ಖಾಸಗಿ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆ ಉಳಿಸಿ: ಪೋಷಕರಿಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕರೆ

chitradurga-government-school-reopening-adc-bt-kumaraswamy

—Election Update—

ಚಿತ್ರದುರ್ಗ: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಅಳಿವಿನ ಅಂಚಿಗೆ ತಲುಪುತ್ತಿರುವುದು ಕಳವಳಕಾರಿ ಸಂಗತಿ. ಇವುಗಳ ಉಳಿವು ಕೇವಲ ಸರ್ಕಾರದ ಕೈಯಿಂದ ಮಾತ್ರ ಸಾಧ್ಯವಿಲ್ಲ. ಸರ್ಕಾರದ ಜೊತೆಗೆ ಪೋಷಕರು ಮತ್ತು ಶಿಕ್ಷಕರು ಕೈಜೋಡಿಸಿದಾಗ ಮಾತ್ರ ಸರ್ಕಾರಿ ಶಾಲೆಗಳನ್ನು ಉಳಿಸಲು ಮತ್ತು ಬೆಳೆಸಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.

ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆಯಿಲ್ಲ, ಪ್ರತಿಭಾವಂತ ಶಿಕ್ಷಕರಿಗೂ ಕೊರತೆಯಿಲ್ಲ. ಆದರೂ ಸರ್ಕಾರಿ ಶಾಲೆಗಳ ಬಗ್ಗೆ ಫೋಷಕರಲ್ಲಿ ಇಂದಿಗೂ ಪೂರ್ವಾಗ್ರಹ ಪೀಡಿತ ಮನೋಭಾವವಿದೆ ಎಂದು ಬೇಸರ ವ್ಯಕ್ತಪಡಿಸಿದರು.

‘ನಾನು ಕೂಡ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ವೃತ್ತಿ ಜೀವನ ಆರಂಭಿಸಿದವನು. ಇಂದು ನಾನು ಕೆ.ಎ.ಎಸ್ ಮುಗಿಸಿ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರೆ, ಅದಕ್ಕೆ ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ನನ್ನ ಡಯಟ್‍ನ ಗುರುಗಳು ಕಲಿಸಿದ ಶಿಕ್ಷಣ ಹಾಗೂ ಮೌಲ್ಯಗಳೇ ಕಾರಣ. ಸರ್ಕಾರಿ ವ್ಯವಸ್ಥೆಯಲ್ಲಿ ನೌಕರಿ ಪಡೆಯುವುದು ಕಷ್ಟ. ಆದರೆ ಪಡೆದ ಮೇಲೆ ಸುಲಭವಾಗಿ ಕೆಲಸದಿಂದ ತೆಗೆಯಲು ಬರುವುದಿಲ್ಲ ಎಂಬ ಕಾರಣಕ್ಕೆ ಉದಾಸೀನತೆ ತೋರಬಾರದು. ಉದ್ಯೋಗಕ್ಕೆ ಬಂದ ಮೇಲೆ ಹೊಸ ಕೌಶಲಗಳನ್ನು ಶಿಕ್ಷಕರು ನಿರಂತರವಾಗಿ ಕಲಿಯಬೇಕು. ತಂತ್ರಜ್ಞಾನದ ಇಂದಿನ ಆಧುನಿಕ ಯುಗಕ್ಕೆ ತಕ್ಕಂತೆ ಮಕ್ಕಳನ್ನು ಸ್ಪರ್ಧಾತ್ಮಕ ಲೋಕಕ್ಕೆ ಸಿದ್ಧಪಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಪ್ರತಿಯೊಂದು ಮಗುವಿನಲ್ಲೂ ತನ್ನದೇ ಆದ ವಿಶಿಷ್ಟ ಕೌಶಲ ಇರುತ್ತದೆ. ವಿಶೇಷ ಚೇತನ ಮಕ್ಕಳಲ್ಲೂ ಯಾವುದಾದರೂ ಒಂದು ಅಂಗದ ಕೊರತೆ ಇದ್ದರೆ, ಅವರಲ್ಲಿ ಮತ್ತೊಂದು ಕೌಶಲ ತೀಕ್ಷ್ಣವಾಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಶಿಕ್ಷಕರು ಮಾಡಬೇಕು ಎಂದು ಕರೆ ನೀಡಿದರು.

