ಸಂಚಾರಿ ನಿಯಮ ಉಲ್ಲಂಘನೆ ದಂಡದಲ್ಲಿ ಶೇ.50 ರಿಯಾಯಿತಿ: ಚಿತ್ರದುರ್ಗದಲ್ಲಿ ಜಾಗೃತಿ ಅಭಿಯಾನಕ್ಕೆ ಚಾಲನೆ

traffic-fine-discount-awareness-campaign-chitradurga

—Election Update—

ಚಿತ್ರದುರ್ಗ: ಸಂಚಾರಿ ನಿಯಮಗಳು ಇರುವುದು ಕೇವಲ ಪೊಲೀಸರು, ಆರ್‍ಟಿಒ ಅಧಿಕಾರಿಗಳಿಗೆ ಹೆದರಿ ಪಾಲಿಸುವುದಕ್ಕಲ್ಲ, ಬದಲಿಗೆ ನಮ್ಮ ಮತ್ತು ನಮ್ಮ ಕುಟುಂಬದ ಸುರಕ್ಷತೆಗಾಗಿ ಎಂಬುದನ್ನು ಪ್ರತಿಯೊಬ್ಬ ವಾಹನ ಸವಾರನೂ ಅರಿತುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುದೀನ್ ಕುಮಾರ್ ತಿಳಿಸಿದರು.

ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿ ಸಹಯೋಗದಲ್ಲಿ ಇದೇ ಜೂನ್ 21 ರಿಂದ ಜುಲೈ 10 ರವರೆಗೆ ‘ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತದ ಮೇಲಿನ ಶೇ.50 ರಿಯಾಯಿತಿ’ ಕುರಿತ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.

ನಾವು ವಾಹನ ಚಲಾಯಿಸುವ ಮುನ್ನ ಟೈರ್‍ನಲ್ಲಿ ಗಾಳಿ ಇದೆಯೇ, ಟ್ಯಾಂಕ್‍ನಲ್ಲಿ ಪೆಟ್ರೋಲ್ ಇದೆಯೇ ಎಂದು ನೋಡಿಕೊಳ್ಳುತ್ತೇವೆ. ಆದರೆ ಚಾಲನಾ ಪರವಾನಗಿ, ವಾಹನ ವಿಮೆ, ಎಫ್‍ಸಿ ಹಾಗೂ ಸೂಕ್ತ ಪರ್ಮಿಟ್ ಇದೆಯೇ ಎಂದು ಗಮನಿಸುವುದಿಲ್ಲ. ತುರ್ತು ಸಂದರ್ಭದಲ್ಲಿ ಅಥವಾ ಆತುರದಲ್ಲಿ ಸಂಚಾರಿ ನಿಯಮಗಳನ್ನು ಗಾಳಿಗೆ ತೂರುತ್ತೇವೆ. ಆಸ್ಪತ್ರೆಯಲ್ಲಿರುವವರನ್ನು ಉಳಿಸಲು ಹೋಗುವ ಆತುರದಲ್ಲಿ ನಾವೇ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರುವಂತಹ ಪರಿಸ್ಥಿತಿ ತಂದುಕೊಳ್ಳಬಾರದು ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಪ್ರತಿಯೊಬ್ಬ ಸವಾರನೂ ವಾಹನ ಚಲಾಯಿಸುವಾಗ ಮನೆಯಲ್ಲಿ ಕಾಯುತ್ತಿರುವ ವಯಸ್ಸಾದ ತಂದೆ-ತಾಯಿ, ಪತ್ನಿ ಮತ್ತು ಮಕ್ಕಳ ಮುಖಗಳನ್ನು ಒಂದು ಕ್ಷಣ ನೆನಪಿಸಿಕೊಳ್ಳಬೇಕು. ಆರ್‍ಟಿಒ ಅಥವಾ ಪೊಲೀಸ್ ವ್ಯವಸ್ಥೆ ಪ್ರತಿಯೊಬ್ಬರ ಹಿಂದೆ ನಿಲ್ಲಲು ಸಾಧ್ಯವಿಲ್ಲ. ನಾವೇ ಸ್ವಯಂ ಪ್ರೇರಿತರಾಗಿ ಬುದ್ಧಿವಂತರಾಗಬೇಕು. ನಮ್ಮ ಸಣ್ಣ ಅಜಾಗರೂಕತೆಯ ತಪ್ಪಿನಿಂದ ರಸ್ತೆಯಲ್ಲಿ ಹೋಗುವ ಇತರ ನಿರಪರಾಧಿಗಳ ಜೀವಕ್ಕೂ ಕುತ್ತು ತರಬಾರದು ಎಂದು ಕಿವಿಮಾತು ಹೇಳಿದರು.

ಅಪಘಾತಗಳು ಸಂಭವಿಸಿದಾಗ ಅಥವಾ ಸಾವು-ನೋವುಗಳನ್ನು ಕಣ್ಣಾರೆ ಕಂಡಾಗ ಮಾತ್ರ ಜಾಗೃತಿ ಮತ್ತು ವೈರಾಗ್ಯದ ಮಾತುಗಳನ್ನಾಡುವುದು ‘ಸ್ಮಶಾನ ವೈರಾಗ್ಯ’ವಿದ್ದಂತೆ. ಸ್ಮಶಾನದಿಂದ ಹೊರಗೆ ಬಂದ ತಕ್ಷಣ ನಿಯಮಗಳನ್ನು ಮರೆಯುವ ಪ್ರವೃತ್ತಿ ಬದಲಾಗಬೇಕು. ದ್ವಿಚಕ್ರ ವಾಹನದಲ್ಲಿ 5-6 ಜನ ಕುಳಿತು ಪ್ರಯಾಣಿಸುವುದು, ಪುಟ್ಟ ಮಕ್ಕಳನ್ನು ಮುಂದಿಟ್ಟುಕೊಂಡು ಬೇಜವಾಬ್ದಾರಿತನದಿಂದ ವಾಹನ ಚಲಾಯಿಸುವುದು ಅತ್ಯಂತ ಅಪಾಯಕಾರಿ. ಇಂತಹ ವರ್ತನೆಗಳಿಗೆ ಕಡಿವಾಣ ಬಿದ್ದಾಗ ಮಾತ್ರ ಸುಭದ್ರ ಸಮಾಜ ನಿರ್ಮಾಣ ಸಾಧ್ಯ ಎಂದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ 50 ರಷ್ಟು ವಿಶೇಷ ರಿಯಾಯಿತಿ ನೀಡಿದೆ. ಇದು ತಪ್ಪು ಮಾಡಿದವರಿಗೆ ಸಿಕ್ಕ ಶಿಕ್ಷೆಯ ವಿನಾಯಿತಿಯಲ್ಲ, ಬದಲಿಗೆ ನಾಗರಿಕರು ತಮ್ಮ ಮೇಲಿರುವ ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಕಾನೂನು ಪಾಲಕರಾಗಲು ಒದಗಿಸಿರುವ ಉತ್ತಮ ಅವಕಾಶವಾಗಿದೆ ಎಂದರು ಹೇಳಿದರು.

ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಗೆ ಮಾತನಾಡಿ, ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಕಚೇರಿಯ ಮತ್ತು ಅನ್ಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗಳಿಂದ ಸಾರಿಗೆ ಇಲಾಖೆ ವತಿಯಿಂದ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಸಂಬಂಧ ವಾಹನ ಮಾಲೀಕರ ವಿರುದ್ಧ ಇಲಾಖಾ ಶಾಸನ ಕ್ರಮದಡಿ 1991-92ನೇ ಸಾಲಿನಿಂದ 2021-22ರ ಅವಧಿಯಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜಿ ದಂಡ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿ ಇಳಿಮುಖಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಈ ಆದೇಶದನ್ವಯ ಇದೇ ಜೂನ್ 21 ರಿಂದ ಜುಲೈ 10 ರವರೆಗೆ ಕಚೇರಿ ಅವಧಿಯಲ್ಲಿ ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ, 1991-92ನೇ ಸಾಲಿನಿಂದ 2021-22ರ ಅವಧಿಯಲ್ಲಿ ಪ್ರಕರಣ ದಾಖಲೆಯಾಗಿರುವ ವಾಹನಗಳ ನೋಂದಣಿ ಮಾಲೀಕರು ತಮ್ಮ ವಾಹನಗಳ ಮೇಲೆ ದಾಖಲಾದ ಡಿಎಸ್‍ಎ ಪ್ರಕರಣಗಳ ವಿಲೇ ಸಂಬಂಧ ಕಚೇರಿಯನ್ನು ಸಂಪರ್ಕಿಸಿ ರಾಜಿ ದಂಡದ ಮೊತ್ತದ ಶೇ.50ರಷ್ಟು ರಿಯಾಯಿತಿ ಪಡೆದು ಪ್ರಕರಣಗಳನ್ನು ವಿಲೇಗೊಳಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು, ಸರ್ಕಾರದ ಈ ಆದೇಶದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯ ಅಧೀಕ್ಷಕ ಸಿ.ಡಿ.ಹೇಮಂತ್ ಕುಮಾರ್, ಮೋಟಾರು ವಾಹನ ನಿರೀಕ್ಷಕ ಪಿ.ಟಿ.ರಾಜೇಶ್ ಸೇರಿದಂತೆ ಮತ್ತಿತರರು ಇದ್ದರು.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp