ಕಚೇರಿ ಅಲೆಯುವಂತಿಲ್ಲ, ಜಾರಿಯಾಯ್ತು ‘ಸ್ವಯಂಚಾಲಿತ ಮ್ಯುಟೇಷನ್’: ಪಹಣಿಗೆ ಆಧಾರ್ ಲಿಂಕ್ ಮಾಡಲು ಜಿಲ್ಲಾಧಿಕಾರಿಗಳ ಸೂಚನೆ

Author Picture
Published On: February 24, 2026

—Advertisement—

ಸ್ವಯಂಚಾಲಿತ ಮ್ಯುಟೇಷನ್: ಕಂದಾಯ ಇಲಾಖೆಯ ಕೆಲಸಗಳಿಗಾಗಿ, ಅದರಲ್ಲೂ ಜಮೀನಿನ ಮ್ಯುಟೇಷನ್ (ಖಾತೆ ಬದಲಾವಣೆ) ಗಾಗಿ ತಿಂಗಳುಗಟ್ಟಲೆ ಕಚೇರಿಗಳಿಗೆ ಅಲೆಯುತ್ತಿದ್ದ ರೈತರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ‘ಸ್ವಯಂಚಾಲಿತ ಮ್ಯುಟೇಷನ್’ (Automatic Mutation) ವ್ಯವಸ್ಥೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಚಾಲನೆ ನೀಡಿದ್ದು, ಇದು ಸಾರ್ವಜನಿಕರ ಸಮಯ ಹಾಗೂ ಹಣ ಎರಡನ್ನೂ ಉಳಿಸಲಿದೆ.

ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಪ್ರತಿಯೊಬ್ಬರೂ ತಮ್ಮ ಜಮೀನಿನ ಪಹಣಿಗೆ (ಆರ್.ಟಿ.ಸಿ) ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಿಸಿಕೊಳ್ಳುವಂತೆ ಚಿತ್ರದುರ್ಗ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮನವಿ ಮಾಡಿದ್ದಾರೆ.

ಏನಿದು ಸ್ವಯಂಚಾಲಿತ ಮ್ಯುಟೇಷನ್?

ಈ ಹಿಂದೆ ಜಮೀನು ನೋಂದಣಿಯಾದ ಬಳಿಕ 7 ಅಥವಾ 15 ದಿನಗಳ ನೋಟಿಸ್ ಅವಧಿ ಇರುತ್ತಿತ್ತು. ಆ ಅವಧಿ ಮುಗಿದ ಮೇಲೂ ಕಂದಾಯ ನಿರೀಕ್ಷಕರು (ಆರ್.ಐ) ಖುದ್ದಾಗಿ ತಾಲ್ಲೂಕು ಕಚೇರಿಗೆ ಬಂದು ಡಿಜಿಟಲ್ ಸಹಿ ಮಾಡಿದರಷ್ಟೇ ಮ್ಯುಟೇಷನ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿತ್ತು. ಇದರಿಂದ ಅನಗತ್ಯ ವಿಳಂಬವಾಗುತ್ತಿತ್ತು. ಆದರೆ ಈಗ ಜಾರಿಗೆ ಬಂದಿರುವ ಹೊಸ ಪದ್ಧತಿಯಲ್ಲಿ, ನೋಟಿಸ್ ಅವಧಿ ಮುಗಿಯುತ್ತಿದ್ದಂತೆ ಯಾವುದೇ ಅಧಿಕಾರಿಗಳ (ಮಾನವ) ಹಸ್ತಕ್ಷೇಪವಿಲ್ಲದೆ ಸರ್ವರ್ ಸಹಿಯೊಂದಿಗೆ ಭೂಮಿ ತಂತ್ರಾಂಶದಲ್ಲಿ (Bhoomi Software) ತಾನಾಗಿಯೇ ಮ್ಯುಟೇಷನ್ ಅನುಮೋದನೆಯಾಗಲಿದೆ.

ಆಕ್ಷೇಪಣೆ ಬಂದರೆ ಪ್ರಕ್ರಿಯೆ ಹೇಗಿರುತ್ತೆ? ನಿಗದಿತ 7 ಅಥವಾ 15 ಕೆಲಸದ ದಿನಗಳೊಳಗೆ ಕಂದಾಯ ನಿರೀಕ್ಷಕರು (ಸರ್ಕಾರಿ ಆಕ್ಷೇಪ) ಅಥವಾ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಿದರೆ, ಆ ಮ್ಯುಟೇಷನ್ ಪ್ರಕ್ರಿಯೆ ತಕ್ಷಣವೇ ಆರ್.ಸಿ.ಸಿ.ಎಂ.ಎಸ್ (RCCMS) ತಂತ್ರಾಂಶದ ಮೂಲಕ ತಹಶೀಲ್ದಾರ್ ನ್ಯಾಯಾಲಯಕ್ಕೆ ವರ್ಗಾವಣೆಯಾಗುತ್ತದೆ. ಅಲ್ಲಿ ತಹಶೀಲ್ದಾರರ ನಿರ್ಧಾರದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಈಗ ಆರ್.ಐ ಗಳಿಗೆ ಪ್ರತ್ಯೇಕ ಲಾಗಿನ್ ಐಡಿ ನೀಡಲಾಗಿದ್ದು, ಯಾವುದೇ ಸ್ಥಳದಿಂದಲಾದರೂ ಆಕ್ಷೇಪಣೆ ಸಲ್ಲಿಸಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಯಾವ ಜಮೀನುಗಳಿಗೆ ಇದು ಅನ್ವಯಿಸಲ್ಲ? ಸರ್ಕಾರಿ ಜಮೀನುಗಳು, ಸರ್ಕಾರಿ ನಿಬಂಧನೆ ಇರುವ ಜಾಗ ಹಾಗೂ ಪಿಟಿಸಿಎಲ್ (PTCL) ಕಾಯ್ದೆ ವ್ಯಾಪ್ತಿಗೆ ಬರುವ ಜಮೀನುಗಳನ್ನು ಭೂಮಿ ತಂತ್ರಾಂಶದಲ್ಲಿ ಮೊದಲೇ ‘ಫ್ಲಾಗ್’ ಮಾಡಲಾಗಿರುತ್ತದೆ. ಇವುಗಳ ನೋಂದಣಿ ಸಾಧ್ಯವಿಲ್ಲ ಮತ್ತು ಇವು ಸ್ವಯಂಚಾಲಿತ ಮ್ಯುಟೇಷನ್ ವ್ಯಾಪ್ತಿಗೂ ಬರುವುದಿಲ್ಲ.

ಇದನ್ನು ಓದಿ: ಮದುವಣಗಿತ್ತಿಯಂತೆ ಕಂಗೊಳಿಸುತ್ತಿರುವ ಬೆಣ್ಣೆನಗರಿ: ದಾವಣಗೆರೆ ದುರ್ಗಮ್ಮನ ಜಾತ್ರೆಗೆ ಅದ್ಧೂರಿ ಚಾಲನೆ, ಈ ಬಾರಿಯ ವಿಶೇಷತೆಗಳೇನು?

ಮೊಬೈಲ್ ಗೆ ಬರಲಿದೆ ಎಸ್ಎಂಎಸ್, ಎಲ್ಲಿ ಮಾಡಿಸಬೇಕು ಆಧಾರ್ ಲಿಂಕ್? ಮ್ಯುಟೇಷನ್ ಪೂರ್ಣಗೊಂಡ ತಕ್ಷಣವೇ ಭೂಮಾಲೀಕರಿಗೆ ಎಸ್ಎಂಎಸ್ (SMS) ಮೂಲಕ ಮಾಹಿತಿ ರವಾನೆಯಾಗುತ್ತದೆ ಹಾಗೂ ಸಂಬಂಧಿಸಿದ ನೋಟಿಸ್ ಗಳನ್ನು ಇ-ಚಾವಡಿಯಲ್ಲಿ ವೀಕ್ಷಿಸಬಹುದು. ಇದರಿಂದ ಮಧ್ಯವರ್ತಿಗಳ ಕಾಟ ಸಂಪೂರ್ಣವಾಗಿ ತಪ್ಪಲಿದೆ. ಏಪ್ರಿಲ್ ನಿಂದ ಕಂದಾಯ ನಿರೀಕ್ಷಕರಿಗೆ ಕ್ರೋಮ್ ಬುಕ್ ನೀಡಲಾಗುತ್ತಿದ್ದು, ಮನೆಬಾಗಿಲಿಗೆ ಸೇವೆ ಸಿಗಲಿದೆ.

ಸಾರ್ವಜನಿಕರು ಈ ಅತ್ಯುತ್ತಮ ಯೋಜನೆಯ ಲಾಭ ಪಡೆಯಬೇಕು ಹಾಗೂ ತಮ್ಮ ಜಮೀನಿನ ಪಹಣಿಗೆ (RTC) ತಕ್ಷಣವೇ ಆಧಾರ್ ಸಂಖ್ಯೆ ಜೋಡಣೆ ಮಾಡಿಸಬೇಕು. ಇದಕ್ಕಾಗಿ ನಿಮ್ಮ ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿ (VAO), ಕಂದಾಯ ನಿರೀಕ್ಷಕರು, ನಾಡಕಚೇರಿ ಅಥವಾ ತಾಲೂಕು ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Leave a Comment

Home
Web Stories
Instagram
WhatsApp