ಓದಿದ ತಕ್ಷಣ ಸರ್ಕಾರಿ ನೌಕರಿಯೇ ಸಿಗಬೇಕು ಎಂಬ ಮನಸ್ಥಿತಿಯಿಂದ ಪೋಷಕರು ಹೊರಬರಬೇಕು. ಸರ್ಕಾರಿ ನೌಕರಿ ಇಲ್ಲದವರೂ ಉತ್ತಮ ಕೃಷಿಕರಾಗಿ, ಉದ್ಯಮಿಗಳಾಗಿ ಸಾಧನೆ ಮಾಡಿದ್ದಾರೆ. ಅಂತಹ ಜೀವನ ಕೌಶಲಗಳನ್ನು ಪಠ್ಯದ ಜೊತೆಗೆ ಶಾಲೆಗಳಲ್ಲಿ ಕಲಿಸಿಕೊಡಬೇಕು. ಆಗ ಮಾತ್ರ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಎಂದು ಬಿ.ಟಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಪೋಷಕರು ತಮ್ಮ ಮಕ್ಕಳಿಗಾಗಿ ದಿನದಲ್ಲಿ ಕೇವಲ ಒಂದು ಗಂಟೆಯಾದರೂ ಸಮಯ ಮೀಸಲಿಡಬೇಕು. ಮಗು ಶಾಲೆಗೆ ಹೋಗಿ ಬಂದ ಮೇಲೆ ಏನು ಮಾಡಿತು, ಏನು ಓದಿತು ಎಂಬುದನ್ನು ಗಮನಿಸಬೇಕು. ಇಂದು ಶಿಕ್ಷಣವೇ ಅತ್ಯಂತ ಮುಖ್ಯವಾದ ಅಸ್ತ್ರವಾಗಿದೆ ಎಂದು ತಿಳಿಸಿದರು.

ಡಯಟ್ ಉಪ ಪ್ರಾಂಶುಪಾಲ ನಾಗಭೂಷಣ್ ಮಾತನಾಡಿ, ಈ ಬಾರಿಯ ಶಾಲಾ ಪ್ರಾರಂಭೋತ್ಸವದಲ್ಲಿ ಸರ್ಕಾರ ಮತ್ತು ಇಲಾಖೆಯ ಮುಖ್ಯ ಆಶಯವೆಂದರೆ ಸರ್ಕಾರಿ ಶಾಲೆಗಳ ಸಬಲೀಕರಣ ಹಾಗೂ ಮಕ್ಕಳ ದಾಖಲಾತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಆರಂಭಿಸುವುದಾಗಿದೆ ಎಂದು ತಿಳಿಸಿದ ಅವರು, ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇಂದಿನಿಂದಲೇ ರಾಜ್ಯದಲ್ಲಿ 1,000 ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದರು.

ಗುಣಮಟ್ಟದ ಶಿಕ್ಷಣ ನೀಡುವ ದೃಷ್ಠಿಕೋನದಿಂದ ಜಿಲ್ಲೆಯ ನಾಲ್ಕು ತಾಲ್ಲೂಕುಗಳಾದ ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ ಮತ್ತು ಮೊಳಕಾಲ್ಮೂರು ತಾಲ್ಲೂಕಿನ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 5ನೇ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳನ್ನು ಏಕಕಾಲದಲ್ಲಿ ಒಳಗೊಂಡ ದ್ವಿಭಾಷಾ ಮಾಧ್ಯಮವನ್ನು ಇಂದಿನಿಂದ ಜಾರಿಗೆ ತರಲಾಗುತ್ತಿದೆ. ಉಳಿದಂತೆ ಚಳ್ಳಕೆರೆ ಮತ್ತು ಹಿರಿಯೂರು ತಾಲ್ಲೂಕುಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ, ಪಿಎಂಶ್ರಿ ಶಾಲೆ, ಆಯ್ದ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಪ್ರಾರಂಭವಾಗಲಿದೆ. ಈ ನೂತನ ದ್ವಿಭಾಷಾ ಮತ್ತು ಆಂಗ್ಲ ಮಾಧ್ಯಮ ಬೋಧನೆಗೆ ಪೂರಕವಾಗಿ ಇಲಾಖೆಯ ವತಿಯಿಂದ ಈಗಾಗಲೇ ಜಿಲ್ಲೆಯ ಎಲ್ಲಾ ಶಿಕ್ಷಕರಿಗೆ ಡಯಟ್ ವತಿಯಿಂದ ಅಗತ್ಯ ತರಬೇತಿಯನ್ನೂ ನೀಡಲಾಗಿದೆ.

ಇದರೊಂದಿಗೆ ಹಳೆಯ ತರಗತಿಯಿಂದ ಹೊಸ ತರಗತಿಗೆ ಬರುವ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಸಜ್ಜುಗೊಳಿಸಲು 15 ದಿನಗಳ ಮತ್ತು 30 ದಿನಗಳ ಎರಡು ಹಂತದ ವಿಶೇಷ ಸೇತುಬಂಧ ಕಾರ್ಯಕ್ರಮವನ್ನು ಇಂದಿನಿಂದಲೇ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ಯಾವುದೇ ಶುಲ್ಕವಿಲ್ಲದೆ ಉಚಿತ ಸಮವಸ್ತ್ರ ಪಠ್ಯಪುಸ್ತಕ, ಶೂ, ಸಾಕ್ಸ್, ವಿದ್ಯಾರ್ಥಿವೇತನ, ಕಂಪ್ಯೂಟರ್ ಶಿಕ್ಷಣ ಹಾಗೂ ಪ್ರಯೋಗಾಲಯ ಸೇರಿದಂತೆ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.
ಶಾಲಾ ಪ್ರಾರಂಭೋತ್ಸವ ಕಾರ್ಯಕ್ರದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪಠ್ಯ ಪುಸ್ತಕ ವಿತರಿಸಲಾಯಿತು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಡಯಟ್ ಪ್ರಾಂಶುಪಾಲ ನಾಸಿರುದ್ದೀನ್, ಡಿ.ಎಸ್.ಹಳ್ಳಿ ಎಸ್‍ಡಿಎಂಸಿ ಅಧ್ಯಕ್ಷ ವೆಂಕಟೇಶ್, ಜಲತಜ್ಞ ದೇವರಾಜ ರೆಡ್ಡಿ, ಹಳೆ ವಿದ್ಯಾರ್ಥಿಗಳ ಸಂಘದ ಶಿವಮೂರ್ತಿ, ರೈತ ಮುಖಂಡರಾದ ಮಲ್ಲಿಕಾರ್ಜುನ್, ಜ್ಞಾನೇಶ್, ಬಿಆರ್‍ಸಿ ಸಂಪತ್ ಕುಮಾರ್, ವಿಷಯ ಪರಿವೀಕ್ಷಕರಾದ ನಿತ್ಯಾನಂದ, ಪ್ರಶಾಂತ್, ರಂಗನಾಯ್ಕ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಿದಾನಂದಸ್ವಾಮಿ, ಶಿಕ್ಷಕರ ಸಂಘದ ಪ್ರತಿನಿಧಿಗಳಾದ ಲೋಲಾಕ್ಷಮ್ಮ, ಕೃಷ್ಣಪ್ಪ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp