ಚಿತ್ರದುರ್ಗ: 12ನೇ ಶತಮಾನದ ಶರಣ ಚಳವಳಿಯಲ್ಲ ಭಕ್ತಿ ಮಾರ್ಗಕಿಂತ ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಒತ್ತು ನೀಡಿದ ಮಹಾನ್ ಶಿವಶರಣ ಶ್ರೀ ಸಿದ್ಧರಾಮೇಶ್ವರರು. ಇಂದು ಅವರ 853ನೇ ಜಯಂತಿಯ ಶುಭ ಸಂದರ್ಭದಲ್ಲಿ, ಅವರ ಲೋಕಕಲ್ಯಾಣದ ಚಿಂತನೆಗಳು ಇಂದಿನ ಸಮಾಜಕ್ಕೆ ಹೇಗೆ ದಾರಿದೀಪವಾಗಿವೆ ಎಂಬುದರ ವಿಶೇಷ ನೋಟ ಇಲ್ಲಿದೆ.
ಜೀವನದ ಹಿನ್ನೆಲೆ:
ಸಿದ್ಧರಾಮೇಶ್ವರರು ಇಂದಿನ ಮಹಾರಾಷ್ಟ್ರದ ಸೊಲ್ಲಾಪುರ (ಸೊನ್ನಲಿಗೆ) ಜಿಲ್ಲೆಯ ಮುಧಗಿ ಎಂಬಲ್ಲಿ ಜನಿಸಿದರು. ತಂದೆ ಮೌದ್ಗಲ್ಯ ಮುನಿ, ತಾಯಿ ಸುಜ್ಞಾನಾದೇವಿ. ಇವರು ಬಾಲ್ಯದಿಂದಲೇ ಆಧ್ಯಾತ್ಮದ ಕಡೆಗೆ ಒಲವು ಹೊಂದಿದ್ದರು. ಮಲ್ಲಿಕಾರ್ಜುನ ಪರಮ ಭಕ್ತರಾದ ಇವರು, ಜನಸೇವೆಯೇ ಜನಾರ್ಧನನ ಸೇವೆ ಎಂದು ನಂಬಿದ್ದರು.
ಕೆರೆ ಕಟ್ಟಿಸಿದ ಕಾಯಕಯೋಗಿ:
ಸಿದ್ಧರಾಮೇಶ್ವರರು ಕೇವಲ ಮಠಾಧೀಶರಾಗಿ ಉಳಿಯಲಿಲ್ಲ. ಜನರ ಬಾಯಾರಿಕೆ ನೀಗಿಸುವುದು ದೇವರ ಪೂಜೆಗಿಂತ ಮಿಗಿಲು ಎಂದು ನಂಬಿದ್ದ ಅವರು, ಅಂದು ಸೋನ್ನಲಿಗೆ ಕರೆಯುತ್ತಿದ್ದ, ಇಂದಿನ ಸೋಲ್ಲಾಪುರದಲ್ಲಿ ಬೃಹತ್ ಕೆರೆಗಳನ್ನು ನಿರ್ಮಿಸಿದರು. ಆಧುನಿಕ ಇಂಜಿನಿಯರಿಂಗ್ ವ್ಯವಸ್ಥೆ ಇಲ್ಲದ ಕಾಲದಲ್ಲಿಯೇ, ಜಲಸಂರಕ್ಷಣೆಯ ಕೆಲಸ ಮಾಡಿದ ಇವರನ್ನು ‘ಜಲಋಷಿ’ ಎಂದು ಕರೆಯಲಾಗುತ್ತದೆ. ಇವರು ನಿರ್ಮಿಸಿದ ಕೆರೆಗಳು ಇಂದಿಗೂ ಲಕ್ಷಾಂತರ ಜನರ ಜೀವನಾಡಿಯಾಗಿವೆ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಮನುಕುಲಕ್ಕೆ ನೀಡಿದ ಜೀವನ ತತ್ವಗಳು:
ಸಿದ್ಧರಾಮೇಶ್ವರರ ತತ್ವಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿರಲಿಲ್ಲ, ಅವು ಇಡೀ ಮನುಕುಲದ ಏಳಿಗೆಗಾಗಿ ಇದ್ದವು.
-
ಕಾಯಕವೇ ಕೈಲಾಸ: ಪ್ರತಿಯೊಬ್ಬರೂ ದುಡಿದು ಉಣ್ಣಬೇಕು, ಪರಾವಲಂಬಿಯಾಗಬಾರದು ಎಂಬುದು ಅವರ ಕಟ್ಟುನಿಟ್ಟಿನ ನಿಲುವಾಗಿತ್ತು.
-
ಅಹಿಂಸೆ ಮತ್ತು ದಯೆ: ಪ್ರಾಣಿ ಬಲಿಯಂತಹ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿ ದಯೆಯೇ ಧರ್ಮದ ಮೂಲವೆಂದು ಜನರಿಗೆ ತಿಳಿ ಹೇಳಿದರು.
-
ಸಾಮಾಜಿಕ ಸಮಾನತೆ: ಜಾತಿ-ಪದ್ಧತಿಯ ದಲಿತರು ಮತ್ತು ಶೋಷಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದರು.
ಅನುಭವ ಮಂಟಪ ಮತ್ತು ವಚನ ಕ್ರಾಂತಿ:
ಬಸವಣ್ಣನವರ ಕರೆಯ ಮೇರೆಗೆ ಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ನೀಡಿದ ಸಿದ್ಧರಾಮೇಶ್ವರರು, ಅಲ್ಲಿನ ವೈಚಾರಿಕ ಕ್ರಾಂತಿಯಿಂದ ಪ್ರಭಾವಿತರಾಗಿ ಶೂದ್ರ ಮತ್ತು ಶೋಷಿತ ಸಮುದಾಯಗಳಿಗೆ ಸಾಮಾಜಿಕ ಗೌರವ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಸಿದ್ಧರಾಮೇಶ್ವರರು ಸಾವಿರಾರು ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳ ಅಂಕಿತನಾಮ ‘ಕಪಿಲಸಿದ್ಧ ಮಲ್ಲಿಕಾರ್ಜುನ’.
“ಯೋಗವೆಂಬುವುದು ಜಪವಲ್ಲ, ಯೋಗವೆಂಬುದು ಅನ್ಯರ ಹಿತಕ್ಕಾಗಿ ದುಡಿಯುವುದು”
ಎಂದು ಹೇಳುವ ಮೂಲಕ ಸಿದ್ಧರಾಮೇಶ್ವರರು ಯೋಗಕ್ಕೆ ಹೊಸ ವ್ಯಾಖ್ಯಾನ ನೀಡಿದ್ದಾರೆ. ಸ್ವಾರ್ಥಕ್ಕಾಗಿ ಮಾಡುವ ಸಾಧನೆಗಿಂತ, ಸಮಾಜದ ಒಳಿತಿಗಾಗಿ ಮಾಡುವ ಕಾಯಕವೇ ಶ್ರೇಷ್ಠ ಯೋಗ ಎಂದು ಪ್ರತಿಪಾದಿಸಿದ್ದಾರೆ. ಕರ್ಮಯೋಗ ಮತ್ತು ಕಾಯಕದ ಮಹತ್ವ ತಿಳಿಸುವ ಮೂಲಕ ಆಧ್ಯಾತ್ಮವನ್ನು ಆಕಾಶದಿಂದ ಭೂಮಿಗೆ ಇಳಿಸಿದರು. ಜನಸೇವೆಯ ಮೂಲಕವೇ ಮುಕ್ತಿ ಪಡೆಯಬಹುದು ಎಂಬ ಪ್ರಾಯೋಗಿಕ ಸಿದ್ಧಾಂತವನ್ನು ಅವರು ಮಂಡಿಸಿದರು.
ದಾಸೋಹ ತತ್ವ, ಸತ್ಯ, ಸಮಾಜ ಸುಧಾರಣೆಯ ಕಳಕಳಿ, ಸರಳತೆ ಮತ್ತು ವೈಚಾರಿಕತೆ, ಸೇವೆ ಮತ್ತು ಶ್ರಮದ ಮಹತ್ವವನ್ನು ಅವರು ಬೋದಿಸಿದರು. ಸಮಾಜದಲ್ಲಿದ್ದ ಅಸ್ಪೃಶ್ಯತೆ, ಮೇಲು-ಕೀಳು ಮತ್ತು ಮೂಢನಂಬಿಕೆಗಳ ವಿರುದ್ಧ ಕ್ರಾಂತಿ ಎಬ್ಬಿಸಿದರು. ‘ಲೋಕದ ಹಿತವೇ ನನ್ನ ಹಿತ’ ಎಂದು ನಂಬಿದ್ದ ಸಿದ್ಧರಾಮೇಶ್ವರರ ವಚನಗಳು ಅಸಮಾನತೆ, ಅಹಂಕಾರ ಮತ್ತು ಅಂಧಶ್ರದ್ಧೆಗಳಿಗೆ ವಿರುದ್ಧವಾಗಿ ಅವರು ನೀಡಿದ ಸಂದೇಶಗಳು ಇಂದಿನ ಪೀಳಿಗೆಯಿಗೂ ದಾರಿ ದೀಪವಾಗಿವೆ.
853ನೇ ಜಯಂತಿಯ ಸಂದೇಶ:
ಇಂದಿನ ಸ್ಪರ್ಧಾತ್ಮಕ ಮತ್ತು ಸ್ವಾರ್ಥ ತುಂಬಿದ ಜಗತ್ತಿನಲ್ಲಿ ಸಿದ್ಧರಾಮೇಶ್ವರರ ‘ಪರಹಿತ’ ಚಿಂತನೆ ಅತ್ಯಂತ ಅವಶ್ಯಕವಾಗಿದೆ. ಪರಿಸರ ನಾಶವಾಗುತ್ತಿರುವ ಈ ಸಂದರ್ಭದಲ್ಲಿ, ಕೆರೆಗಳನ್ನು ರಕ್ಷಿಸಿ ನೀರನ್ನು ಉಳಿಸುವ ಅವರ ಸಂದೇಶವನ್ನು ಪಾಲಿಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ. ಸಿದ್ಧರಾಮೇಶ್ವರರ ಜಯಂತಿಯು ಕೇವಲ ಸಂಭ್ರಮದ ಆಚರಣೆಯಾಗದೆ, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ದಿನವಾಗಿರಲಿ.
ಲೇಖನ: ಮುದ್ದುಕಿರಣ ಎಂ
ಪ್ರಶಿಕ್ಷಣಾರ್ಥಿ (2026), ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಚಿತ್ರದುರ್ಗ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
madhayakarnatakalive@gmail.com
