‘ಜಮೀರ್ ಸಾಹೇಬರ ಜೊತೆಗಿನ ಆ ವೈರಲ್ ಆಡಿಯೋ ನಕಲಿ’: ಎಫ್‌ಐಆರ್ ದಾಖಲಿಸಿ ಸತ್ಯ ಬಿಚ್ಚಿಟ್ಟ ಕಾಂಗ್ರೆಸ್ ನಾಯಕ ಮೊಹಮ್ಮದ್ ಸಿರಾಜ್!

mohammed-siraj-zameer-ahmed-khan-fake-audio-clarification

—Election Update—

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಸಿರಾಜ್ ಅವರದ್ದು ಎನ್ನಲಾದ ವೈರಲ್ ಆಡಿಯೋಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಆಡಿಯೋ ಸಂಪೂರ್ಣ ನಕಲಿ ಹಾಗೂ ಎಐ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆ ಎಂದು ಸ್ವತಃ ಮೊಹಮ್ಮದ್ ಸಿರಾಜ್ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಹಾಗೂ ಜಮೀರ್ ಅಹ್ಮದ್ ಖಾನ್ ಅವರ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರುವ ದುರುದ್ದೇಶದಿಂದ ಈ ಸುಳ್ಳು ಸುದ್ದಿಯನ್ನು ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಕಲಿ ಆಡಿಯೋ ಸೃಷ್ಟಿಕರ್ತರ ವಿರುದ್ಧ ಎಫ್‌ಐಆರ್ ದಾಖಲು

“ಬೆಳಗ್ಗೆಯಿಂದಲೂ ಮಾಧ್ಯಮಗಳಲ್ಲಿ ಮತ್ತು ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಹಾಗೂ ಫೋಟೋಗಳು ಸುಳ್ಳು. ನಮ್ಮ ವಿರುದ್ಧ ಷಡ್ಯಂತ್ರ ರೂಪಿಸಿ ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಎಸ್ಪಿ ಹಾಗೂ ಡಿವೈಎಸ್ಪಿ ಅವರನ್ನು ಭೇಟಿಯಾಗಿ ಎಫ್‌ಐಆರ್ ದಾಖಲಿಸಿದ್ದೇನೆ” ಎಂದು ಸಿರಾಜ್ ತಿಳಿಸಿದರು.

“ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಬಗ್ಗೆ ನಮಗೆ ಯಾವುದೇ ನೋಟಿಸ್ ಬಂದಿಲ್ಲ, ಆ ಬಗ್ಗೆ ಮಾಹಿತಿಯೂ ಇಲ್ಲ. ಎಲ್ಲವೂ ಸೃಷ್ಟಿಯಾಗಿರುವ ಕಂತೆಕಂತೆ ಸುಳ್ಳುಗಳು. ಈ ಷಡ್ಯಂತ್ರದ ಹಿಂದಿರುವ ಕಾಣದ ಕೈಗಳು ಯಾರು ಎಂಬುದು ನಿಷ್ಪಕ್ಷಪಾತ ತನಿಖೆಯಿಂದ ಬಯಲಾಗಬೇಕು. ತಪ್ಪು ಮಾಡಿದವರಿಗೆ ತಲೆದಂಡ ಆಗಲಿ, ನಾವ್ಯಾಕೆ ಹೆದರಬೇಕು?” ಎಂದು ಅವರು ನೇರವಾಗಿ ಸವಾಲು ಹಾಕಿದರು.

ಒಂದು ಕಾಳಷ್ಟು ಭ್ರಷ್ಟಾಚಾರ ಸಾಬೀತುಪಡಿಸಿದರೂ ರಾಜಕೀಯಕ್ಕೆ ಗುಡ್ ಬೈ!

ತಮ್ಮ ಮೇಲಿನ ಆರೋಪಗಳ ಬಗ್ಗೆ ತೀವ್ರ ಭಾವುಕರಾಗಿ ಹಾಗೂ ಅಷ್ಟೇ ಖಾರವಾಗಿ ಪ್ರತಿಕ್ರಿಯಿಸಿದ ಮೊಹಮ್ಮದ್ ಸಿರಾಜ್, “ನಾನು ಸತತ ಮೂರು ಅವಧಿಗೆ ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ನನ್ನ ಈ ಸುದೀರ್ಘ ರಾಜಕೀಯ ಜೀವನದಲ್ಲಿ ಒಂದು ರಾಗಿ ಕಾಳಿನಷ್ಟಾದರೂ ಭ್ರಷ್ಟಾಚಾರ ಮಾಡಿದ್ದೇನೆ ಎಂದು ಯಾರಾದರೂ ಸಾಕ್ಷಿ ಸಮೇತ ಸಾಬೀತುಪಡಿಸಿದರೆ, ಅಂದೇ ನಾನು ಯಾವುದೇ ಸಾರ್ವಜನಿಕ ವೇದಿಕೆಗೆ ಬರುವುದಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ನಾನು ಯಾರನ್ನೂ ಸುಲಭವಾಗಿ ಬಿಡುವುದಿಲ್ಲ. ಇದು ಎಲ್ಲಿಯವರೆಗೆ ಹೋಗುತ್ತದೆಯೋ ಅಲ್ಲಿಯವರೆಗೆ ಕಾನೂನು ಹೋರಾಟ ನಡೆಸಲು ನಾನು ಸಿದ್ಧನಿದ್ದೇನೆ” ಎಂದು ಗುಡುಗಿದರು.

ಜಮೀರ್ ಸಾಹೇಬರ ಬೆನ್ನಿಗೆ ನಿಂತ ಇಡೀ ಸಮಾಜ

ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ‘ನಮ್ಮ ಸಮುದಾಯದ ಮಾಸ್ ಲೀಡರ್’ ಎಂದು ಬಣ್ಣಿಸಿದ ಸಿರಾಜ್, “ಜಮೀರ್ ಸಾಹೇಬರ ಜೊತೆಗೆ ಇಡೀ ಸಮಾಜ ನಿಂತಿದೆ. ನಿನ್ನೆಯೂ ಇತ್ತು, ಇಂದೂ ಇದೆ, ಮುಂದೆಯೂ ಇರುತ್ತದೆ. ಇಂತಹ ಸುಳ್ಳು ಆಡಿಯೋಗಳ ಮೂಲಕ ನಮ್ಮ ಒಗ್ಗಟ್ಟನ್ನು ಮುರಿಯಲು ಸಾಧ್ಯವಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ, ದಾವಣಗೆರೆ ಉಪಚುನಾವಣೆ ಸಂದರ್ಭದಲ್ಲಿ ಎಸ್‌ಡಿಪಿಐ (SDPI) ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ ಎಂಬ ಆರೋಪ ಹೊತ್ತಿದ್ದ ಆಡಿಯೋ ಪ್ರಕರಣ ಇದೀಗ ಸೈಬರ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸ್ ತನಿಖೆಯ ಬಳಿಕವಷ್ಟೇ ಅಸಲಿ ಸತ್ಯ ಹೊರಬರಬೇಕಿದೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp