ಚಿತ್ರದುರ್ಗ: ಹೆಣ್ಣು ಮಕ್ಕಳ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಜಾರಿಗೆ ತಂದಿರುವ ಹೆಚ್ಪಿವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಶಿಕ್ಷಕರು ಮತ್ತು ಪೋಷಕರು ಸಕ್ರಿಯವಾಗಿ ಕೈಜೋಡಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಶನಿವಾರ ಪ್ರೌಢಾಶಾಲೆಗಳ ಮುಖ್ಯ ಶಿಕ್ಷಕರಿಗಾಗಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಹೆಚ್ಪಿವಿ ಲಸಿಕಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ 8ನೇ ತರಗತಿಯಲ್ಲಿ 11,103 ಹಾಗೂ 9ನೇ ತರಗತಿಯಲ್ಲಿ 12,462 ಹೆಣ್ಣುಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ 8 ಮತ್ತು 9ನೇ ತರಗತಿಯ ಒಟ್ಟು 23,565 ವಿದ್ಯಾರ್ಥಿನಿಯರಿಗೆ ಈ ಲಸಿಕೆ ನೀಡಲು ಸರ್ಕಾರ ಕಾರ್ಯಕ್ರಮ ರೂಪಿಸಿದೆ. ಸರ್ಕಾರಿ, ಅನುದಾನಿತ, ಅನುದಾನರಹಿತ, ನವೋದಯ ಹಾಗೂ ಸಿಬಿಎಸ್ಇ, ಐಸಿಎಸ್ಇ ಶಾಲೆಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಓದುತ್ತಿರುವ ಹೆಣ್ಣುಮಕ್ಕಳಿಗೆ ಈ ಲಸಿಕೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.
ಹೆಚ್ಪಿವಿ ಲಸಿಕೆಯ ಮಹತ್ವದ ಕುರಿತು ಪೋಷಕರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಇದೇ ಮೇ 25 ರಿಂದ 30 ರವರೆಗೆ ಒಂದು ವಾರದ ಅವಧಿಯಲ್ಲಿ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಪೋಷಕರ ಮತ್ತು ಶಿಕ್ಷಕರ ವಿಶೇಷ ಸಭೆಯನ್ನು ಕರೆಯಬೇಕು ಎಂದು ಸೂಚಿಸಿದ ಅವರು, ಸಭೆಯಲ್ಲಿ ಲಸಿಕೆಯಿಂದಾಗುವ ಪ್ರಯೋಜನಗಳು ಮತ್ತು ಅದರ ಮಹತ್ವವನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟು, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಪ್ರೇರೇಪಿಸಬೇಕು ಎಂದರು.
ಭವಿಷ್ಯದಲ್ಲಿ ಹೆಣ್ಣುಮಕ್ಕಳಿಗೆ ಬರಬಹುದಾದ ರೋಗರುಜಿನಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಅತ್ಯಂತ ಕಾಳಜಿಯಿಂದ ಈ ಉಚಿತ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಿಲ್ಲೆಯ ಯಾವುದೇ ಒಬ್ಬ ಅರ್ಹ ಹೆಣ್ಣುಮಗು ಕೂಡ ಈ ಲಸಿಕೆಯಿಂದ ವಂಚಿತರಾಗಬಾರದು, ಎಲ್ಲರೂ ಸ್ವಯಂಪ್ರೇರಿತರಾಗಿ ಇದರಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ನೂರರಷ್ಟು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ ಮಾತನಾಡಿ, ಪೋಲಿಯೋ ಮತ್ತು ಸ್ಮಾಲ್ಪಾಕ್ಸ್ನಂತಹ ಮಾರಕ ಕಾಯಿಲೆಗಳನ್ನು ದೇಶದಿಂದ ನಿರ್ಮೂಲನೆ ಮಾಡಲು ಲಸಿಕಾ ಅಭಿಯಾನಗಳು ಹೇಗೆ ಯಶಸ್ವಿಯಾದವೋ, ಅದೇ ರೀತಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಹೆಚ್.ಪಿ.ವಿ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದರು.
ಕೋವಿಡ್ ನಂತರದ ದಿನಗಳಲ್ಲಿ ಸಾರ್ವಜನಿಕರಲ್ಲಿ ಲಸಿಕೆಗಳ ಬಗ್ಗೆ ಜಾಗೃತಿ ಮತ್ತು ತಿಳುವಳಿಕೆ ಹೆಚ್ಚಾಗಿದ್ದರೂ, ಹೆಚ್.ಪಿ.ವಿ ಲಸಿಕೆಯ ಬಗ್ಗೆ ಇನ್ನೂ ಹೆಚ್ಚಿನ ಪ್ರಚಾರದ ಅಗತ್ಯವಿದೆ. ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್ನಿಂದ ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಲಸಿಕೆಯ ಮಹತ್ವ ಮನವರಿಕೆ ಮಾಡಿಕೊಟ್ಟು ಅವರನ್ನು ಪ್ರೇರೇಪಿಸುವ ಕೆಲಸವನ್ನು ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಮಾಡಬೇಕು ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಸ್ತುತ ವಿವಿಧ ಕಾಯಿಲೆಗಳ ತಡೆಗಾಗಿ 12 ಪ್ರಮುಖ ಲಸಿಕೆಗಳನ್ನು ನೀಡಲಾಗುತ್ತಿದ್ದು, ಅದಕ್ಕೆ ಈಗ ಹೆಚ್.ಪಿ.ವಿ ಲಸಿಕೆಯೂ ಸೇರ್ಪಡೆಯಾಗಿದೆ. ಈ ಲಸಿಕಾ ಅಭಿಯಾನವನ್ನು ಜಿಲ್ಲೆಯಲ್ಲಿ ಸಂಪೂರ್ಣ ಯಶಸ್ವಿಗೊಳಿಸಲು ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಒಟ್ಟಾಗಿ ಶ್ರಮಿಸಬೇಕಿದೆ ಎಂದು ತಿಳಿಸಿದ ಅವರು, ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಗರ್ಭಕಂಠದ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ತಡೆಗಟ್ಟಲು ಹೆಚ್.ಪಿ.ವಿ ಲಸಿಕೆ ಅತ್ಯಂತ ಯಶಸ್ವಿಯಾಗಿದ್ದು, ಶೇ.90 ರಷ್ಟು ಲಸಿಕಾಕರಣದ ಗುರಿ ತಲುಪುವ ಮೂಲಕ ಈ ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದಾಗಿದೆ ಎಂದು ತಿಳಿಸಿದರು.
ಜಾಗತಿಕ ಮಟ್ಟದಲ್ಲಿ ಗರ್ಭಕಂಠದ ಕ್ಯಾನ್ಸರ್ ಮಹಿಳೆಯರನ್ನು ಕಾಡುವ ನಾಲ್ಕನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ. ಪ್ರತಿವರ್ಷ ವಿಶ್ವದಾದ್ಯಂತ ಸುಮಾರು 6.5 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು, 3 ಲಕ್ಷಕ್ಕೂ ಅಧಿಕ ಮಹಿಳೆಯರು ಇದರಿಂದ ಮೃತಪಡುತ್ತಿದ್ದಾರೆ. ಭಾರತದಲ್ಲಿಯೂ ಪ್ರತಿ 1 ಲಕ್ಷ ಮಹಿಳೆಯರಲ್ಲಿ ಸರಾಸರಿ 11 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಸಾವಿನ ಪ್ರಮಾಣವೂ ಹೆಚ್ಚಾಗಿದೆ. ಕಾಯಿಲೆ ಪತ್ತೆಯಾದವರಲ್ಲಿ ಶೇ.50 ರಷ್ಟು ಜನ ಸಾವನ್ನಪ್ಪುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳ ವದಂತಿ ನಂಬಬೇಡಿ: ಹೆಚ್ಪಿವಿ ಲಸಿಕೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ನಕಾರಾತ್ಮಕ ವಿಡಿಯೋ ಹಾಗೂ ಸುಳ್ಳು ವದಂತಿಗಳನ್ನು ಸಾರ್ವಜನಿಕರು ಮತ್ತು ಶಿಕ್ಷಕರು ನಂಬಬಾರದು ಎಂದು ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ ತಿಳಿಸಿದರು.
ಶಿಕ್ಷಕರು ಈ ಲಸಿಕೆಯ ಮಹತ್ವ ಅರಿತು, ಪೋಷಕರಲ್ಲಿ ಹಾಗೂ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುವ ಮೂಲಕ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಹೆಚ್ಪಿವಿ ಲಸಿಕಾ ಅಭಿಯಾನದ ಪೋಸ್ಟರ್ಗಳನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಡಿವೈಪಿಸಿ ಹನುಮಂತಪ್ಪ, ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಭಾಗ್ಯಜ್ಯೋತಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಗೋವಿಂದರೆಡ್ಡಿ, ಗೌರಮ್ಮ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಮುಖ್ಯ ಶಿಕ್ಷಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಯ ಪ್ರಾಂಶುಪಾಲರು, ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಹಿರಿಯ ಮೇಲ್ವಿಚಾರಕರು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆರೋಗ್ಯ ನಿರೀಕ್ಷಕರು, ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಎನ್ಎಸ್ಎಸ್ ಹಾಗೂ ನೆಹರು ಯುವ ಕೇಂದ್ರದ ಸಂಯೋಜಕರು ಇದ್ದರು.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
📩 ಸುದ್ದಿ ಕಳುಹಿಸಿ
madhayakarnatakalive@gmail.com