ಹಾಸ್ಟೆಲ್ ಸಿಬ್ಬಂದಿ ನೈತಿಕತೆ ಬೆಳೆಸಿಕೊಂಡು ಕರ್ತವ್ಯ ನಿರ್ವಹಿಸಿ: ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಕರೆ

dr-kj-kantaraj-hostel-staff-workshop-chitradurga

—Election Update—

ಚಿತ್ರದುರ್ಗ : ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಸವಾರ್ಂಗೀಣ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಅಡುಗೆಯವರು, ಸಹಾಯಕರು ಮತ್ತು ಕಾವಲುಗಾರರು ಮೊದಲು ತಮ್ಮ ಕರ್ತವ್ಯದಲ್ಲಿ ನೈತಿಕತೆಯನ್ನು ರೂಢಿಸಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಅವರು ಕರೆ ನೀಡಿದರು.

ಚಿತ್ರದುರ್ಗ ನಗರದ ಸರ್ಕಾರಿ ಕಲಾ ಕಾಲೇಜು ಪಕ್ಕದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಪಿಯುಸಿ ಬಾಲಕಿಯರ ‘ಬಿ’ ವಿದ್ಯಾರ್ಥಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಾಸ್ಟೆಲ್ ಅಡುಗೆಯವರಿಗೆ, ಸಹಾಯಕರಿಗೆ ಹಾಗೂ ರಾತ್ರಿ ಕಾವಲುಗಾರರಿಗೆ ಆಯೋಜಿಸಲಾದ ಒಂದು ದಿನದ ಪುನಶ್ಚೇತನ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅಡುಗೆ ಸಿಬ್ಬಂದಿಯ ಪಾತ್ರ ಹಿರಿದಾದುದು. ಅವರಲ್ಲಿ ಆತ್ಮಸ್ಥೈರ್ಯ ತುಂಬಲು, ಆರೋಗ್ಯ ಕಾಪಾಡಲು ಹಾಗೂ ವಿವಿಧ ಕಾನೂನು ಅಡಿಯಲ್ಲಿ ರಕ್ಷಣೆ ಮತ್ತು ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಈ ಕಾರ್ಯಕ್ರಮ ಕೇವಲ ಜಿಲ್ಲೆಯಷ್ಟೇ ಅಲ್ಲದೆ, ರಾಜ್ಯವ್ಯಾಪಿಯಾಗಿ ಇಲಾಖೆಯಿಂದ ನಡೆಯಬೇಕು ಎಂದು ಆಶಿಸಿದರು.

ಸ್ವಂತ ಅನುಭವ ಹಂಚಿಕೆ:

ತಮ್ಮ ವಿದ್ಯಾರ್ಥಿ ಜೀವನದ ದಿನಗಳನ್ನು ಸ್ಮರಿಸಿದ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, “ನಾನು ಕೂಡ ಆರನೇ ತರಗತಿಯಿಂದ ಮಾಸ್ಟರ್ ಡಿಗ್ರಿವರೆಗೆ ಬಿಸಿಎಂ ಹಾಸ್ಟೆಲ್‍ನಲ್ಲೇ ಇದ್ದು ವಿದ್ಯಾಭ್ಯಾಸ ಮುಗಿಸಿದೆ. ಅಂದು ಬೆಳಿಗ್ಗೆ 4 ಗಂಟೆಗೆ ನಮ್ಮನ್ನು ಎಬ್ಬಿಸಿ ಓದಲು ಪ್ರೇರೇಪಿಸುತ್ತಿದ್ದ ಅಡುಗೆಯವರಾದ ನಾರಾಯಣಪ್ಪ ಹಾಗೂ ಗಂಗಾಧರ ಅವರನ್ನು ಇಂದಿಗೂ ನೆನೆಯುತ್ತೇನೆ. ಇಂದು ನಾನು ಈ ಹಂತಕ್ಕೆ ಬರಲು ಅಂದಿನ ಹಾಸ್ಟೆಲ್ ಜೀವನವೇ ಕಾರಣ” ಎಂದು ಭಾವುಕರಾಗಿ ನುಡಿದರು.

