ಗರ್ಭ ನಿರೋಧಕ ಇಂಪ್ಲಾಂಟ್ ಒಂದು ಆಧುನಿಕ ಸುರಕ್ಷಿತ ಮತ್ತು ಸುಲಭ ವಿಧಾನ -ಡಾ.ಚಂದ್ರಿಕಾ

contraceptive-implant-awareness-program-chitradurga

—Election Update—

ಚಿತ್ರದುರ್ಗ: ಗರ್ಭನಿರೋಧಕ ಇಂಪ್ಲಾಂಟ್ ಒಂದು ಆಧುನಿಕ ಸುರಕ್ಷಿತ ಮತ್ತು ಸುಲಭ ವಿಧಾನ ಎಂದು ಬೆಂಗಳೂರಿನ ವಿಕಾಸಸೌಧದ ಕುಟುಂಬ ಕಲ್ಯಾಣ ವಿಭಾಗದ ಉಪ ನಿರ್ದೇಶಕರಾದ ಡಾ. ಚಂದ್ರಿಕಾ ತಿಳಿಸಿದರು.

ನಗರದ ಜಿಲ್ಲಾ ಆಸ್ಪತ್ರೆ ಆವರಣದ ಬಿ.ಸಿ. ರಾಯ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರಿಗೆ ಆಯೋಜಿಸಿದ್ದ ನೂತನ ‘ಗರ್ಭನಿರೋಧಕ ಇಂಪ್ಲಾಂಟ್’ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಕರ್ನಾಟಕ ಸೇರಿದಂತೆ 2023 ರಿಂದಲೇ ಈ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಮೊದಲ ಹಂತದಲ್ಲಿ ರಾಜ್ಯದ 13 ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದ್ದು, ಇದೀಗ 14ನೇ ಜಿಲ್ಲೆಯಾಗಿ ಚಿತ್ರದುರ್ಗದಲ್ಲಿ ಈ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ. ಕರ್ನಾಟಕದಲ್ಲಿ ಇದುವರೆಗೆ ಸುಮಾರು 10,000 ಫಲಾನುಭವಿಗಳು ಈ ಇಂಪ್ಲಾಂಟ್ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಇಂಪ್ಲಾಂಟ್ ಒಂದು ಬೆಂಕಿ ಕಡ್ಡಿಯ ಗಾತ್ರದ ಅತ್ಯಂತ ಸಣ್ಣ, ತೆಳುವಾದ ಮತ್ತು ಮೆದುವಾದ ರಾಡ್ ಆಗಿದ್ದು, ಇದನ್ನು ಮಹಿಳೆಯ ಮೇಲ್ದೋಳಿನ ಚರ್ಮದ ಕೆಳಗೆ ನುರಿತ ವೈದ್ಯರಿಂದ ಅಳವಡಿಸಲಾಗುತ್ತದೆ. ಒಮ್ಮೆ ಅಳವಡಿಸಿಕೊಂಡರೆ ಮೂರು ವರ್ಷಗಳವರೆಗೆ ಅನಗತ್ಯ ಗರ್ಭಧಾರಣೆಯಿಂದ ಇದು ರಕ್ಷಣೆ ನೀಡುತ್ತದೆ. ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಅಂತರ ಕಾಪಾಡಲು ಇದು ಅತ್ಯಂತ ಪರಿಣಾಮಕಾರಿ ಹಾರ್ಮೋನಿನ ದೀರ್ಘಕಾಲೀನ ವಿಧಾನವಾಗಿದ್ದು, ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗುವುದನ್ನು ನಿಗ್ರಹಿಸುತ್ತದೆ ಎಂದರು.

ಮುಟ್ಟು ಪ್ರಾರಂಭವಾದ 7 ದಿನಗಳ ಒಳಗಾಗಿ, ಪ್ರಸವವಾದ ತಕ್ಷಣ ಅಥವಾ ಗರ್ಭಪಾತದ ನಂತರದ ಅವಧಿಯಲ್ಲಿ ಇದನ್ನು ಅಳವಡಿಸಬಹುದು. ಇಲ್ಲವೇ ಮಹಿಳೆ ಗರ್ಭಿಣಿಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಯಾವುದೇ ಸಮಯದಲ್ಲಿ ಬೇಕಾದರೂ ಅಳವಡಿಸಿಕೊಳ್ಳಬಹುದು. ಸಂತಾನೋತ್ಪತ್ತಿ ವಯಸ್ಸಿನ ಎಲ್ಲಾ ಮಹಿಳೆಯರಿಗೂ ಇದು ಸೂಕ್ತವಾಗಿದ್ದು, ಹಾಲುಣಿಸುವ ತಾಯಂದಿರಿಗೂ ಸಂಪೂರ್ಣ ಸುರಕ್ಷಿತವಾಗಿದೆ. ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವವನ್ನು ಕಡಿಮೆ ಮಾಡುವ ಮೂಲಕ ರಕ್ತಹೀನತೆಯನ್ನು ತಡೆಯುತ್ತದೆ ಹಾಗೂ ಇಂಪ್ಲಾಂಟ್ ಅನ್ನು ದೇಹದಿಂದ ಹೊರತೆಗೆದ ತಕ್ಷಣವೇ ಮಹಿಳೆಯು ಎಂದಿನಂತೆ ಶೀಘ್ರವಾಗಿ ಗರ್ಭ ಧರಿಸಬಹುದು. ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ನುರಿತ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರು ಈ ಇಂಪ್ಲಾಂಟ್ ಅನ್ನು ಅರ್ಹ ಫಲಾನುಭವಿಗಳಿಗೆ ಸಂಪೂರ್ಣ ಉಚಿತವಾಗಿ ಅಳವಡಿಸಿಕೊಡಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎನ್. ಕಾಶಿ ಮಾತನಾಡಿ, ಈ ಹಿಂದೆ ಗರ್ಭಧಾರಣೆ ತಡೆಯಲು ಮಹಿಳೆಯರು ಪ್ರತಿದಿನ ಹಾರ್ಮೋನ್ ಮಾತ್ರೆಗಳನ್ನು ತೆಗೆದುಕೊಳ್ಳಬೇಕಿತ್ತು. ಆದರೆ ಒತ್ತಡದ ಜೀವನದಲ್ಲಿ ಮಾತ್ರೆ ತೆಗೆದುಕೊಳ್ಳುವುದನ್ನು ಮರೆತು ಗರ್ಭ ಧರಿಸುವ ಸಾಧ್ಯತೆಗಳಿರುತ್ತಿದ್ದವು. ಆದರೆ ಈ ಇಂಪ್ಲಾಂಟ್ ವಿಧಾನದಲ್ಲಿ ಅಂತಹ ಗೊಂದಲಗಳಿರುವುದಿಲ್ಲ. ಇಂಪ್ಲಾಂಟ್ ಅಳವಡಿಸಿಕೊಂಡ ದಿನವೇ ಮಹಿಳೆಯರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಎಂದಿನಂತೆ ಮಾಡಬಹುದು ಎಂದರು.
ಆರ್.ಸಿ.ಹೆಚ್ ಅಧಿಕಾರಿ ಡಾ. ಅಭಿನವ ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ಇಂದಿನಿಂದಲೇ ಈ ನೂತನ ಗರ್ಭನಿರೋಧಕ ವಿಧಾನ ಲಭ್ಯವಿದ್ದು, ಸಾರ್ವಜನಿಕರು ಯಾವುದೇ ತಪ್ಪು ತಿಳುವಳಿಕೆ ಹಾಗೂ ವದಂತಿಗಳಿಗೆ ಕಿವಿಗೊಡದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಆರು ಜನ ಫಲಾನುಭವಿಗಳಿಗೆ ಇಂಪ್ಲಾಂಟ್ ಹಾಕಲಾಯಿತು.

ಕಾರ್ಯಕ್ರಮದಲ್ಲಿ ತುಮಕೂರಿನ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪ್ರಭ, ಡಬ್ಲ್ಯೂ.ಹೆಚ್.ಓ ಪ್ರೋಗ್ರಾಮ್ ಆಫೀಸರ್ ಡಾ. ಮಯಾಂಕ್ ಖೇಡ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಚಂದ್ರಶೇಖರ್ ಕಂಬಾಳಿಮಠ, ಜಿಲ್ಲಾ ಆಸ್ಪತ್ರೆಯ ಸ್ತ್ರೀ ರೋಗ ತಜ್ಞರಾದ ಡಾ. ರವಿಕುಮಾರ್, ಡಾ. ಮಲ್ಲಪ್ಪ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ, ಕ್ವಾಲಿಟಿ ಕನ್ಸಲ್ಟೆಂಟ್ ಡಾ. ರೇಖಾ, ಶುಶ್ರೂಷಾಧಿಕಾರಿ ಸರಸ್ವತಿ, ಪ್ರೋಗ್ರಾಮ್ ಅಸಿಸ್ಟೆಂಟ್ ಭವ್ಯ ಹಾಗೂ ಇತರೆ ವೈದ್ಯಾಧಿಕಾರಿಗಳು ಮತ್ತು ಫಲಾನುಭವಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp