ಜಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಹಲವು ವರ್ಷಗಳ ಹಿಂದೆ ಕನ್ನ ಹಾಕಿದ್ದ ಶಿಗ್ಲಿ ಬಸ್ಯಾ ಈಗ ದಾವಣಗೆರೆ ಜಿಲ್ಲೆಯಲ್ಲಿ ಕೈಚಳಕ ತೋರಿಸಿದ್ದಾನೆ.
ಕಡಿಮೆ ಬೆಲೆಗೆ ಕದ್ದ ಚಿನ್ನವನ್ನು ನೀಡುವುದಾಗಿ ನಂಬಿಸಿ, ರೈತರೊಬ್ಬರಿಂದ ಹಂತ ಹಂತವಾಗಿ 70 ಸಾವಿರ ರೂಪಾಯಿ ಪಡೆದು ವಂಚಿಸಿರುವ ಘಟನೆ ಜಗಳೂರು ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ನ್ಯಾಮತಿ ತಾಲೂಕು ಸುರಹೊನ್ನೆ ಗ್ರಾಮದ ನಿವಾಸಿ ಶಿವರಾಜ್ ಎಲ್.ಎನ್. (59) ಎಂಬುವವರೇ ವಂಚನೆಗೊಳಗಾದ ರೈತ. ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ‘ಶಿಗ್ಲಿ ಬಸ್ಯಾ’ ಎಂಬಾತನೇ ಹಣ ಪಡೆದು ವಂಚಿಸಿದ ಆರೋಪಿ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಶಿಗ್ಲಿ ಬಸ್ಯಾ ಪರಿಚಯವಾಗಿದ್ದು ಹೇಗೆ?
ಕಳೆದ 2025ರ ನವೆಂಬರ್ 12ರಂದು ದಾವಣಗೆರೆಯ ಶಾಮನೂರು ಗ್ರಾಮದಲ್ಲಿ ಆರೋಪಿ ಶಿಗ್ಲಿ ಬಸ್ಯ ಹಾಗೂ ದೂರುದಾರ ಶಿವರಾಜ್ ನಡುವೆ ಪರಿಚಯವಾಗಿತ್ತು. ತಾನು ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದವನೆಂದು ಪರಿಚಯಿಸಿಕೊಂಡಿದ್ದ ಬಸ್ಯ, ತನ್ನ ಬಳಿ ಕೆಜಿಗಟ್ಟಲೆ ಕದ್ದ ಚಿನ್ನದ ದಾಸ್ತಾನು ಇದೆ ಎಂದು ನಂಬಿಸಿದ್ದನು.

ಇದನ್ನು ನಂಬಿದ ಶಿವರಾಜ್, ತನಗೂ ಕಡಿಮೆ ದರದಲ್ಲಿ 10 ಗ್ರಾಂ ಚಿನ್ನ ನೀಡುವಂತೆ ಕೇಳಿಕೊಂಡಿದ್ದರು. ಇದಕ್ಕೆ ಒಪ್ಪಿದ ವಂಚಕ, ಜಗಳೂರಿನ ಅಂಗಡಿಯೊಂದರಲ್ಲಿ ಚಿನ್ನ ಇರುವುದಾಗಿ ಹೇಳಿ, ಹಣದೊಂದಿಗೆ ದಾವಣಗೆರೆಗೆ ಬರುವಂತೆ ತಿಳಿಸಿದ್ದನು.
ಹಣ ಪಡೆದು ಪರಾರಿಯಾದ ಶಿಗ್ಲಿ ಬಸ್ಯಾ !
ಶಿಗ್ಲಿ ಬಸ್ಯಾ ನ ಮಾತು ನಂಬಿದ ಶಿವರಾಜ್, 60 ಸಾವಿರ ರೂ. ಹೊಂದಿಸಿಕೊಂಡು ನವೆಂಬರ್ 18ರಂದು ದಾವಣಗೆರೆಗೆ ಬಂದಿದ್ದರು. ಅಲ್ಲಿಂದ ಇಬ್ಬರೂ ಖಾಸಗಿ ಬಸ್‌ನಲ್ಲಿ ಜಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಜಗಳೂರು ಪೊಲೀಸ್ ಠಾಣೆ ಪಕ್ಕದ ಹೋಟೆಲ್‌ನಲ್ಲಿ ಟೀ ಕುಡಿಯುತ್ತಿದ್ದಾಗ, ಶಿವರಾಜ್ ಅವರು 60 ಸಾವಿರ ರೂ. ನಗದನ್ನು ಆರೋಪಿಗೆ ನೀಡಿದ್ದಾರೆ. ಹಣ ಪಡೆದುಕೊಂಡ ಶಿಗ್ಲಿ ಬಸ್ಯ, “ಇಲ್ಲೇ ಇರಿ, ಚಿನ್ನ ತರುತ್ತೇನೆ” ಎಂದು ಹೇಳಿ ಹೋದವನು ಮತ್ತೆ ಮರಳಿ ಬರದೆ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.
ಫೋನ್ ಪೇ ಮೂಲಕವೂ ಖದೀಮತನ:
-
ಹಣ ಪಡೆದು ಪರಾರಿಯಾದ ಕೇವಲ ಒಂದು ಗಂಟೆಯ ನಂತರ ಬೇರೊಂದು ಮೊಬೈಲ್ ನಂಬರ್‌ನಿಂದ ಕರೆ ಮಾಡಿದ ಆರೋಪಿ, 5,000 ರೂ.ಗಳನ್ನು ಫೋನ್ ಪೇ (PhonePe) ಮಾಡಿಸಿಕೊಂಡಿದ್ದಾನೆ.
-
ಇದಾದ ಮೂರು ದಿನಗಳ ಬಳಿಕ ಮತ್ತೆ ಕರೆ ಮಾಡಿ, ಮತ್ತೊಂದು ನಂಬರ್‌ಗೆ 5,000 ರೂ. ಹಾಕಿಸಿಕೊಂಡು, ಒಟ್ಟು 70,000 ರೂ. ವಂಚಿಸಿದ್ದಾನೆ.
ಪೊಲೀಸ್ ತನಿಖೆ ಚುರುಕು: ತಾನು ವಂಚನೆಗೊಳಗಾಗಿರುವುದನ್ನು ಅರಿತ ಶಿವರಾಜ್ ಅವರು ಮೊದಲು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಘಟನೆ ನಡೆದ ಸ್ಥಳ ಜಗಳೂರು ವ್ಯಾಪ್ತಿಗೆ ಸೇರಿರುವುದರಿಂದ, ಪ್ರಕರಣವನ್ನು ಜಗಳೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಸದ್ಯ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಇನ್ಸ್‌ಪೆಕ್ಟರ್ ಸಿದ್ರಾಮಯ್ಯ ಅವರ ನೇತೃತ್ವದಲ್ಲಿ ಆರೋಪಿ ಶಿಗ್ಲಿ ಬಸ್ಯನ ಬಂಧನಕ್ಕಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
