ದಾವಣಗೆರೆ: ಬೆಣ್ಣೆನಗರಿಯಲ್ಲಿ ಸದಾ ಜನರ ಸೇವೆಯಲ್ಲಿರುವ ‘ನಮ್ಮ 112’ ಪೊಲೀಸ್ ಪಡೆ ಮತ್ತೊಂದು ಮಾನವೀಯ ಕಾರ್ಯ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ದಾರಿ ತಪ್ಪಿ ಅಸಹಾಯಕರಾಗಿ ಬಿದ್ದಿದ್ದ 75 ವರ್ಷದ ವೃದ್ಧನನ್ನು ಪತ್ತೆ ಹಚ್ಚಿ, ಅವರ ಕುಟುಂಬದವರನ್ನು ಹುಡುಕಿ ಸುರಕ್ಷಿತವಾಗಿ ಒಪ್ಪಿಸುವಲ್ಲಿ ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.
ಘಟನೆಯ ವಿವರ:
ದಿನಾಂಕ 02-03-2026 ರಂದು ಸಂಜೆ 7:00 ಗಂಟೆಯ ಸುಮಾರಿಗೆ 112 ತುರ್ತು ಸೇವೆಗೆ ಕರೆ ಬಂದಿತ್ತು. ದಾವಣಗೆರೆ ನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಭೂತಪ್ಪ ದೇವಸ್ಥಾನದ ಬಳಿ ವೃದ್ಧರೊಬ್ಬರು ಅನಾಥವಾಗಿ ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.
ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ 112 ಸಿಬ್ಬಂದಿಗಳಾದ ಶ್ರೀ ಗುರುಮೂರ್ತಿ ಹಾಗೂ ಶ್ರೀ ರುದ್ರೇಶ್ ಅವರು ಸುಮಾರು 75 ವರ್ಷ ಪ್ರಾಯದ ವೃದ್ಧರನ್ನು ವಿಚಾರಿಸಿದ್ದಾರೆ. ಆದರೆ, ವಯೋಸಹಜ ಮರೆವಿನಿಂದಾಗಿ ಅವರು ತಮ್ಮ ವಿಳಾಸ ಅಥವಾ ಕುಟುಂಬದ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ. ತಕ್ಷಣವೇ ಸಿಬ್ಬಂದಿಗಳು ಅವರನ್ನು ಜನ ಶಕ್ತಿ ಸ್ವಯಂ ಸೇವಾ ಸಂಸ್ಥೆಗೆ ಕರೆದೊಯ್ದು ಸುರಕ್ಷಿತವಾಗಿ ದಾಖಲಿಸಿದರು.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಪೊಲೀಸರ ಚಾಣಾಕ್ಷ ನಡೆ:
ವೃದ್ಧರ ಗುರುತು ಪತ್ತೆ ಹಚ್ಚಲು ಮುಂದಾದ ವಿದ್ಯಾನಗರ ಪೊಲೀಸ್ ಠಾಣೆಯ ಪಿಐ ಶ್ರೀಮತಿ ಶಿಲ್ಪ ವೈ ಎಸ್ ಅವರು ರಾಣೇಬೆನ್ನೂರು ಪೊಲೀಸರಿಗೆ ಮಾಹಿತಿ ನೀಡಿದರು. ರಾಣೇಬೆನ್ನೂರು ಪೊಲೀಸ್ ಸಿಬ್ಬಂದಿ ಶ್ರೀ ಪೂಜಾರ್ ಅವರು ಸ್ಥಳೀಯವಾಗಿ ಮಾಹಿತಿ ಸಂಗ್ರಹಿಸಿದಾಗ, ವೃದ್ಧರ ಹೆಸರು ಪೀತಾಂಬರಪ್ಪ ವಿಭೂತಿ (ತಂದೆ ನಿಂಗಪ್ಪ) ಎಂದು ತಿಳಿದುಬಂದಿದೆ.
ಅಂತಿಮವಾಗಿ ದಾವಣಗೆರೆಯ ಎರಗುಂಟೆ ನಿವಾಸಿಯಾದ ವೃದ್ಧರ ಮಗಳು ಶ್ರೀಮತಿ ಶಿಲ್ಪ (35 ವರ್ಷ) ಅವರನ್ನು ಸಂಪರ್ಕಿಸಿ, ವೃದ್ಧರನ್ನು ಅವರ ವಶಕ್ಕೆ ಒಪ್ಪಿಸಲಾಗಿದೆ. ಮಗಳನ್ನು ಕಂಡ ಪೀತಾಂಬರಪ್ಪ ಅವರ ಮುಖದಲ್ಲಿ ಮಂದಹಾಸ ಮೂಡಿದ್ದು, ಕುಟುಂಬಸ್ಥರು ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಎಸ್ಪಿ ಪ್ರಶಂಸೆ:
ಸಕಾಲಕ್ಕೆ ಸ್ಪಂದಿಸಿ ವೃದ್ಧನನ್ನು ಕುಟುಂಬದೊಂದಿಗೆ ಸೇರಿಸಿದ ವಿದ್ಯಾನಗರ ಪಿಐ ಶಿಲ್ಪ ವೈ ಎಸ್, 112 ಸಿಬ್ಬಂದಿಗಳಾದ ಗುರುಮೂರ್ತಿ, ರುದ್ರೇಶ್ ಹಾಗೂ ರಾಣೇಬೆನ್ನೂರು ಸಿಬ್ಬಂದಿ ಪೂಜಾರ್ ಅವರ ಕಾರ್ಯವನ್ನು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಶೋಭಿತ್ ಎಸ್., ಐಪಿಎಸ್ ಅವರು ಶ್ಲಾಘಿಸಿದ್ದಾರೆ.
ಸಾರ್ವಜನಿಕ ಗಮನಕ್ಕೆ: ಯಾವುದೇ ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ ಕೂಡಲೇ 112 ಸಂಖ್ಯೆಗೆ ಕರೆ ಮಾಡಿ. ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿರುತ್ತದೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
madhayakarnatakalive@gmail.com