ಸ್ಪರ್ಧೆ ತೀವ್ರವಾಗಿದೆ, ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಿ:
ಇತ್ತೀಚಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಎಂಟೆಕ್, ಬಿಇ, ಎಂಎಸ್ಸಿ ಹಾಗೂ ಪಿಎಚ್‍ಡಿ ಮಾಡಿದ ಉನ್ನತ ಶಿಕ್ಷಣವಂತರು ಕೂಡ ಇತ್ತೀಚೆಗೆ ಅಡುಗೆ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇಂತಹ ತೀವ್ರ ಸ್ಪರ್ಧೆಯ ಕಾಲದಲ್ಲಿ ಹೊರಗುತ್ತಿಗೆಯಲ್ಲಾದರೂ ನಿಮಗೆ ಸಿಕ್ಕಿರುವ ಈ ಉದ್ಯೋಗದ ಅವಕಾಶವನ್ನು ಗೌರವಿಸಿ, ಸದುಪಯೋಗಪಡಿಸಿಕೊಳ್ಳಿ ಎಂದು ಸಿಬ್ಬಂದಿಗೆ ಕಿವಿಮಾತು ಹೇಳಿದರು.

ವಿಶೇಷವಾಗಿ ಪ್ರೀ-ಮೆಟ್ರಿಕ್ ಹಾಸ್ಟೆಲ್‍ಗಳಲ್ಲಿರುವ ಸಣ್ಣ ವಯಸ್ಸಿನ ವಿದ್ಯಾರ್ಥಿಗಳು ನಿಲಯ ಪಾಲಕರನ್ನು ಹಾಗೂ ಅಡುಗೆ ಸಿಬ್ಬಂದಿಯನ್ನು ನೋಡಿ ತಮ್ಮ ಜೀವನದ ಶಿಸ್ತನ್ನು ಕಲಿಯುತ್ತಾರೆ. ಆದ್ದರಿಂದ ಸಿಬ್ಬಂದಿಗಳು ಸಮಯ ಪರಿಪಾಲನೆ ಹಾಗೂ ಉತ್ತಮ ಆರೋಗ್ಯ ಸೂತ್ರಗಳನ್ನು ಪಾಲಿಸುವ ಮೂಲಕ ಮಕ್ಕಳಿಗೆ ಮಾದರಿಯಾಗಬೇಕು ಎಂದು ಅವರು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಓ.ಪರಮೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, 2026-27ನೇ ಸಾಲಿನ ಶೈಕ್ಷಣಿಕ ವರ್ಷ ಈಗಾಗಲೇ ಆರಂಭವಾಗುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ನಿಲಯಗಳಲ್ಲಿ ಸ್ವಚ್ಛತಾ ಕಾರ್ಯಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳನ್ನು ವಿನೂತನವಾಗಿ ಆಹ್ವಾನಿಸಲು ನಿಲಯ ಪಾಲಕರ ಸಭೆಯನ್ನು ನಡೆಸಿ “ಪ್ರಾರಂಭೋತ್ಸವ” ಮಾಡಲು ನಿರ್ಧರಿಸಲಾಗಿದೆ. ಎರಡು ತಿಂಗಳ ಬೇಸಿಗೆ ರಜೆಯ ನಂತರ ವಸತಿ ನಿಲಯಗಳಿಗೆ ಮರಳುವ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಶುಭ ಕೋರಲು, ನಿಲಯಗಳ ಮುಂದೆ ಫ್ಲೆಕ್ಸ್ ಅಳವಡಿಸುವುದು ಹಾಗೂ ವಿದ್ಯಾರ್ಥಿಗಳಿಗೆ ಚಾಕೊಲೇಟ್ ಅಥವಾ ಸಿಹಿ ನೀಡಿ ಬರಮಾಡಿಕೊಳ್ಳಲು ಸೂಚಿಸಲಾಗಿದೆ.
ಇಲಾಖೆಯ ವಸತಿ ನಿಲಯಗಳು ಸುಗಮವಾಗಿ ನಡೆಯಲು ಅಡುಗೆಯವರು ಮತ್ತು ಅಡುಗೆ ಸಹಾಯಕರು ಸಿಬ್ಬಂದಿ ಅತಿ ಮುಖ್ಯ. ಜಿಲ್ಲೆಯ ವಸತಿ ನಿಲಯಗಳಲ್ಲಿ ಬೆಳಗಾವಿ, ಗುಲ್ಬರ್ಗಾ, ರಾಯಚೂರು, ಕಿತ್ತೂರು, ಬಳ್ಳಾರಿ, ಹೊಸಪೇಟೆ, ಗಂಗಾವತಿ, ಹಾಗೂ ಕೂಡ್ಲಿಗಿಯಿಂದ ಬಂದಂತಹ ವಿದ್ಯಾರ್ಥಿಗಳು ವಿವಿಧ ವೃತ್ತಿಪರ ಕೋರ್ಸ್‍ಗಳ ವ್ಯಾಸಂಗಕ್ಕಾಗಿ ದಾಖಲಾಗಿದ್ದಾರೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ಮತ್ತು ಆರೈಕೆ ನೀಡುದು ನಮ್ಮೆಲ್ಲರ ಜವಬ್ದಾರಿ ಎಂದರು.

ಹೊರಸಂಪನ್ಮೂಲ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕಳೆದ ಒಂದು ವರ್ಷದಿಂದ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ನಿಯಮಿತವಾಗಿ ಸಂಬಳವನ್ನು ಖಾತೆಗೆ ಜಮಾ ಮಾಡಲಾಗುತ್ತಿದೆ. ಆರೋಗ್ಯ ಸುರಕ್ಷತೆಯ “ಆಯುಷ್ಮಾನ್ ಕಾರ್ಡ್” ಮಾಡಿಸಿಕೊಡಲಾಗಿದೆ. ನಿಲಯದ ಸಿಬ್ಬಂದಿಗಳು ಬೆಳಗ್ಗೆ 6 ಗಂಟೆಗೆ ಕಡ್ಡಾಯವಾಗಿ ಹಾಸ್ಟೆಲ್‍ಗೆ ಹಾಜರಾಗಬೇಕು. ಬಯೋಮೆಟ್ರಿಕ್ ವ್ಯವಸ್ಥೆ ಇರುವುದರಿಂದ ಸಮಯ ಪಾಲನೆ ಮುಖ್ಯವಾಗಿದೆ. ಪ್ರತಿ ತಿಂಗಳು ಒಂದು ದಿನದ ರಜೆ ನೀಡಲು ವಾರ್ಡನ್‍ಗಳಿಗೆ ಸೂಚಿಸಲಾಗಿದೆ. ಇದನ್ನು ನೆಪ ಮಾಡಿಕೊಂಡು ರಜೆ ಕೇಳುವ ಮೂಲಕ ನಿಯಮವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದರು.

ಕಾರ್ಯಾಗಾರದಲ್ಲಿ ಅಗ್ನಿಶಾಮಕದಳ ಠಾಣಾಧಿಕಾರಿ ನರೇಂದ್ರ ಅಡುಗೆ ಮನೆಯ ಅಗ್ನಿ ಸುರಕ್ಷತಾ ಸಾಧನಗಳ ಬಳಕೆ ಹಾಗೂ ಗ್ಯಾಸ್ ಸಿಲಿಂಡರ್ ಸೋರಿಕೆ ಕುರಿತು ಸಿಬ್ಬಂದಿಗೆ ಮಾಹಿತಿ ನೀಡಿದರು.

ಆರೋಗ್ಯಾಧಿಕಾರಿ ಜಾನಕಿ, ಕಾರ್ಮಿಕ ಅಧಿಕಾರಿ ಭೀಮೇಶ್, ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಜಿಲ್ಲಾಧ್ಯಕ್ಷ ಯಶವಂತ್ ಕುಮಾರ್ ಓಂಸಾಯಿ ಸೆಕ್ಯೂರಿಟಿ ಸರ್ವಿಸಸ್ ಪ್ರದೀಪ್ ಸೇರಿದಂತೆ ನಿಯಲ ಪಾಕರು, ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp