ಚಿತ್ರದುರ್ಗ (ಮಧ್ಯ ಕರ್ನಾಟಕ ಲೈವ್): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ಸುದೀರ್ಘ ರಾಜಕೀಯ ಜೀವನದ ಹಿನ್ನೆಲೆಯಲ್ಲಿ ಕೋಟೆನಾಡು ಚಿತ್ರದುರ್ಗದಲ್ಲಿ ಮೇ 8ರಂದು ಮೈಸೂರು ದಸರಾ ಮಾದರಿಯ ಬೃಹತ್ ಹಾಗೂ ಐತಿಹಾಸಿಕ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಿಜೆಪಿ ಒಬಿಸಿ ರಾಜ್ಯ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, “ಬಿಎಸ್ವೈ ಅವರ ಪುರಪ್ರವೇಶದ ಈ ಮೆರವಣಿಗೆ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿಯುವಂತೆ ಸಿದ್ಧತೆ ಮಾಡಲಾಗುತ್ತಿದೆ. ನಗರದ ಕನಕ ವೃತ್ತದಿಂದ ಆರಂಭವಾಗುವ ಈ ವೈಭವದ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದ್ದು, ಸಾವಿರಾರು ಜನ ಈ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ” ಎಂದು ತಿಳಿಸಿದರು.
ಮೆರವಣಿಗೆಯ ಪ್ರಮುಖ ಆಕರ್ಷಣೆಗಳು:
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
-
6 ವಿಶೇಷ ಸ್ತಬ್ಧಚಿತ್ರಗಳು: ಮಂಡ್ಯದ ಬೂಕನಕೆರೆಯಿಂದ ಶಿಕಾರಿಪುರಕ್ಕೆ ಬಂದು ಜನಸಂಘದ ಮೂಲಕ ರಾಜಕೀಯ ಪ್ರವೇಶಿಸಿದ ಬಿಎಸ್ವೈ ಅವರ ಹೋರಾಟದ ಬದುಕನ್ನು ಕಟ್ಟಿಕೊಡುವ 6 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿರಲಿವೆ.
-
ಎಲ್ಇಡಿ ಪರದೆಗಳಲ್ಲಿ ಹೋರಾಟದ ಅನಾವರಣ: ಕೃಷಿಕರು, ಬಡವರು, ಶೋಷಿತರು ಹಾಗೂ ಮಹಿಳೆಯರ ಪರವಾಗಿ ಅವರು ಮಾಡಿದ ಹೋರಾಟಗಳು, ತುರ್ತು ಪರಿಸ್ಥಿತಿಯ ಜೈಲುವಾಸ, ಜೀತ ವಿಮುಕ್ತಿ ಹಾಗೂ ಬಗರ್ಹುಕುಂ ಹೋರಾಟಗಳನ್ನು ಎಲ್ಇಡಿ ಪರದೆಗಳ ಮೇಲೆ ತಂತ್ರಜ್ಞಾನದ ಮೂಲಕ ಪ್ರದರ್ಶಿಸಲಾಗುತ್ತದೆ.
-
ಜನಪರ ಯೋಜನೆಗಳ ಕಲ್ಪಿತ ಪ್ರದರ್ಶನ: ಮುಖ್ಯಮಂತ್ರಿಯಾದ ಬಳಿಕ ಅವರು ಜಾರಿಗೆ ತಂದ ಭಾಗ್ಯಲಕ್ಷ್ಮಿ, ಆರೋಗ್ಯ ಕವಚ, ಸೈಕಲ್ ವಿತರಣೆಯಂತಹ ಯೋಜನೆಗಳ ಕುರಿತು ಕಲಾವಿದರು ವಿಶೇಷ ಪ್ರದರ್ಶನ ನೀಡಲಿದ್ದಾರೆ.
-
ಕಲಾತಂಡಗಳು ಹಾಗೂ ನಾರಿಶಕ್ತಿ: ಮೆರವಣಿಗೆಯಲ್ಲಿ 1000 ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಲಿದ್ದಾರೆ. ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ 25 ರಿಂದ 40 ವೈವಿಧ್ಯಮಯ ಜಾನಪದ ಕಲಾತಂಡಗಳು ಪಾಲ್ಗೊಳ್ಳಲಿವೆ.
-
ರೈತರ ಭಾಗಿ: ಮೆರವಣಿಗೆಗೂ ಮುನ್ನ ಚಂದ್ರವಳ್ಳಿ ಮೈದಾನದಲ್ಲಿ 2500 ರೈತರು ಬೃಹತ್ ರಾಶಿ ಪೂಜೆ ನಡೆಸಿಕೊಡಲಿದ್ದಾರೆ. ಮೆರವಣಿಗೆಯಲ್ಲಿ ನೇಗಿಲು ಹೊತ್ತ 500 ರೈತರು ಹೆಜ್ಜೆ ಹಾಕಿದರೆ, ವೀರವನಿತೆ ಒನಕೆ ಓಬವ್ವನ ವೇಷದಲ್ಲಿ ಒನಕೆ ಹಿಡಿದ 200ಕ್ಕೂ ಹೆಚ್ಚು ಮಹಿಳೆಯರು ನಾರಿಶಕ್ತಿಯನ್ನು ಪ್ರದರ್ಶಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಂಪತ್ಕುಮಾರ್, ಅಶ್ವಿನಿ, ಬಸವರಾಜ್, ಸಿದ್ದಾಪುರ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಮೇ 9ರ ‘ಅಭಿಮಾನೋತ್ಸವ’ಕ್ಕೆ ದಾವಣಗೆರೆಯಿಂದ 25 ಸಾವಿರಕ್ಕೂ ಹೆಚ್ಚು ಜನರ ಭಾಗಿ
ಚಿತ್ರದುರ್ಗದಲ್ಲಿ ಮೇ 9ರಂದು ನಡೆಯಲಿರುವ ‘ಯಡಿಯೂರಪ್ಪ ಅಭಿಮಾನೋತ್ಸವ’ ಕಾರ್ಯಕ್ರಮಕ್ಕೆ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ತೆರಳಲಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ್ ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಗುರುವಾರ ಮಾತನಾಡಿದ ಅವರು, “ಕಾರ್ಯಕರ್ತರನ್ನು ಕರೆದೊಯ್ಯಲು 104 ಬಸ್, 500ಕ್ಕೂ ಹೆಚ್ಚು ಕಾರು ಹಾಗೂ ಟ್ರ್ಯಾಕ್ಟರ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಹಳ್ಳಿಯಿಂದ ಜನರನ್ನು ಕರೆತರಲು ಮೂವರು ಮುಖಂಡರಿಗೆ ಜವಾಬ್ದಾರಿ ವಹಿಸಲಾಗಿದೆ” ಎಂದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, “ಶಿಕಾರಿಪುರ ಪುರಸಭೆ ಸದಸ್ಯರಾಗಿ ರಾಜಕೀಯ ಆರಂಭಿಸಿ ರಾಜ್ಯದ ಮುಖ್ಯಮಂತ್ರಿಯರೆಗೂ ಬೆಳೆದ ಯಡಿಯೂರಪ್ಪ ಅವರು ಎಲ್ಲ ವರ್ಗದ ಜನರಿಗೂ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಅವರ ಈ ಅಭಿಮಾನೋತ್ಸವದಲ್ಲಿ ದಾವಣಗೆರೆಯ ಎಲ್ಲಾ ಮಂಡಲಗಳಿಂದ ಒಟ್ಟು 1 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
