ ರೂಪುರೇಷೆ ಮತ್ತು ಎಚ್ಚರಿಕೆ
ಹೋರಾಟದ ನೇತೃತ್ವ ವಹಿಸಿರುವ ಮಾಜಿ ಶಾಸಕ ಕುಡುಚಿ ರಾಜೀವ್ ಅವರು ಹೋರಾಟದ ಮುಂದಿನ ಹೆಜ್ಜೆಗಳ ಬಗ್ಗೆ ಮಾಹಿತಿ ನೀಡಿದರು:
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
“ಮಾರ್ಚ್ 22 ರಂದು ಚಿತ್ರದುರ್ಗದಿಂದ ಬೃಹತ್ ಪಾದಯಾತ್ರೆ ಆರಂಭವಾಗಲಿದ್ದು, ಸುಮಾರು ಒಂದು ಲಕ್ಷ ಜನ ಇದರಲ್ಲಿ ಸೇರಲಿದ್ದಾರೆ. ಮಾರ್ಚ್ 27 ರಂದು ಈ ಪಾದಯಾತ್ರೆ ಬೆಂಗಳೂರು ಪ್ರವೇಶ ಮಾಡಲಿದೆ. ಸರ್ಕಾರ ಆರಂಭದಲ್ಲೇ ನಮ್ಮ ಬಳಿ ಬಂದು ಎಸ್ಸಿ, ಎಸ್ಟಿ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ದಿನೇ ದಿನೇ ಹೋರಾಟ ತೀವ್ರಗೊಳ್ಳುತ್ತದೆ. ಬೆಂಗಳೂರು ತಲುಪಿದ ಬಳಿಕ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ.”
ಚುನಾವಣೆ ಪೂರ್ವದಲ್ಲಿ ಚಿತ್ರದುರ್ಗದಲ್ಲಿಯೇ ಪರಿಶಿಷ್ಟರ ಸಮಾವೇಶ ನಡೆಸಿದ್ದ ಕಾಂಗ್ರೆಸ್, ಒಳಮೀಸಲಾತಿ ಜಾರಿ ಮಾಡುವ ಭರವಸೆ ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದ ದಿನದಿಂದಲೂ ಅನ್ಯಾಯ ಮಾಡುತ್ತಿರುವುದನ್ನು ಖಂಡಿಸಿ ಅದೇ ನೆಲದಿಂದ ಹೋರಾಟಕ್ಕೆ ಕರೆ ಕೊಡಲಾಗಿದೆ ಎಂದು ಅವರು ವಿವರಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖ ಮುಖಂಡರು: ಈ ಬೃಹತ್ ಪೂರ್ವಭಾವಿ ಸಭೆಯಲ್ಲಿ ಮುಖಂಡರಾದ ಬಂಗಾರು ಹನುಮಂತು, ಸಿಮೆಂಟ್ ಮಂಜು, ಬಸವರಾಜ ದಡೆಸೂಗುರು, ಮಾಜಿ ಸಂಸದ ಉಮೇಶ್ ಜಾಧವ್, ಪ್ರತಾಪ್ ಗೌಡ, ಕೆ.ಟಿ. ಕುಮಾರಸ್ವಾಮಿ, ಉಮೇಶ್ ಕಾರಜೋಳ, ಮಾದಿಗ ದಂಡೋರದ ನರಸಪ್ಪ, ಫರ್ನಾಂಡಿಸ್, ಶಾಸಕಿ ಹೇಮಲತಾ ನಾಯಕ, ವೈ. ಸಂಪಂಗಿ, ದಿವಾಕರ್, ಬಳ್ಳಾರಿ ಹನುಮಂತಪ್ಪ, ಭಾರ್ಗವಿ, ದೀಪಕ್ ದೊಡ್ಡಯ್ಯ, ಸಂಜೀವ ಹೆಗಡೆ, ಸಾಮರಸ್ಯ ವಾದಿರಾಜ್, ಬಾಳೆಕಾಯಿ ರಾಮದಾಸ್ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.







