ಹಿರಿಯೂರು: ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಬೇಕಾದ ಯೂರಿಯಾ ರಸಗೊಬ್ಬರವನ್ನು ಕೈಗಾರಿಕೆ ಅಥವಾ ಇತರ ಕೃಷಿಯೇತರ ಚಟುವಟಿಕೆಗಳಿಗೆ ಮಾರಾಟ ಮಾಡುವುದು ಕಂಡುಬಂದರೆ ಅಂತಹ ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಚಳ್ಳಕೆರೆ ಉಪವಿಭಾಗದ ಉಪ ಕೃಷಿ ನಿರ್ದೇಶಕ ಡಾ. ಡಿ. ಉಮೇಶ್ ಎಚ್ಚರಿಸಿದ್ದಾರೆ.
ಶುಕ್ರವಾರ ಹಿರಿಯೂರಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ರಸಗೊಬ್ಬರ ಮಾರಾಟಗಾರರ ಜಾಗೃತಿ ತರಬೇತಿ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪಾರದರ್ಶಕತೆಗೆ ಕಟ್ಟುನಿಟ್ಟಿನ ಸೂಚನೆ
ರಸಗೊಬ್ಬರ ವಿತರಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು ಎಂದು ಪ್ರತಿಪಾದಿಸಿದ ಡಾ. ಉಮೇಶ್, “ಪ್ರತಿ ಮಾರಾಟಗಾರರು ಕಡ್ಡಾಯವಾಗಿ ಕೆ-ಕಿಸಾನ್ (K-Kisan) ಆನ್‌ಲೈನ್ ತಂತ್ರಾಂಶದ ಮೂಲಕವೇ ಗೊಬ್ಬರ ವಿತರಿಸಬೇಕು. ಜಮೀನು ಇರುವ ರೈತರ ಎಫ್.ಐ.ಡಿ (FID) ಅಥವಾ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಮಾತ್ರ ಯೂರಿಯಾ ನೀಡಬೇಕು. ಯಾವುದೇ ಕಾರಣಕ್ಕೂ ಪಟ್ಟಾ ದಾಖಲೆ ಇಲ್ಲದವರಿಗೆ ಅಥವಾ ಉದ್ದಿಮೆದಾರರಿಗೆ ರಸಗೊಬ್ಬರ ನೀಡಬಾರದು” ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
ಕೃತಕ ಅಭಾವ ಸೃಷ್ಟಿಸಿದರೆ ಕ್ರಮ
ಹಿರಿಯೂರು ಸಹಾಯಕ ಕೃಷಿ ನಿರ್ದೇಶಕ ಡಾ. ಜೆ. ಅಶೋಕ ಮಾತನಾಡಿ, “ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳು ಅಗತ್ಯ ವಸ್ತುಗಳ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ. ಲಾಭದ ಉದ್ದೇಶದಿಂದ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸಿದರೆ ಅಥವಾ ನಿಗದಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಪರವಾನಗಿ ರದ್ದುಪಡಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು. ಮಾರಾಟಗಾರರು ಕಾಲಕಾಲಕ್ಕೆ ತಮ್ಮ ಪರವಾನಗಿಯನ್ನು ನವೀಕರಿಸಿಕೊಳ್ಳಬೇಕು” ಎಂದು ತಿಳಿಸಿದರು.
ಸಕಾಲದಲ್ಲಿ ಗೊಬ್ಬರ ಪೂರೈಕೆಗೆ ಸಿದ್ಧ
ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಹರ್ಷ ಮಾತನಾಡಿ, ತಾಲ್ಲೂಕಿನಲ್ಲಿ ಪ್ರಸ್ತುತ ರಸಗೊಬ್ಬರದ ದಾಸ್ತಾನು ಕೊರತೆ ಇಲ್ಲ ಮತ್ತು ರೈತರಿಗೆ ಸಕಾಲದಲ್ಲಿ ಗೊಬ್ಬರ ಒದಗಿಸಲು ಮಾರಾಟಗಾರರು ಸಿದ್ಧರಿದ್ದಾರೆ ಎಂದು ಭರವಸೆ ನೀಡಿದರು. ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಕಂದಿಕೆರೆ ಜಗದೀಶ್ ಮಾತನಾಡಿ, ಜಿಲ್ಲೆಗೆ ನೇರವಾಗಿ ಕಂಪನಿಗಳಿಂದ ಗೊಬ್ಬರ ಪೂರೈಕೆಯಾದರೆ ಸಾಗಾಣಿಕೆ ವೆಚ್ಚ ಕಡಿಮೆಯಾಗಿ ರೈತರಿಗೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನಿಕಾಂತ್, ಕೃಷಿ ಅಧಿಕಾರಿಗಳಾದ ಎಂ.ಎಸ್. ಕಿರಣ್ ಕುಮಾರ್, ಮದನ್ ಕುಮಾರ್, ಪಾರ್ವತಮ್ಮ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಮಾರಾಟಗಾರರು ಉಪಸ್ಥಿತರಿದ್ದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
