ನವದೆಹಲಿ: ಭಾರತದ ಹೆಮ್ಮೆಯ ಡಿಜಿಟಲ್ ಪಾವತಿ ವ್ಯವಸ್ಥೆ ‘UPI’ (Unified Payments Interface) ಈಗ ಕೇವಲ ದೇಶಕ್ಕಷ್ಟೇ ಸೀಮಿತವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ‘ಡಿಜಿಟಲ್ ಇಂಡಿಯಾ’ ಕನಸು ಈಗ ಜಾಗತಿಕ ಮಟ್ಟದಲ್ಲಿ ನನಸಾಗುತ್ತಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ತಂತ್ರಜ್ಞಾನ ಹೊಸ ಇತಿಹಾಸ ಬರೆಯುತ್ತಿದೆ.
ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆ “UPI” ಇದೀಗ ದೇಶದ ಗಡಿಗಳನ್ನು ದಾಟಿ ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ಭಾರತದ ತಾಂತ್ರಿಕ ಸಾಮರ್ಥ್ಯ ಏನೆಂಬುದನ್ನು ವಿಶ್ವಕ್ಕೆ ಸಾಬೀತುಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ‘ಡಿಜಿಟಲ್ ಇಂಡಿಯಾ’ ಅಭಿಯಾನ ಇಂದು ಜಾಗತಿಕ ಮಟ್ಟದಲ್ಲಿ ಹೊಸದೊಂದು ಅಲೆ ಎಬ್ಬಿಸಿದೆ. ನಮ್ಮ ಸ್ವದೇಶಿ ತಂತ್ರಜ್ಞಾನ ನಿರ್ಮಿತ UPI ದೇಶದೊಳಗೆ ಮಾತ್ರವಲ್ಲ, ಅಂತರಾಷ್ಟ್ರೀಯ ಹಣಕಾಸು ಮಾರುಕಟ್ಟೆಯಲ್ಲಿ ಸಹ ಭಾರೀ ಸಂಚಲನ ಮೂಡಿಸುತ್ತಿದೆ.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
1 ಮಿಲಿಯನ್ ಗಡಿ ದಾಟಿದ ವಹಿವಾಟು:
ಇತ್ತೀಚಿನ ಅಂಕಿಅಂಶ ಪ್ರಕಾರ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯುಪಿಐ ವಹಿವಾಟು ಅಭೂತಪೂರ್ವ ಬೆಳವಣಿಗೆ ದಾಖಲಿಸಿವೆ. ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಅಂತರಾಷ್ಟ್ರೀಯ ಯುಪಿಐ ವಹಿವಾಟುಗಳ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗಿದೆ. 2023-24ರಲ್ಲಿ ಕೇವಲ 37,060 ರಷ್ಟಿದ್ದ ವಹಿವಾಟುಗಳ ಸಂಖ್ಯೆ, 2024-25ರ ವೇಳೆಗೆ 7.55 ಲಕ್ಷಕ್ಕೆ ಜಿಗಿದಿತ್ತು. ಆದರೆ, 2025-26ರ ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ಈ ಸಂಖ್ಯೆ ಬರೋಬ್ಬರಿ 14.86 ಲಕ್ಷಕ್ಕೆ ತಲುಪುವ ಮೂಲಕ ಇತಿಹಾಸ ಬರೆದಿದೆ.
ಮೌಲ್ಯದಲ್ಲಿ ₹330.43 ಕೋಟಿ ದಾಖಲೆ:
ವಹಿವಾಟಿನ ಪ್ರಮಾಣದ ಜೊತೆಗೆ ಅದರ ಒಟ್ಟು ಮೌಲ್ಯದಲ್ಲೂ ಭಾರಿ ಹೆಚ್ಚಳ ಕಂಡುಬಂದಿದೆ. 2023-24ರಲ್ಲಿ ಕೇವಲ ₹19.70 ಕೋಟಿಯಷ್ಟಿದ್ದ ವಹಿವಾಟಿನ ಮೊತ್ತ,2024-25ರಲ್ಲಿ 258.53 ಕೋಟಿಗೆ ಏರಿಕೆ ಹಾಗೂ 2025-26ರ ಡಿಸೆಂಬರ್ ಅವಧಿಗೆ ₹330.43 ಕೋಟಿ ದಾಟಿದೆ. ಕೇವಲ ಎರಡೇ ವರ್ಷಗಳಲ್ಲಿ ವಹಿವಾಟಿನ ಮೌಲ್ಯವು ಹದಿನೈದು ಪಟ್ಟು ಹೆಚ್ಚಾಗಿರುವುದು ಭಾರತೀಯ ಡಿಜಿಟಲ್ ಆರ್ಥಿಕತೆಯ ಬಲವನ್ನು ಎತ್ತಿ ತೋರಿಸುತ್ತದೆ.
