ಚಿತ್ರದುರ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಶಿವಶರಣ ಮಾದಾರ ಚನ್ನಯ್ಯ ಸಭಾಭವನ (ಲಿಡ್ಕರ್ ಭವನ) ದಲ್ಲಿ ಭೀಮಗಾಯನ ಕಾರ್ಯಕ್ರಮ ನಡೆಯಿತು.
ಭೀಮಗಾಯನ ಸ್ಮರಣೀಯ ಕಾರ್ಯಕ್ರಮ
ಈ ವೇಳೆ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಆರ್. ಶಿವಣ್ಣ ಗಂಜಿಗಟ್ಟೆ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಅನುಭವಿಸಿದ ನೋವು ಮತ್ತು ಹೋರಾಟದ ಫಲವಾಗಿ ಇಂದು ನಮಗೆ ಉತ್ತಮ ಬದುಕು ಹಾಗೂ ಸಂವಿಧಾನಾತ್ಮಕ ಹಕ್ಕುಗಳು ದೊರೆತಿವೆ. ಅವರ ವಿಚಾರಧಾರೆಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರವು ತನ್ನ ಆಡಳಿತ ವ್ಯವಸ್ಥೆಯಲ್ಲಿ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಎಂಬ ತತ್ವದಡಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಅಂಬೇಡ್ಕರ್ ಅವರ ಜೀವನದ ನೋವು- ನಲಿವುಗಳನ್ನು ಹಾಡುಗಳ ಮೂಲಕ ಜನರಿಗೆ ತಲುಪಿಸುವ ‘ಭೀಮಗಾಯನ’ ಒಂದು ಸ್ಮರಣೀಯ ಕಾರ್ಯಕ್ರಮವಾಗಿದೆ ಎಂದರು.
ಶೇ. 75 ರಷ್ಟು ಪ್ರವೇಶಾತಿ ಹಕ್ಕು
ಅಸ್ಪೃಶ್ಯತೆ ಎಂಬುದು ಒಂದು ಕರಾಳ ಆಚರಣೆಯಾಗಿತ್ತು. ಅಂಬೇಡ್ಕರ್ ಅವರ ಹೋರಾಟ, ಅವರು ರೂಪಿಸಿಕೊಟ್ಟ ಸಂವಿಧಾನದಿಂದಾಗಿ, ಸಮಾಜದಲ್ಲಿನ ಇಂತಹ ಪದ್ಧತಿಗಳನ್ನು ಕೊನೆಗಾಣಿಸಲು ಮುನ್ನಡಿಯಾಯಿತು. ಸಂವಿಧಾನವು ಪ್ರತಿಯೊಬ್ಬರಿಗೂ ಸಾಮಾಜಿಕ ಭದ್ರತೆ, ಆರ್ಥಿಕ ಸಮಾನತೆ ಮತ್ತು ರಾಜಕೀಯ ಸ್ಥಾನಮಾನಗಳನ್ನು ಕಲ್ಪಿಸಿದೆ. ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ಸಂವಿಧಾನ ನಮಗೆ ನೀಡಿದೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ಪಡೆಯುತ್ತಿರುವ ಉಚಿತ ಊಟ ಮತ್ತು ಶಿಕ್ಷಣದ ಸೌಲಭ್ಯಗಳು ಅಂಬೇಡ್ಕರ್ ಅವರು ಹಾಕಿಕೊಟ್ಟ ಭದ್ರ ಬುನಾದಿಯ ಫಲವಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಮೂಲಕ ಶೇ. 75 ರಷ್ಟು ಪ್ರವೇಶಾತಿ ಹಕ್ಕನ್ನು ಸಂವಿಧಾನಬದ್ಧವಾಗಿ ನೀಡಲಾಗಿದೆ. ಪ್ರಸ್ತುತ ಸಮಾಜದಲ್ಲಿ ಅಂಬೇಡ್ಕರ್ ಅವರು ಪ್ರತಿಪಾದಿಸಿದ ‘ಭ್ರಾತೃತ್ವ’ ಎಂಬ ಪದದ ಅರ್ಥ ಬಹಳ ಮುಖ್ಯವಾಗಿದೆ. ಸಮಾಜದ ಎಲ್ಲಾ ವರ್ಗದವರು ಈ ಗುಣವನ್ನು ಅಳವಡಿಸಿಕೊಂಡು ಸೌಹಾರ್ದತೆಯಿಂದ ಬದುಕಬೇಕಾದ ಅಗತ್ಯವಿದೆ ಎಂದು ಆರ್.ಶಿವಣ್ಣ ಹೇಳಿದರು.
ಅಂಬೇಡ್ಕರ್ ಅವರ ವಿಚಾರಧಾರೆ ಎಲ್ಲರಿಗೂ ತಲುಪಲಿ
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ತಾಜ್ಪೀರ್ ಮಾತನಾಡಿ, ರಾಜ್ಯದ 12 ಜಿಲ್ಲೆಗಳಲ್ಲಿ “ಭೀಮಗಾಯನ” ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅದರಲ್ಲಿ ಚಿತ್ರದುರ್ಗ ಜಿಲ್ಲೆಯನ್ನು ಮೊದಲ ವರ್ಷವೇ ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ವಾರ್ತಾ ಇಲಾಖೆ, ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳು ಈ ಕಾರ್ಯಕ್ರಮ ಆಯೋಜಿಸುತ್ತಿವೆ. ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆಯನ್ನೂ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಪ್ರತಿ ಶಾಲೆಯಿಂದ ಕನಿಷ್ಠ 10 ರಿಂದ 20 ವಿದ್ಯಾರ್ಥಿಗಳು ಭಾಗವಹಿಸುವುದನ್ನು ಕಡ್ಡಾಯಗೊಳಿಸಬೇಕು. ಇದರಿಂದ ಎಲ್ಲಾ ಶಾಲಾ ಮಕ್ಕಳಿಗೂ ಅಂಬೇಡ್ಕರ್ ಅವರ ವಿಚಾರಧಾರೆಗಳು ತಲುಪಲು ಸಾಧ್ಯವಾಗುತ್ತದೆ. ಮಾರ್ಚ್ ತಿಂಗಳು ಪರೀಕ್ಷಾ ಸಮಯವಾಗಿರುವುದರಿಂದ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಪ್ರತಿವರ್ಷ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಆಯೋಜಿಸಿದರೆ ಹೆಚ್ಚು ಅನುಕೂಲಕರ ಎಂದು ತಾಜ್ಪೀರ್ ಅವರು ಅಭಿಪ್ರಾಯಪಟ್ಟರು.
ನೋಟುಗಳಲ್ಲಿ ಮುದ್ರಣವಾಲಿ ಅಂಬೇಡ್ಕರ್ ಭಾವಚಿತ್ರ
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ ಮಾತನಾಡಿ, ಅಂಬೇಡ್ಕರ್ ಅವರು ದೇಶಕ್ಕೆ ಶಕ್ತಿಯಾಗಿದ್ದು, ಅಸ್ಪೃಶ್ಯ ಹಾಗೂ ಶೋಷಿತ ಸಮುದಾಯಗಳಿಗೆ ಸಂವಿಧಾನದ ಮೂಲಕ ಹಕ್ಕುಗಳನ್ನು ನೀಡಿದ್ದಾರೆ. ಅಂಬೇಡ್ಕರ್ ಅವರ ರಾಷ್ಟ್ರಪ್ರೇಮವನ್ನು ಗೌರವಿಸಲು ಅವರ ಭಾವಚಿತ್ರವನ್ನು ಕರೆನ್ಸಿ ನೋಟುಗಳಲ್ಲಿ ಮುದ್ರಿಸಬೇಕು ಎಂದರು.
ಸಂವಿಧಾನ ಶಿಲ್ಪಿಯ ಸಾಧನೆ ಯುವಜನತೆಗೆ ದಾರಿದೀಪ
ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂ ರಾವ್ ಪ್ರಾಸ್ತಾವಿಕಾಗಿ ಮಾತನಾಡಿ, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮಕ್ಕಳಲ್ಲಿ ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯದ 12 ಜಿಲ್ಲೆಗಳಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ “ಭೀಮಗಾಯನ” ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಂವಿಧಾನದ ಆಶಯಗಳನ್ನು ಹಾಡುಗಳ ಮೂಲಕ ಜನರಿಗೆ ತಲುಪಿಸುವುದಾಗಿದೆ. ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ಸಂವಿಧಾನ ಶಿಲ್ಪಿ ಮಾತ್ರವಲ್ಲ, ಅವರು ಜ್ಞಾನದ ಅಪ್ರತಿಮ ಸಂಕೇತ. ಅವರ ಜೀವನದ ಸಾಧನೆ ಮತ್ತು ತತ್ವಗಳು ಇಂದಿನ ತಲೆಮಾರಿಗೆ ದಾರಿದೀಪವಾಗಬೇಕು. ‘ಭೀಮರಾವ್ ಅಂಬೇಡ್ಕರ್ ಅವರು ಬಾಲ್ಯದಲ್ಲಿ ಅಸ್ಪೃಶ್ಯತೆಯಂತಹ ಕಡು ಕಷ್ಟಗಳನ್ನು ಅನುಭವಿಸಿದರೂ, ಶಿಕ್ಷಣ ಮತ್ತು ಜ್ಞಾನದ ಮೂಲಕ ಜಗತ್ತನ್ನೇ ಗೆದ್ದವರು. ಆಗಿನ ಮಾಜಿ ಪ್ರಧಾನಿ ನೆಹರೂ ಅವರು ಅಂಬೇಡ್ಕರ್ ಅವರನ್ನು ದೇಶದ ವಜ್ರದಂತಹ ಸಚಿವ ಎಂದು ಬಣ್ಣಿಸಿದ್ದರು’ ಎಂಬುದಾಗಿ ನೆನಪಿಸಿಕೊಂಡರು.
ಜ್ಞಾನ ಮತ್ತು ಪ್ರತಿಭೆ ಎಂಬುದು ಯಾರ ಸ್ವತ್ತೂ ಅಲ್ಲ. ಯಾರು ಶ್ರಮ ವಹಿಸುತ್ತಾರೋ ಮತ್ತು ಯಾರಲ್ಲಿ ಸಾಮಥ್ರ್ಯವಿದೆಯೋ ಅವರಿಗೆ ಮಾತ್ರ ಅದು ದಕ್ಕಲು ಸಾಧ್ಯ ಎಂಬುದನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಜೀವನದ ಮೂಲಕ ಜಗತ್ತಿಗೆ ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬುದ್ದ ಬಸವ ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ವಾರ್ತಾಧಿಕಾರಿ ತುಕಾರಾಂ ರಾವ್ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಆಕಾಶವಾಣಿಯ ಡಾ.ನವೀನ್ ಮಸ್ಕಲ್ ಕಾರ್ಯಕ್ರಮ ನಿರೂಪಿದರು.
ಮೈಸೂರು ಜಿಲ್ಲೆಯ ಸರಗೂರಿನ ಅಮ್ಮ ವಸುಂಧರೆ ಕಲಾತಂಡ, ಭೀಮಗಾಯನ ಸಮಾನತೆಯ ಸ್ವರ ಸಂಭ್ರಮದಲ್ಲಿ ಅಂಬೇಡ್ಕರ್ ಕುರಿತಾದ ನಿಮಗಿದೋ ನಮನ ಜೈ ಭೀಮ್, ಭೀಮನಂತಾಗುವ ಆಸೆ, ಜೈ ಭೀಮ್ ಮಹಾರಾಷ್ಟ್ರದ ಹಣತೆ ನೀನೊಂದು ಮುಗಿಯದ ಚರಿತೆ, ಜಯ ಹೇ ಭಾರತ ಭಾಗ್ಯವಿಧಾತ ಮುಂತಾದ ಅದ್ಭುತವಾದ ಗೀತೆಗಳನ್ನು ಹಾಡಿದರು. ಇದರೊಂದಿಗೆ ಬುದ್ದ ಕುರಿತಾದ ಸುವ್ವಮ್ಮ ಸುವ್ವಲಾಲಿ, ಬುದ್ದನ ಗೀತೆ, ಬುದ್ಧಂ ದಮ್ಮಮ್ ಸುಂದರಂ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಕೊನೆಯಲ್ಲಿ ಕುಲದಲ್ಲಿ ಕೀಳ್ಯಾವುದೋ ಗೀತೆ ಹಾಡುವ ಮೂಲಕ ಸಭಿಕರನ್ನು ರಂಜಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪುಷ್ಪಲತಾ ಭಾವಿಮಠ, ಆಹಾರ ಮತ್ತು ನಾಗರಿಕ ಸರಬಾಜು ಇಲಾಖೆ ಜಂಟಿ ನಿರ್ದೇಶಕ ಸಿದ್ರಾಮ ಮಾರಿಹಾಳ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳೆಸಿಂಘೆ, ತಹಶೀಲ್ದಾರ್ ಗೋವಿಂದರಾಜು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರೇಖಾ, ಕಾರ್ಮಿಕ ಅಧಿಕಾರಿ ಅನಿಲ್ ಸೇರಿದಂತೆ ದಲಿತ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರುಗಳು, ಇತರೆ ಸಂಘಟನೆಗಳ ಪದಾಧಿಕಾರಿಗಳು, ಎಲ್ಲ ಸಮಾಜದ ಮುಖಂಡರುಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಭೀಮಗಾಯನದ ರಸದೌತಣವನ್ನು ಆಸ್ವಾದಿಸಿದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ. ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್
ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More