ದಾವಣಗೆರೆ: ಆನಗೋಡು ಮೃಗಾಲಯದಲ್ಲಿ ನಾಲ್ಕು ಜಿಂಕೆಗಳ ಸಾವು; ಪ್ರವಾಸಿಗರಿಗೆ ಪ್ರವೇಶ ಬಂದ್!

Author Picture
Published On: January 18, 2026

—Advertisement—

ದಾವಣಗೆರೆ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಕಳೆದ ಮೂರು ದಿನಗಳಲ್ಲಿ ನಾಲ್ಕು ಚುಕ್ಕೆ ಜಿಂಕೆಗಳು ಮೃತಪಟ್ಟಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಮೃಗಾಲಯವನ್ನು ಮುಂದಿನ ಆದೇಶದವರೆಗೆ ಸಾರ್ವಜನಿಕರ ವೀಕ್ಷಣೆಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ ತಿಳಿಸಿದ್ದಾರೆ.

ಸತತ ಮೂರು ದಿನ ಕಪ್ಪು ಚುಕ್ಕೆ ಜಿಂಕೆಗಳ ಸಾವು

ಮೃಗಾಲಯದಲ್ಲಿ ಜಿಂಕೆಗಳ ಸರಣಿ ಸಾವು ಆತಂಕ ಮೂಡಿಸಿದೆ. ಜನವರಿ 16 ರಂದು ಮೊದಲ ಚುಕ್ಕೆ ಜಿಂಕೆ ಮೃತಪಟ್ಟಿತ್ತು. ನಂತರ ಜನವರಿ 17 ರಂದು ಎರಡು ಹಾಗೂ ಇಂದು (ಜನವರಿ 18) ಮತ್ತೊಂದು ಜಿಂಕೆ ಸಾವನ್ನಪ್ಪಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು, ಪ್ರಾಣಿ ಆರೋಗ್ಯ ಸಲಹಾ ಸಮಿತಿಯ ಸದಸ್ಯರನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿಯಲು ರಕ್ತದ ಮಾದರಿ ಮತ್ತು ಅಂಗಾಂಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

‘ಹೆಮರಾಜಿಕ್ ಸೆಪ್ಟಿಸೆಮಿಯಾ’ ಶಂಕೆ

ಪ್ರಾಥಮಿಕ ಲಕ್ಷಣಗಳನ್ನು ಗಮನಿಸಿದ ತಜ್ಞರು, ಇದು ‘ಹೆಮರಾಜಿಕ್ ಸೆಪ್ಟಿಸೆಮಿಯಾ’ (HS) ಎಂಬ ಸಾಂಕ್ರಾಮಿಕ ರೋಗವಿರಬಹುದು ಎಂದು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೃಗಾಲಯದಲ್ಲಿರುವ ಉಳಿದ 170 ಜಿಂಕೆಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಉಳಿದ ಜಿಂಕೆಗಳಿಗೆ ರೋಗ ನಿರೋಧಕ ಚಿಕಿತ್ಸೆ ನೀಡಲಾಗುತ್ತಿದ್ದು, ಹಿರಿಯ ಪಶುವೈದ್ಯರ ಮಾರ್ಗದರ್ಶನದಲ್ಲಿ ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದೆ.

ಸಾರ್ವಜನಿಕರ ಗಮನಕ್ಕೆ

ಮೃಗಾಲಯದಲ್ಲಿ ಪ್ರಸ್ತುತ 94 ಹೆಣ್ಣು, 58 ಗಂಡು ಹಾಗೂ 18 ಮರಿಗಳು ಸೇರಿ ಒಟ್ಟು 170 ಚುಕ್ಕೆ ಜಿಂಕೆಗಳಿವೆ. ರೋಗ ಹರಡುವುದನ್ನು ತಡೆಯಲು ಮತ್ತು ಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ ಕೋರಿದ್ದಾರೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

"ಮಧ್ಯ ಕರ್ನಾಟಕ ಲೈವ್ (Madhyakarnataka.live) ಕರ್ನಾಟಕದ ಹೃದಯಭಾಗದ ನೈಜ, ನಿಖರ ಮತ್ತು ಕ್ಷಣ ಕ್ಷಣದ ಸುದ್ದಿಗಳಿಗಾಗಿ ಮೀಸಲಾದ ಡಿಜಿಟಲ್ ಸುದ್ದಿ ವೇದಿಕೆಯಾಗಿದೆ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಜಿಲ್ಲೆಗಳ ಸ್ಥಳೀಯ ಸಮಸ್ಯೆಗಳು, ರಾಜಕೀಯ, ಕೃಷಿ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಜಗತ್ತಿಗೆ ತಲುಪಿಸುವುದು ನಮ್ಮ ಗುರಿ. ನಾವು ಕೇವಲ ಸುದ್ದಿಯನ್ನಷ್ಟೇ ಅಲ್ಲ, ಜನರ ಧ್ವನಿಯಾಗಲು ಬಯಸುತ್ತೇವೆ."… Read More

Related News

Leave a Comment

Home
Web Stories
Instagram
WhatsApp