8 ದೇಶಗಳಲ್ಲಿ UPI:
ಪ್ರಸ್ತುತ ವಿಶ್ವದ ಎಂಟು ಪ್ರಮುಖ ರಾಷ್ಟ್ರಗಳಲ್ಲಿ ಯುಪಿಐ ಸೇವೆಗಳು ಅಧಿಕೃತವಾಗಿ ಲಭ್ಯವಿವೆ. ಭೂತಾನ್, ಫ್ರಾನ್ಸ್, ಮಾರಿಷಸ್, ನೇಪಾಳ, ಖತಾರ್, ಸಿಂಗಾಪುರ, ಶ್ರೀಲಂಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ದೇಶಗಳಲ್ಲಿ ಭಾರತೀಯರು ಈಗ ಸುಲಭವಾಗಿ ಯುಪಿಐ ಮೂಲಕ ಪಾವತಿ ಮಾಡಬಹುದಾಗಿದೆ. ಇದರಿಂದ ವಿದೇಶಿ ಪ್ರವಾಸ ಕೈಗೊಳ್ಳುವ ಭಾರತೀಯರಿಗೆ ಕರೆನ್ಸಿ ಬದಲಾವಣೆಯ ಕಿರಿಕಿರಿ ತಪ್ಪಿದೆ.
ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ (NPCI) ಅಂತರಾಷ್ಟ್ರೀಯ ವಿಭಾಗವಾದ ‘NPCI International’ ಈ ವಿಸ್ತರಣೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದೆ. ಜಾಗತಿಕ ಮಟ್ಟದಲ್ಲಿ ಪಾವತಿ ವ್ಯವಸ್ಥೆಯನ್ನು ಸರಳಗೊಳಿಸುವ ಉದ್ದೇಶದಿಂದ, ಈ ಸಂಸ್ಥೆ ವಿವಿಧ ದೇಶಗಳ ಕೇಂದ್ರ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದೆ.
ಕೇವಲ ಪ್ರವಾಸಿಗರಿಗಷ್ಟೇ ಅಲ್ಲದೆ, ವಿದೇಶಗಳಲ್ಲಿರುವ ಭಾರತೀಯ ವ್ಯಾಪಾರಿಗಳಿಗೂ ಇದು ವರದಾನವಾಗಿದೆ. ಜಾಗತಿಕವಾಗಿ ಈಗಾಗಲೇ ಸುಮಾರು 20 ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳನ್ನು (Merchants) ಈ ಯುಪಿಐ ಜಾಲಕ್ಕೆ ಸೇರ್ಪಡೆಗೊಳಿಸಲಾಗಿದೆ. ಇದರಿಂದಾಗಿ ಸಣ್ಣ ಮೊತ್ತದ ವ್ಯವಹಾರಗಳೂ ಡಿಜಿಟಲ್ ರೂಪದಲ್ಲಿ ಅತ್ಯಂತ ಸುರಕ್ಷಿತವಾಗಿ ನಡೆಯುತ್ತಿವೆ.
ಮುಂದಿನ ದಿನಗಳಲ್ಲಿ ಯುಪಿಐ ಜಾಲವು ಮತ್ತಷ್ಟು ವಿಸ್ತಾರಗೊಳ್ಳುವ ನಿರೀಕ್ಷೆಯಿದೆ. ಪ್ರಮುಖವಾಗಿ ಜಪಾನ್ ಮತ್ತು ಮಲೇಷ್ಯಾದಂತಹ ದಕ್ಷಿಣ ಏಷ್ಯಾದ ದೇಶಗಳಲ್ಲಿ ಯುಪಿಐ ಸೇವೆಯನ್ನು ಆರಂಭಿಸಲು ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಈ ರಾಷ್ಟ್ರಗಳೊಂದಿಗೆ ಒಪ್ಪಂದ ಏರ್ಪಟ್ಟಲ್ಲಿ ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆ ಏಷ್ಯಾ ಖಂಡದ ಬಹುಪಾಲು ಭಾಗವನ್ನು ಆವರಿಸಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಡಿಜಿಟಲ್ ಮೂಲಸೌಕರ್ಯಕ್ಕೆ ನೀಡಿದ ಸೈಬರ್ ಭದ್ರತೆ ಮತ್ತು ತಾಂತ್ರಿಕ ದಕ್ಷತೆಯ, ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ವ್ಯವಹಾರದಿಂದಾಗಿ ಯುಪಿಐ ಈಗ ಜಾಗತಿಕ ಮಟ್ಟದ ಮಾದರಿಯಾಗಿ ಹೊರಹೊಮ್ಮಿದೆ.
ಭಾರತದ ಸಾಫ್ಟ್ ಪವರ್:
ಡಿಜಿಟಲ್ ಆರ್ಥಿಕತೆಯ ದಿಕ್ಕಿನಲ್ಲಿ ಭಾರತ ಕೈಗೊಂಡ ದಿಟ್ಟ ಹೆಜ್ಜೆಯಾದ ಯುಪಿಐ ‘ಡಿಜಿಟಲ್ ಇಂಡಿಯಾ’ ಪರಿಕಲ್ಪನೆಗೆ ಜಾಗತಿಕ ಮಾನ್ಯತೆ ಪಡೆದು ಭಾರತದ ಸಾಫ್ಟ್ ಪವರ್ ಆಗಿ ಬೆಳೆದಿದೆ. ಜಾಗತಿಕ ಹಣಕಾಸು ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ಸುಲಭ ವ್ಯವಹಾರಕ್ಕೆ ಭಾರತವು ದಾರಿದೀಪವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ‘ವಿಶ್ವಗುರು’ ಆಗುವತ್ತ ಹೆಜ್ಜೆ ಹಾಕುತ್ತಿದ್ದು, ತಂತ್ರಜ್ಞಾನದ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿರುವುದು ನವ ಭಾರತದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
madhayakarnatakalive@gmail.com
