ದಾವಣಗೆರೆ: ಆನಗೋಡು ಮೃಗಾಲಯದಲ್ಲಿ ಒಂಟಿ ಕೃಷ್ಣಮೃಗ ನಾಪತ್ತೆ – ಮೂರು ತಿಂಗಳಾದರೂ ಅಧಿಕಾರಿಗಳ ಮೌನವೇಕೆ?

Author Picture
Published On: January 21, 2026

—Advertisement—

ಮಧ್ಯ ಕರ್ನಾಟಕ ಲೈವ್ ವಿಶೇಷ ವರದಿ, ದಾವಣಗೆರೆ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಪಂಜರದೊಳಗಿದ್ದ ‘ಒಂಟಿ ಕೃಷ್ಣಮೃಗ‘ವೊಂದು ರಹಸ್ಯವಾಗಿ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ವಿಶೇಷವೆಂದರೆ ಈ ಘಟನೆ ನಡೆದು ಮೂರು ತಿಂಗಳು ಕಳೆದಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಅತ್ಯಂತ ಗೌಪ್ಯವಾಗಿಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಹಿನ್ನೆಲೆ: ಕಳೆದ 2022ರಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಸೇರಿದ ಕಲ್ಲೇಶ್ವರ ಮಿಲ್‌ನಿಂದ ರಕ್ಷಿಸಲಾಗಿದ್ದ ವನ್ಯಜೀವಿಗಳ ಪೈಕಿ ಈ ಕೃಷ್ಣಮೃಗವೂ ಒಂದಾಗಿತ್ತು. ಅರಣ್ಯ ಇಲಾಖೆಯು ಇದನ್ನು ಆನಗೋಡು ಮೃಗಾಲಯಕ್ಕೆ ಸ್ಥಳಾಂತರಿಸಿತ್ತು. ಇತರ ಪ್ರಾಣಿಗಳೊಂದಿಗೆ ಗಲಾಟೆ ಮಾಡುತ್ತದೆ ಎಂಬ ಕಾರಣಕ್ಕೆ ಈ ಕೃಷ್ಣಮೃಗವನ್ನು ಪ್ರತ್ಯೇಕ ಬೋನಿನಲ್ಲಿ ಇರಿಸಲಾಗಿತ್ತು.

ನಿಗೂಢ ನಾಪತ್ತೆ: ಒಂದು ದಿನ ಬೆಳಿಗ್ಗೆ ನೋಡಿದಾಗ ಬೋನಿನಲ್ಲಿದ್ದ ಕೃಷ್ಣಮೃಗ ಮಾಯವಾಗಿತ್ತು. ಇದು ಚಿರತೆಯ ದಾಳಿಯೇ? ಅಥವಾ ಕಳ್ಳತನವೇ? ಎಂಬ ಪ್ರಶ್ನೆಗಳಿಗೆ ಈವರೆಗೂ ಉತ್ತರ ಸಿಕ್ಕಿಲ್ಲ.

ಚಿರತೆ ದಾಳಿಯ ಶಂಕೆ: ಮೃಗಾಲಯದ ಹಿಂಭಾಗದಲ್ಲಿ ಕಾಡಿರುವುದರಿಂದ ಚಿರತೆ ಬಂದಿರಬಹುದು ಎಂದು ಅಧಿಕಾರಿಗಳು ಸಬೂಬು ನೀಡುತ್ತಿದ್ದಾರೆ. ಆದರೆ, 10-15 ಅಡಿ ಎತ್ತರದ ಫೆನ್ಸಿಂಗ್ ದಾಟಿ ಚಿರತೆ ಪ್ರಾಣಿಯನ್ನು ಹೊತ್ತೊಯ್ದಿದ್ದರೆ ಅಲ್ಲಿ ರಕ್ತದ ಕಲೆಗಳು ಇರಬೇಕಿತ್ತು, ಆದರೆ ಅಂತಹ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ.

ಸಿಸಿಟಿವಿ ಕೊರತೆ: ಇಷ್ಟೊಂದು ಪ್ರಾಣಿಗಳಿರುವ ಮೃಗಾಲಯದಲ್ಲಿ ಘಟನೆ ನಡೆದ ಸಮಯದಲ್ಲಿ ಒಂದೇ ಒಂದು ಸಿಸಿಟಿವಿ ಕ್ಯಾಮೆರಾ ಇರಲಿಲ್ಲ ಎಂಬುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಕೃಷ್ಣಮೃಗ ನಾಪತ್ತೆಯಾದ ನಂತರ ಈಗ ಸಿಸಿಟಿವಿ ಅಳವಡಿಸಲಾಗಿದೆ.

ಡಿ.ಎಫ್.ಒ (DFO) ಹರ್ಷವರ್ಧನ್ ಹೇಳೋದೇನು?

ದಾವಣಗೆರೆ ಡಿ.ಎಫ್.ಒ (DFO) ಹರ್ಷವರ್ಧನ್ ಅವರು ಪ್ರತಿಕ್ರಿಯಿಸಿ, “ಸುಮಾರು ಮೂರು ತಿಂಗಳ ಹಿಂದೆ ಕೃಷ್ಣಮೃಗ ನಾಪತ್ತೆಯಾಗಿರುವುದು ನಿಜ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಸಿಬ್ಬಂದಿಗಳ ಕಾಲ್ ರೆಕಾರ್ಡ್ಸ್ (CDR) ಪರಿಶೀಲಿಸಲಾಗುತ್ತಿದೆ. ಚಿರತೆ ದಾಳಿ ಅಥವಾ ಹಿಂಡಿನಲ್ಲಿ ಸೇರಿರುವ ಸಾಧ್ಯತೆಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ,” ಎಂದು ತಿಳಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ

ಪ್ರಕರಣ ನಡೆದ ಮೂರು ತಿಂಗಳಾದರೂ ಯಾವುದೇ ಎಫ್.ಐ.ಆರ್ (FIR) ದಾಖಲಿಸದೆ ಅಥವಾ ಮಾಧ್ಯಮ ಪ್ರಕಟಣೆ ನೀಡದೆ ವಿಷಯವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.

ಇತ್ತೀಚೆಗೆ ರೋಗದ ಭೀತಿಯಿಂದ ಮೃಗಾಲಯವನ್ನು ಸಾರ್ವಜನಿಕರಿಗೆ ಬಂದ್ ಮಾಡಲಾಗಿದ್ದು, ಇದರ ಹಿಂದೆಯೂ ಈ ನಾಪತ್ತೆ ಪ್ರಕರಣವನ್ನು ಮರೆಮಾಚುವ ಉದ್ದೇಶವಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ವನ್ಯಜೀವಿಗಳ ರಕ್ಷಣೆಯ ಜವಾಬ್ದಾರಿ ಹೊತ್ತ ಅರಣ್ಯ ಇಲಾಖೆಯು ಈ ನಿಗೂಢ ಪ್ರಕರಣವನ್ನು ಶೀಘ್ರವಾಗಿ ಭೇದಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ: ವಿಶೇಷ ಪ್ರತಿನಿಧಿ, ಮಧ್ಯ ಕರ್ನಾಟಕ ಲೈವ್

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

madhayakarnatakalive@gmail.com

"ಮಧ್ಯ ಕರ್ನಾಟಕ ಲೈವ್ (Madhyakarnataka.live) ಕರ್ನಾಟಕದ ಹೃದಯಭಾಗದ ನೈಜ, ನಿಖರ ಮತ್ತು ಕ್ಷಣ ಕ್ಷಣದ ಸುದ್ದಿಗಳಿಗಾಗಿ ಮೀಸಲಾದ ಡಿಜಿಟಲ್ ಸುದ್ದಿ ವೇದಿಕೆಯಾಗಿದೆ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಜಿಲ್ಲೆಗಳ ಸ್ಥಳೀಯ ಸಮಸ್ಯೆಗಳು, ರಾಜಕೀಯ, ಕೃಷಿ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಜಗತ್ತಿಗೆ ತಲುಪಿಸುವುದು ನಮ್ಮ ಗುರಿ. ನಾವು ಕೇವಲ ಸುದ್ದಿಯನ್ನಷ್ಟೇ ಅಲ್ಲ, ಜನರ ಧ್ವನಿಯಾಗಲು ಬಯಸುತ್ತೇವೆ."… Read More

Related News

Leave a Comment

Home
Web Stories
Instagram
WhatsApp