ಚಿತ್ರದುರ್ಗ: ಕಾರ್ತಿಕೋತ್ಸವದಲ್ಲಿ ಜಾತಿ ನಿಂದನೆ ಮಾಡಿದ ನಾಲ್ವರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ ಕೋರ್ಟ್!

crime news madhyakarnatakalive news

—Election Update—

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್.ಗೌರಿಪುರ ಗ್ರಾಮದಲ್ಲಿ ನಡೆದಿದ್ದ ಜಾತಿ ನಿಂದನೆ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಘಟನೆಯ ಹಿನ್ನೆಲೆ:

೨೦೨೨ ರಲ್ಲಿ ಚಳ್ಳಕೆರೆ ತಾಲೂಕಿನ ಎನ್.ಗೌರಿಪುರ ಗ್ರಾಮದ ಶ್ರೀ ಉಮಾ ಮಹೇಶ್ವರ ದೇವರ ಕಾರ್ತಿಕೋತ್ಸವದ ಸಂದರ್ಭದಲ್ಲಿ ಆದಿಕರ್ನಾಟಕ ಜಾತಿಗೆ ಸೇರಿದ ಡಿ.ಓಬಣ್ಣ ತಂದೆ ದುರ್ಗಪ್ಪ ಮತ್ತು ಇತರರು ದೇವರಿಗೆ ಡ್ರಮ್ಸ್, ವಾದ್ಯ ಹಾಗೂ ತಮಟೆಗಳ ಮೂಲಕ ಸೇವೆ ಸಲ್ಲಿಸುತ್ತಿದ್ದರು. ಈ ಸಮಯದಲ್ಲಿ ಲಿಂಗಾಯತ ಜಾತಿಗೆ ಸೇರಿದ ಆರೋಪಿಗಳು ಹಬ್ಬದ ಜಾಗದಲ್ಲಿ ಜಾತಿ ನಿಂದನೆ ಮಾಡಿ, ‘ನಿಮ್ಮನ್ನು ಸುಟ್ಟುಬಿಡುತ್ತೇವೆ’ ಎಂದು ಬೆದರಿಕೆ ಹಾಕಿ, ಕೈಕಾಲುಗಳಿಂದ ಹಲ್ಲೆ ನಡೆಸಿದ್ದರು. ಈ ಕುರಿತು ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ತನಿಖೆ ಮತ್ತು ಕೋರ್ಟ್ ತೀರ್ಪು:

ಅಂದಿನ ಚಳ್ಳಕೆರೆ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ (DySP) ಶ್ರೀ ಶ್ರೀಧರ ವೆಂಕಟರಮಣ ಶೆಟ್ಟಿ ಅವರು ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಚಿತ್ರದುರ್ಗದ ಮಾನ್ಯ ೨ನೇ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಸುದೀರ್ಘವಾಗಿ ನಡೆಯಿತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ನಾಗವೇಣಿ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.

ಆರೋಪಿಗಳ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ, ದಿನಾಂಕ ೧೯.೦೬.೨೦೨೬ ರಂದು ಮಾನ್ಯ ನ್ಯಾಯಾಧೀಶರಾದ ಶ್ರೀ ಗಂಗಾಧರ ಚನ್ನಬಸಪ್ಪ ಹಡಪದ ಅವರು ತೀರ್ಪು ಪ್ರಕಟಿಸಿದ್ದಾರೆ. ನಾಲ್ಕು ಜನ ಆರೋಪಿಗಳಿಗೆ ತಲಾ ೦೬ ತಿಂಗಳ ಸಾದಾ ಶಿಕ್ಷೆ ಹಾಗೂ ತಲಾ ೧,೦೦೦/- ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಪೊಲೀಸ್ ತಂಡಕ್ಕೆ ಶ್ಲಾಘನೆ:

ಪ್ರಕರಣವನ್ನು ಅತ್ಯಂತ ದಕ್ಷತೆಯಿಂದ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾದ ಅಂದಿನ ತನಿಖಾಧಿಕಾರಿ ಶ್ರೀ ಶ್ರೀಧರ ವೆಂಕಟರಮಣ ಶೆಟ್ಟಿ (ಡಿ.ವೈ.ಎಸ್.ಪಿ), ತನಿಖಾ ಸಹಾಯಕರು, ಕೋರ್ಟ್ ಸಿಬ್ಬಂದಿ ಹಾಗೂ ಕೋರ್ಟ್ ಮಾನಿಟರಿಂಗ್ ಸೆಲ್ ವಿಭಾಗದ ಕಾರ್ಯವನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ಶ್ರೀ ರಂಜಿತ್ ಕುಮಾರ್ ಬಂಡಾರು, ಐಪಿಎಸ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp